ಬೆಳಗಾವಿ: ಮದ್ಯ ಸೇವಿಸಲು ಹಣ ನೀಡುವಂತೆ ಪೀಡಿಸುತ್ತಿದ್ದ ಪತಿಯನ್ನು ಪತ್ನಿಯೇ ಕೊಲೆ ಮಾಡಿದ ಘಟನೆ ತಡವಾಗಿ ಗೊತ್ತಾಗಿದೆ.
ಚಿಕ್ಕೋಡಿ ತಾಲ್ಲೂಕಿನ ಉಮರಾಣಿಯ ಶ್ರೀಮಂತ ರಾಮಪ್ಪ ಇಟ್ನಾಳೆ (50) ಕೊಲೆಯಾದವರು. ಸಾವಿತ್ರಿ ಇಟ್ನಾಳೆ (30) ಕೊಲೆ ಮಾಡಿದ ಮಹಿಳೆ.
‘ಕೊಲೆಗೀಡಾದ ಶ್ರೀಮಂತ ವಿಪರೀತ ಮದ್ಯ ವ್ಯಸನಿಯಾಗಿದ್ದ. ಮದ್ಯ ಸೇವನೆಗೆ ಹಣ ಕೊಡುವಂತೆ ಸತತವಾಗಿ ಪತ್ನಿಗೆ ಪೀಡಿಸುತ್ತಿದ್ದ. ಅವಳ ಹೆಸರಿನಲ್ಲಿದ್ದ ನಿವೇಶನವನ್ನೂ ಮಾರಿ ಹಣ ಕೊಡುವಂತೆ ಒತ್ತಾಯಿಸುತ್ತಿದ್ದ. ಕಿರುಕುಳ ತಾಳಲಾರದೆ, ಡಿ.8ರಂದು ಮನೆ ಮುಂದಿನ ಕಟ್ಟೆ ಮೇಲೆ ಮಲಗಿದ್ದ ಆತನ ಕುತ್ತಿಗೆ ಹಿಸುಕಿ ಪತ್ನಿ ಸಾವಿತ್ರಿ ಕೊಲೆ ಮಾಡಿದ್ದಾಳೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಇಲ್ಲಿ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
‘ಸಾವಿತ್ರಿ ಮಾರಕಾಸ್ತ್ರ ಬಳಸಿ, ಶ್ರೀಮಂತನ ದೇಹವನ್ನು ಎರಡು ತುಂಡಾಗಿ ಕತ್ತರಿಸಿದ್ದಾಳೆ. ನಂತರ ಪ್ಲಾಸ್ಟಿಕ್ ಚೀಲದಲ್ಲಿ ತೆಗೆದುಕೊಂಡು ಹೋಗಿ, ಕೃಷಿಭೂಮಿಯಲ್ಲಿ ಎಸೆದಿದ್ದಾಳೆ. ಮನೆಯಲ್ಲಿ ಬಿದ್ದ ರಕ್ತದ ಕಲೆಗಳನ್ನು ಶುಚಿಗೊಳಿಸಿದ್ದಾಳೆ. ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಿವಿಧೆಡೆ ಎಸೆದು, ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದಾಳೆ. ಘಟನೆ ನಡೆದು ಎರಡು ದಿನಗಳ ನಂತರ (ಡಿ.10ರಂದು) ಪಕ್ಕದ ತೋಟದವರು ಶವ ನೋಡಿ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ಹಲವು ಆಯಾಮಗಳಲ್ಲಿ ತನಿಖೆ ಮಾಡಿದಾಗ ಆರೋಪಿ ಪತ್ತೆಹಚ್ಚಲು ಸಾಧ್ಯವಾಗಿದೆ’ ಎಂದರು.
ಗರ್ಭಿಣಿ ಕೊಂದ ಆರೋಪಿ ಬಂಧನ
ಅಥಣಿ ತಾಲ್ಲೂಕಿನ ಚಿಕ್ಕೂಡ ಗ್ರಾಮದಲ್ಲಿ 9 ತಿಂಗಳ ಗರ್ಭಿಣಿಯಾಗಿದ್ದ ಸುವರ್ಣ ಮಠಪತಿ ಅವರನ್ನು ಇತ್ತೀಚೆಗೆ ಕೊಲೆ ಮಾಡಿದ್ದ ಆರೋಪಿ ಅಪ್ಪಯ್ಯ ಮಠಪತಿ ಬಂಧಿಸಲಾಗಿದೆ. ಸುವರ್ಣ ಅವರು ಅಪ್ಪಯ್ಯ ಅವರಿಗೆ ಹಲವು ಬಾರಿ ಸಾಲ ಕೊಟ್ಟಿದ್ದರು. ಅದನ್ನು ಮರಳಿಸುವಂತೆ ಕೇಳಿದಾಗ ಸುವರ್ಣ ಕೊಲೆ ಮಾಡಿ ಪರಾರಿಯಾಗಿದ್ದ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.