ADVERTISEMENT

ಜಾತಿ ಗಣತಿ: ವಿಶೇಷ ಅಧಿವೇಶನ ಅನಿವಾರ್ಯ; ಸಚಿವ ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2025, 13:05 IST
Last Updated 15 ಏಪ್ರಿಲ್ 2025, 13:05 IST
   

ಬೆಳಗಾವಿ: ‘ಜಾತಿ ಗಣತಿ ವರದಿ ಜಾರಿ ಮಾಡಲು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅಗತ್ಯ. ಅದಕ್ಕಾಗಿ ವಿಶೇಷ ಅಧಿವೇಶನ ಕರೆಯುವ ಅನಿವಾರ್ಯತೆ ಸರ್ಕಾರಕ್ಕಿದೆ’ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅಭಿ‍ಪ್ರಾಯ‍ಟ್ಟರು.

‘ಈ ವರದಿ ವಿಚಾರದಲ್ಲಿ ಯಾರಿಗೆ ಆತಂಕ ಮತ್ತು ಗೊಂದಲ ಇವೆಯೋ ಅವರು ಅಧಿವೇಶನದಲ್ಲಿ ಚರ್ಚೆ ಮಾಡಬಹುದು. ಸುದೀರ್ಘವಾಗಿ ಚರ್ಚೆ ಆಗಬೇಕಿದೆ. ಅದಕ್ಕಾಗಿ ವಿಶೇಷ ಅಧಿವೇಶನ ಕರೆಯಬೇಕು. ಅದಕ್ಕಿಂತ ಉತ್ತಮ ಮಾರ್ಗ ಮತ್ತೊಂದಿಲ್ಲ’ ಎಂದು ಅವರು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮುಖ್ಯವಾಗಿ ಜನ ತಿಳಿಯಬೇಕಾದದ್ದು ಏನೆಂದರೆ; ಈ ಜಾತಿ ಗಣತಿಯಿಂದ ರಾಜಕೀಯದ ಮೇಲೆ ಯಾವುದೇ ರೀತಿಯ ಪರಿಣಾಮ ಉಂಟಾಗುವುದಿಲ್ಲ. ನಮ್ಮ ರಾಜ್ಯದಲ್ಲಿ ಕೇವಲ 1,000 ಮತಗಳು ಇರುವ ಸಮುದಾಯದವರೂ ಶಾಸಕರಾಗಿದ್ದಾರೆ. ಪ್ರತಿ ಕ್ಷೇತ್ರದಲ್ಲಿ ಕನಿಷ್ಠ 70 ಸಾವಿರಕ್ಕೂ ಹೆಚ್ಚು ಮತ ಇರುವ ಸಮಾಜದ ನಾಯಕರು ಏಕೆ ಆತಂಕ ಪಡಬೇಕು?’ ಎಂದೂ ಅವರು ಪ್ರಶ್ನಿಸಿದರು.

ADVERTISEMENT

‘ಒಕ್ಕಲಿಗ ಸಮುದಾಯದ 35 ಶಾಸಕರ ಜೊತೆಗೆ ಡಿ.ಕೆ.ಶಿವಕುಮಾರ್‌ ಅವರು ಸಭೆ ಮಾಡುತ್ತಿದ್ದಾರೆ. ನಾವು ಅದಕ್ಕಿಂತ ಮುಂದೆ ಹೋಗಿ ಹೇಳುತ್ತಿದ್ದೇವೆ. ಸದನದಲ್ಲಿ ಚರ್ಚೆ ಆಗಬೇಕು. ನಾಲ್ಕು ದಿನ ಅದೇ ವಿಷಯಕ್ಕೆ ಮೀಸಲಿಡಬೇಕು. ವರದಿ ಸರಿ, ತಪ್ಪಿನ ಬಗ್ಗೆ ಹೇಳಲಿ. ಅಂತಿಮವಾಗಿ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಏ.16ರಂದು ಬಿಜೆಪಿ ಬೆಳಗಾವಿಯಲ್ಲಿ ಜನಾಕ್ರೋಶ ಯಾತ್ರೆ ನಡೆಸುತ್ತಿದೆ. ಹಾಲಿನ ದರ ಏರಿಕೆಯ ಜತೆಗೇ ಅವರು ಪೆಟ್ರೋಲ್, ಡೀಸೆಲ್‌ ದರ ಏರಿಸಿದ ಕೇಂದ್ರದ ವಿರುದ್ಧವೂ ಪ್ರತಿಭಟನೆ ಮಾಡಬೇಕು. ಇದರಿಂದ ಜನರಿಗೆ ಒಳ್ಳೆಯದಾಗುತ್ತದೆ. ಆಗ ನಾವು ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ಮಾಡುವುದು ತಪ್ಪುತ್ತದೆ’ ಎಂದು ಅವರು ಉತ್ತರಿಸಿದರು.

‘ಹಾಲಿನ ದರ ಏರಿಕೆ ಬಗ್ಗೆ ಜನರಲ್ಲಿ ಯಾವುದೇ ತಕರಾರು ಇಲ್ಲ. ಬಿಜೆಪಿಯವರೇ ಆಕ್ರೋಶಗೊಂಡಿದ್ದಾರೆ. ರೈತರಿಗೆ ಉಪಯೋಗ ಆಗುವ ಕೆಲಕ್ಕೆ ಏಕೆ ಆಕ್ರೋಶಗೊಂಡಿದ್ದಾರೋ ಗೊತ್ತಿಲ್ಲ. ಜನರ ಬೆಂಬಲ ಇದ್ದರೆ ಪ್ರತಿಭಟನೆ ಮಾಡಲಿ’ ಎಂದೂ ಅವರು ಹೇಳಿದರು.

*

‘ಮತ್ತೆ ನೀರು ಬಿಡಲು ಮನವಿ’

‘ಮಹಾರಾಷ್ಟ್ರದ ಜಲಾಶಯಗಳಿಂದ ರಾಜ್ಯಕ್ಕೆ ನೀರು ಬಿಡಲು ಮತ್ತೆ ಮನವಿ ಮಾಡಿಕೊಳ್ಳುತ್ತೇವೆ. ಅವರು ಕೃಷ್ಣಾ ನದಿಗೆ ನೀರು ಬಿಟ್ಟರೆ ನಾವು ಜತ್ತ ತಾಲ್ಲೂಕಿಗೆ ನೀರು ಬಿಡುವ ಯೋಚನೆ ಇದೆ. ಆ ಬಗ್ಗೆ ಮಾತುಕತೆ ಆಗಿದೆ. ಆದರೆ, ಅದು ಅನುಷ್ಠಾನಕ್ಕೆ ಬಂದಿಲ್ಲ. ಕಲ್ಲೋಳ, ಕಾರದಗಾ ಬ್ಯಾರೇಜ್‌ನಿಂದ ನೀರು ಬಿಡಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದು ಸತೀಶ ಜಾರಕಿಹೊಳಿ ಹೇಳಿದರು.

‘ಸದ್ಯ ಜೂನ್, ಜುಲೈವರೆಗೆ ಹಿಡಕಲ್ ಜಲಾಶಯದಲ್ಲಿ ನೀರು ಕಾಯ್ದಿಟ್ಟುಕೊಳ್ಳಬೇಕು. ನೀರಾವರಿ, ಅರಣ್ಯ, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಪ್ರಾಧಿಕಾರ ಸೇರಿ ವಿವಿಧ ಇಲಾಖೆ ಅಧಿಕಾರಿಗಳ ಜೊತೆಗೆ ಸಭೆ ಮಾಡಿದ್ದೇನೆ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.