ADVERTISEMENT

ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ 24X7 ರೇಡಿಯಾಲಜಿ ಸೇವೆ

ಸಂತೋಷ ಈ.ಚಿನಗುಡಿ
Published 18 ಮಾರ್ಚ್ 2024, 3:33 IST
Last Updated 18 ಮಾರ್ಚ್ 2024, 3:33 IST
ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಅಳವಡಿಸಿದ ಎಂಆರ್‌ಐ ಯಂತ್ರ
ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಅಳವಡಿಸಿದ ಎಂಆರ್‌ಐ ಯಂತ್ರ   

ಬೆಳಗಾವಿ: ಇಲ್ಲಿಯ ಜಿಲ್ಲಾಸ್ಪತ್ರೆಯಲ್ಲಿ ವಿವಿಧ ರೋಗ ಪತ್ತೆ ಮಾಡುವ ಅತ್ಯಾಧುನಿಕ ಯಂತ್ರಗಳನ್ನು ಅಳವಡಿಸಲಾಗಿದೆ. ಇದರಿಂದ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಅಗತ್ಯ ಪೂರೈಸುವ ಸಲುವಾಗಿ 24X7 ಸೇವೆ ಆರಂಭಿಸಲಾಗಿದೆ.

ರೇಡಿಯಾಲಾಜಿ ವಿಭಾಗದಲ್ಲಿ ಈಗ ಎರಡು ಸಿಟಿ ಸ್ಕ್ಯಾನ್‌ ಯಂತ್ರ, ಒಂದು ಎಂಆರ್‌ಐ, ನಾಲ್ಕು ಫಿಕ್ಸ್ಡ್‌ ಎಕ್ಸ್‌ರೇ ಯಂತ್ರ, 15 ಪೋರ್ಟೇಬಲ್‌ ಎಕ್ಸ್‌ರೇ ಯಂತ್ರ, 6 ಅಲ್ಟ್ರಾಸೌಂಡ್‌ ಯಂತ್ರಗಳು ಸುಸ್ಥಿತಿಯಲ್ಲಿವೆ. ಮೂರು ಹಂತಗಳಲ್ಲಿ ದಿನದ 24 ಗಂಟೆಯೂ ಸೇವೆ ನೀಡುತ್ತಿವೆ.

ಈ ಮುಂಚೆ 200ರಿಂದ 250 ರೋಗಿಗಳು ರೋಗ ಪತ್ತೆಗಾಗಿ ಬರುತ್ತಿದ್ದರು. ಈ ಸಂಖ್ಯೆ ಈಗ 350ರಿಂದ 400ಕ್ಕೆ ಏರಿದೆ. ದೂರದ ಊರುಗಳಾದ ಚಿಕ್ಕೋಡಿ, ಅಥಣಿ, ರಾಯಬಾಗ, ರಾಮದುರ್ಗ, ನಿಪ್ಪಾಣಿ ತಾಲ್ಲೂಕುಗಳಿಂದ ಬರುವವರಿಗೆ ಸಮಸ್ಯೆ ಆಗುತ್ತಿತ್ತು. ಎಂಆರ್‌ಐ, ಸಿಟಿಸ್ಕ್ಯಾನ್‌ ಮುಂದಾದ ರೋಗಪತ್ತೆಗೆ ಸಮಯ ಬೇಕು. ಮುಂಚಿತವಾಗಿ ನಂಬರ್‌ ಹೆಚ್ಚಬೇಕು. ದೂರದ ಊರುಗಳಿಂದ ಬಂದವರಿಗೆ ಪಾಳಿ ಸಿಗದೇ ಇದ್ದಾಗ ವಸತಿ ಮಾಡುವುದು ಅಥವಾ ಹಾಗೇ ಮರಳುವುದು ಸಮಸ್ಯೆಯಾಗಿತ್ತು. ಈ ಕೊರತೆ ನೀಗಿಸಲು ರಾತ್ರಿ ಪಾಳಿ ಶುರು ಮಾಡಲಾಗಿದೆ ಎನ್ನುತ್ತಾರೆ ರೇಡಿಯಾಲಜಿ ಇಮೇಜಿಂಗ್‌ ಆಫೀಸರ್‌ ವೆಂಕಟೇಶ ಹಡಪದ.

