ADVERTISEMENT

ಚನ್ನಮ್ಮನ ಕಿತ್ತೂರು ಕೋಟೆ | ಧ್ವನಿ– ಬೆಳಕಿನ ನರ್ತನ; ಪಳೆಯುಳಿಕೆ ಮಾತ್ರ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2023, 3:40 IST
Last Updated 3 ಆಗಸ್ಟ್ 2023, 3:40 IST
ಚನ್ನಮ್ಮನ ಕಿತ್ತೂರು ಕೋಟೆಯಲ್ಲಿ ಧ್ವನಿ-ಬೆಳಕಿನ ಪ್ರದರ್ಶನಕ್ಕೆ ನಿಲ್ಲಿಸಿದ ಕಂಬಗಳು
ಚನ್ನಮ್ಮನ ಕಿತ್ತೂರು ಕೋಟೆಯಲ್ಲಿ ಧ್ವನಿ-ಬೆಳಕಿನ ಪ್ರದರ್ಶನಕ್ಕೆ ನಿಲ್ಲಿಸಿದ ಕಂಬಗಳು   

ಪ್ರದೀಪ ಮೇಲಿನಮನಿ

ಚನ್ನಮ್ಮನ ಕಿತ್ತೂರು: ಗುಂಪೆ ಹಾಕಿರುವ ಮುರಿದ ಚಕ್ರಗಳು, ಬಣ್ಣ ಕಳೆದುಕೊಂಡು ತೋಪು ಹೊತ್ತುಕೊಂಡು ನಿಂತಿರುವ ಕೃತಕ ಬತೇರಿ, ಮುಕ್ಕಾಗಿರುವ ಸಂಸ್ಥಾನದ ಲಾಂಛನ, ಕೆಟ್ಟು ಹೋಗಿರುವ ಲೈಟ್ ಉಪಕರಣಗಳು, ಅದರಲ್ಲಿ ಸಂಗ್ರಹವಾದ ಮಳೆಯ ನೀರು…

ಇಂತಹ ಅನಾಥ ದೃಶ್ಯಗಳು ಕಿತ್ತೂರು ಕೋಟೆಗೆ ಆಗಮಿಸುವ ಪ್ರವಾಸಿಗರಿಗೆ ‘ಸ್ಮಾರಕ’ದಂತೆ ಕಾಣಿಸುತ್ತಿವೆ. ಅಪಾರ ವೆಚ್ಚ ಮಾಡಿ ದಶಕದ ಹಿಂದೆ ಇಲ್ಲಿನ ಐತಿಹಾಸಿಕ ಕೋಟೆಯೊಳಗೆ ನಿರ್ಮಿಸಿದ್ದ ಧ್ವನಿ ಮತ್ತು ಬೆಳಕು (ಸೌಂಡ್ ಆ್ಯಂಡ್ ಲೈಟ್) ವ್ಯವಸ್ಥೆ ಮೂಲಕ ಇತಿಹಾಸದ ಕಿರು ಪರಿಚಯ ಮಾಡುತ್ತಿದ್ದ ಉಪಕರಣಗಳ ಸ್ಥಿತಿ ಇದು.

ADVERTISEMENT

ಮಳೆ– ಗಾಳಿಗೆ ಕಳಚಿಕೊಂಡು ಬಿದ್ದಿರುವ ಕೃತಕ ಕೋಟೆ, ಕಂಬಗಳು, ಲಾಂಛನಗಳನ್ನು ಒಂದೆಡೆ ಸಂಗ್ರಹ ಮಾಡಿಡಲಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಈ ವಾಸ್ತವ ದೃಶ್ಯಗಳು ಬೇಸರ ಮೂಡಿಸುವಂತಿವೆ ಎನ್ನುತ್ತಾರೆ ಇತಿಹಾಸ ಪ್ರಿಯರು.

ಮೊದಲಿದ್ದ ಧ್ವನಿ ಮತ್ತು ಬೆಳಕಿನ ಉಪಕರಣಗಳನ್ನು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಉಪಯೋಗ ಪಡಿಸಿಕೊಳ್ಳುವತ್ತ ಗಮನ ಹರಿಸಬೇಕು. ಅಪಾರ ವೆಚ್ಚ ಮಾಡಿದ ವಸ್ತುಗಳನ್ನು ಏನು ಮಾಡುತ್ತಾರೆ ಎಂಬುದು ಪ್ರಶ್ನೆಯಾಗಿದೆ.
ಹಬೀಬ ಶಿಲೇದಾರ, ಸಮಾಜ ಸೇವಕ, ಅಂಬಡಗಟ್ಟಿ

