ADVERTISEMENT

‘ವಿಶೇಷ ಮಕ್ಕಳ’ನ್ನು ಕಾಯಿಸಿದ ಮುಖ್ಯಮಂತ್ರಿ!

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 16:57 IST
Last Updated 26 ಸೆಪ್ಟೆಂಬರ್ 2021, 16:57 IST
ವಿಶೇಷ ಮಕ್ಕಳು ಹಾಗೂ ಪೋಷಕರು ಮುಖ್ಯಮಂತ್ರಿ ಬರುವಿಕೆಗೆ ಕಾದಿದ್ದರು
ವಿಶೇಷ ಮಕ್ಕಳು ಹಾಗೂ ಪೋಷಕರು ಮುಖ್ಯಮಂತ್ರಿ ಬರುವಿಕೆಗೆ ಕಾದಿದ್ದರು   

ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶೇಷ, ಅಂಗವಿಕಲ ಮಕ್ಕಳು ಮತ್ತು ಅವರ ಪೋಷಕರನ್ನು ಎರಡು ತಾಸಿಗೂ ಹೆಚ್ಚು ಸಮಯ ಕಾಯಿಸಿದರು.

ಇಲ್ಲಿನ ದಕ್ಷಿಣ ಮತಕ್ಷೇತ್ರದಲ್ಲಿ ಮಹಾತ್ಮಫುಲೆ ಉದ್ಯಾನದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ವಿಶೇಷ ಮಕ್ಕಳಿಗೆಂದು ಅಭಿವೃದ್ಧಿಪಡಿಸಿರುವ ಪ್ರತ್ಯೇಕ ಉದ್ಯಾನದ ಉದ್ಘಾಟನೆಯನ್ನು ಭಾನುವಾರ ಬೆಳಿಗ್ಗೆ 10ಕ್ಕೆ ಹಮ್ಮಿಕೊಳ್ಳಲಾಗಿತ್ತು. ಇದಕ್ಕಾಗಿ ಸಂಘಟಕರು ಕೆಲವು ವಿಶೇಷ ಮಕ್ಕಳು ಮತ್ತು ಪೋಷಕರನ್ನು ಆಹ್ವಾನಿಸಿದ್ದರು. ಆದರೆ, ನಿಗದಿತ ಸಮಯಕ್ಕೆ ಮುಖ್ಯಮಂತ್ರಿ ಬರಲಿಲ್ಲ. ಇದರಿಂದಾಗಿ ಅವರು ಕಾದು ಕುಳಿತುಕೊಳ್ಳಬೇಕಾಯಿತು.

ಅಲ್ಲಿ ನೆರಳಿನ ವ್ಯವಸ್ಥೆಯನ್ನೂ ಆಯೋಜಕರು ಮಾಡಿರಲಿಲ್ಲ. ಹೀಗಾಗಿ, ಬಹುತೇಕರು ಬಿಸಿಲಿನಲ್ಲೇ ಕಾದಿದ್ದರು. ಕೆಲವರು ಮರದ ನೆರಳನ್ನು ಆಶ್ರಯಿಸಿದರು. ಕೆಲವು ಮಕ್ಕಳು ಅಳುತ್ತಿದ್ದವು. ಅವರನ್ನು ಪೋಷಕರು ಸಮಾಧಾನಪಡಿಸುತ್ತಿದ್ದುದು ಕಂಡುಬಂತು.

ADVERTISEMENT

‘ಮುಖ್ಯಮಂತ್ರಿಯು ವಿಶೇಷ ಮಕ್ಕಳ ಕಾರ್ಯಕ್ರಮಕ್ಕೆ ಆದ್ಯತೆ ನೀಡಬೇಕಿತ್ತು. ಮಹಾನಗರಪಾಲಿಕೆ ಬಿಜೆಪಿ ಸದಸ್ಯರ ಸನ್ಮಾನ ಕಾರ್ಯಕ್ರಮಕ್ಕೆ ನಂತರ ತೆರಳಬಹುದಿತ್ತು’ ಎಂಬ ಮಾತುಗಳು ಕೂಡ ಕೇಳಿಬಂದವು.

ತಡವಾಗಿ ಬಂದ ಮುಖ್ಯಮಂತ್ರಿ ಕೆಲವೇ ನಿಮಿಷಗಳಲ್ಲಿ ಉದ್ಘಾಟನೆ ನೆರವೇರಿಸಿದರು. ಕೆಲ ಮಕ್ಕಳ ತಲೆನೇವರಿಸಿ, ಕೈಕೊಟ್ಟು ಮಾತನಾಡಿದರು. ತರಾತುರಿಯಲ್ಲಿ ತೆರಳಿದರು.

ಬಾದಾಮಿ ಹಾಲು ನೀಡಿದ ಅಭಿಮಾನಿ!

ನಗರದ ಫುಲ್‌ಬಾಗ್ ನಿವಾಸಿ ಅಶೋಕ ತಡಪಟ್ಟಿ ಎನ್ನುವವರು ಮುಖ್ಯಮಂತ್ರಿಗೆ ಬಾದಾಮಿ ಹಾಲಿನ ಡಬ್ಬಿ ನೀಡಿದ ಪ್ರಸಂಗ ನಡೆಯಿತು.

ಇಲ್ಲಿನ ಎಸ್‌ಪಿಎಂ ರಸ್ತೆಯಲ್ಲಿ ರವೀಂದ್ರ ಕೌಶಿಕ್ ಇ–ಗ್ರಂಥಾಲಯ ಉದ್ಘಾಟಿಸಿದ ಮುಖ್ಯಮಂತ್ರಿ ಭಾಷಣ ಆರಂಭಿಸಿದ್ದರು. ಆಗ ವೇದಿಕೆಯತ್ತ ನುಗ್ಗುತ್ತಿದ್ದ ಅಭಿಮಾನಿಯನ್ನು ಪೊಲೀಸರು ತಡೆದರು. ಅದನ್ನು ಗಮನಿಸಿದ ಬೊಮ್ಮಾಯಿ, ವೇದಿಕೆ ಕಡೆ ಬರಲು ಅವರಿಗೆ ಅನುವು ಮಾಡಿಕೊಡುವಂತೆ ನಿರ್ದೇಶನ ನೀಡಿದರು. ಬಳಿಕ, ಅವರಿಂದ ಡಬ್ಬಿ ಪಡೆದು ನಮಸ್ಕರಿಸಿದರು.

‘ಆತ ನನ್ನ ಅಭಿಮಾನಿ. ಉತ್ತರ ಕರ್ನಾಟಕಕ್ಕೆ ಬಂದಾಗಲೆಲ್ಲ ಬರುತ್ತಾನೆ. ಏನನ್ನಾದರೂ ಕೊಡುತ್ತಾರೆ’ ಎಂದಾಗ ಸಭೆಯಲ್ಲಿ ನಗೆ ಚಿಮ್ಮಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.