ADVERTISEMENT

ಬೆಳಿಗ್ಗೆಯಿಂದ ಮಧ್ಯಾಹ್ನ 2ರವರೆಗೆ ಒಂದು ಶಿಫ್ಟ್‌, ಅಲ್ಲಿಂದ ರಾತ್ರಿ 8ರವರೆಗೆ ಮತ್ತೊಂದು ಶಿಫ್ಟ್‌ ಮಾತ್ರ ಕೆಲ ನಡೆಯುತ್ತಿತ್ತು. ರೋಗಪತ್ತೆ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದ್ದರಿಂದ ಇರುವ ಸಿಬ್ಬಂದಿಯೇ ಹಗಲು– ರಾತ್ರಿ ದುಡಿಯಬೇಕಾಗಿದೆ. ಸದ್ಯ ಆರು ಸಿಬ್ಬಂದಿ ಇದ್ದು, ಇನ್ನೂ ಮೂರು ಹುದ್ದೆಗಳು ತುರ್ತಾಗಿ ಬೇಕಿವೆ.

ಹೃದ್ರೋಗ ಸೇವೆ: ₹5 ಕೋಟಿ ವೆಚ್ಚದ ಅತ್ಯಾಧುನಿಕ ‘ಸಿಟಿ ಕೊರೊನರಿ ಎಂಜಿಯಾಗ್ರಾಮ್‌’ ಯಂತ್ರವನ್ನು ಐದು ತಿಂಗಳ ಹಿಂದೆ ಅಳವಡಿಸಲಾಗಿದೆ. ಇದರಿಂದ ಹೃದ್ರೋಗ ತಪಾಸಣೆಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಇಲ್ಲಿಯವರೆಗೆ ಜಿಲ್ಲಾಸ್ಪತ್ರೆಯಲ್ಲಿ ಹೃದ್ರೋಗ ತಪಾಸಣೆಯೂ ಸಾಧ್ಯವಿರಲಿಲ್ಲ. ಈ ಆಧುನಿಕ ತಾಂತ್ರಿಕ ಶಕ್ತಿಯ ಮೂಲಕ ಎಲ್ಲ ರೋಗಗಳ ಪತ್ತೆ ಕಾರ್ಯ ನಡೆಸಲು ಸಾಧ್ಯವಾಗಿದೆ.

ಹೃದಯ ಬೇನೆ, ಹೃದಯ ಉರಿ, ರಕ್ತದೊತ್ತಡ, ಉಸಿರಾಟದ ತೊಂದರೆ, ಆಯಾಸ ಹೀಗೆ ವಿವಿಧ ಲಕ್ಷಣಗಳು ಕಂಡುಬಂದರೆ ಮೊದಲು ಶುರು ಮಾಡುವುದೇ ಆ್ಯಂಜಿಯೊಗ್ರಾಮ್‌. ಹೃದಯಕ್ಕೆ ರಕ್ತ ‍ಪೂರೈಸುವ ನಳಿಕೆಗಳನ್ನು ಚಿತ್ರೀಕರಿಸುವ ವಿಧಾನವಿದು. ಹೀಗೆ ಪ್ರತಿ ಆ್ಯಂಜಿಯೊಗ್ರಾಮ್‌ಗೆ ಕೆಲವು ಕಡೆ ₹10 ಸಾವಿರ ಮತ್ತೆ ಕೆಲವೆಡೆ ₹15 ಸಾವಿರ ವೆಚ್ಚ ತಗಲುತ್ತದೆ. ಇದು ಹೊರೆಯಾದ್ದರಿಂದ ಬಡ ರೋಗಿಗಳು ತಪಾಸಣೆಯಿಂದಲೇ ದೂರ ಉಳಿಯುವ ಸ್ಥಿತಿ ಇತ್ತು.

ಮಹಾರಾಷ್ಟ್ರದ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಹಣ ಸುರಿಯುತ್ತಿದ್ದವರೂ ಈಗ ಜಿಲ್ಲಾಸ್ಪತ್ರೆಯತ್ತ ಮುಖ ಮಾಡಿದ್ದಾರೆ.

ಜಿಲ್ಲಾಸ್ಪತ್ರೆ ಎಂದರೆ ಬಡವರಿಗೆ ಸೀಮಿತ ಎಂಬ ಮಾತು ಇತ್ತು. ಆದರೆ ಇಲ್ಲಿಯೂ ಅತ್ಯಾಧುನಿಕ ರೋಗ ಪತ್ತೆ ಸೌಕರ್ಯ ಅಳವಡಿಸಿದ್ದರಿಂದ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ
- ಡಾ.ಈರಣ್ಣ ಪಲ್ಲೇದ ಮುಖ್ಯಸ್ಥ ರೇಡಿಯಾಲಜಿ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.