₹ 2 ಕೋಟೆ ವೆಚ್ಚ

ರಾಣಿ ಚನ್ನಮ್ಮನ ಜನನ, ಬಾಲ್ಯ, ಬೆಳೆದು ಬಂದ ಬಗೆ, ಮದುವೆ, ಬ್ರಿಟಿಷರ ವಿರುದ್ಧ ಗರ್ಜಿಸಿದ ರೀತಿ, ಕುದುರೆಯ ಕರಪುಟಕ, ಯುದ್ಧದ ಸನ್ನಿವೇಶಗಳು... ಹೀಗೆ ಹಲವಾರು ದೃಶ್ಯಗಳು ಧ್ವನಿ ಮತ್ತು ಬೆಳಕು ವ್ಯವಸ್ಥೆ ಮೂಲಕ ಪ್ರಸ್ತುತ ಪಡಿಸಲಾಗುತ್ತಿತ್ತು. ಘರ್ಜಿಸುವ ದೃಶ್ಯಗಳು, ಯುದ್ಧದ ಸನ್ನಿವೇಶಗಳ ಪ್ರದರ್ಶನ ಮೈನವಿರೇಳಿಸುತ್ತಿತ್ತು ಎಂದು ಉತ್ಸವದ ಸಂದರ್ಭದಲ್ಲಿ ನೋಡಿದ ಇತಿಹಾಸ ಪ್ರೇಮಿಗಳು ಮೆಲುಕು ಹಾಕುತ್ತಾರೆ.

ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಅವರ ನಿರ್ದೇಶನದಲ್ಲಿ, ದಿವಂಗತ ನಟಿ ಜಯಂತಿ ಅವರ ಪುತ್ರ ಕೃಷ್ಣಕುಮಾರ್ ಅವರ ಇನೋವೆಟಿವ್ ಸಂಸ್ಥೆಯು ಈ ಮಹತ್ವಾಕಾಂಕ್ಷಿ ಯೋಜನೆ ಅನುಷ್ಠಾನಗೊಳಸಿತ್ತು. ₹2 ಕೋಟಿ ಅಂದಾಜು ವೆಚ್ಚದಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ 2011ರಲ್ಲಿ ನಿರ್ಮಿಸಿ ಪ್ರದರ್ಶಿಸಲಾಯಿತು.

ಸ್ಥಗಿತಗೊಂಡ ಧ್ವನಿ ಮತ್ತು ಬೆಳಕು ಪ್ರದರ್ಶನ ಮರು ಆರಂಭ ಮಾಡುವ ವಿಚಾರವಿಲ್ಲ. ಇದಕ್ಕೆ ಪರ್ಯಾಯವಾಗಿ ಲೇಸರ್ ಷೋ ಮೂಲಕ ಇತಿಹಾಸ ಪರಿಚಯಿಸುವ ಪ್ರಸ್ತಾವ ಪ್ರಾಧಿಕಾರದ ಮುಂದಿದೆ.
ಪ್ರಭಾವತಿ ಫಕೀರಪುರ, ಉಪವಿಭಾಗಾಧಿಕಾರಿ ಮತ್ತು ಆಯುಕ್ತೆ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ

ಅನಂತರ ಪ್ರವಾಸೋದ್ಯಮ ಇಲಾಖೆಯು ಕೋಟೆ ಆವರಣದಲ್ಲಿ ಕಾರ್ಯಕ್ರಮ ಮಾಡಿ, ಕಿತ್ತೂರ ಅಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರಿಸಿತು. ಪ್ರತಿ ವರ್ಷ ಅಕ್ಟೋಬರ್‌ 23ರಿಂದ 25 ರವರೆಗೆ ನಡೆಯುವ ಕಿತ್ತೂರು ಉತ್ಸವದಲ್ಲಿ ಮಾತ್ರ ಪ್ರದರ್ಶನ ಮಾಡಲಾಗುತ್ತಿತ್ತು.

ಕೋವಿಡ್ ಮೊದಲೆರಡು ವರ್ಷ ಹಾಗೂ ನಂತರದ ವರ್ಷಗಳಲ್ಲಿ ನಡೆದ ಕಿತ್ತೂರು ಉತ್ಸವದಲ್ಲಿ ಇದು ಪ್ರದರ್ಶನಗೊಳ್ಳಲಿಲ್ಲ. ಮೇಲ್ವಿಚಾರಣೆ ಮತ್ತು ಪ್ರದರ್ಶನವಿಲ್ಲದೆ ಅಲ್ಲಿಯ ಕಿಮ್ಮತ್ತಿನ ವಸ್ತುಗಳು ನಾಶವಾಗಿ ಹೋದವು. ಈಗ ನೋಡಿದರೆ ಅದಕ್ಕೆ ಬಳಸಲಾದ ಉಪಕರಣಗಳು ಪಳೆಯುಳಿಕೆಯಂತೆ ನಿಂತಿವೆ. ಕೆಲವು ಉಪಕರಣಗಳನ್ನು ಒಂದೆಡೆ ಗುಂಪೆ ಹಾಕಿ ಇಡಲಾಗಿದೆ.

ಇದರ ಮರು ಆರಂಭದ ಉದ್ದೇಶವೇ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದು, ದೊಡ್ಡ ಯೋಜನೆ ಸಂಪೂರ್ಣ ಮೂಲೆಗುಂಪಾದಂತೆ ಆಗಿದೆ.

ಕೋಟೆ ಆವರಣದಲ್ಲಿ ಬಿದ್ದಿರುವ ಪ್ರದರ್ಶನಕ್ಕೆ ಬಳಸುತ್ತಿದ್ದ ಚಕ್ರಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.