ADVERTISEMENT

ಬಿಎಸ್‌ವೈ ವಿರುದ್ಧ ಹೇಳಿಕೆ; ಯತ್ನಾಳರನ್ನು ಹೊರಹಾಕಲೇಬೇಕಾಗುತ್ತದೆ: ಅರುಣ್ ಸಿಂಗ್

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 9:56 IST
Last Updated 9 ಏಪ್ರಿಲ್ 2021, 9:56 IST
ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಶಾಸಕ ಬಸನಗೌಡ ಪಾಟೀಲ ಯತ್ನಾಳ (ಸಂಗ್ರಹ ಚಿತ್ರ)
ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಶಾಸಕ ಬಸನಗೌಡ ಪಾಟೀಲ ಯತ್ನಾಳ (ಸಂಗ್ರಹ ಚಿತ್ರ)   

ಬೆಳಗಾವಿ: ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಹೇಳಿಕೆ ನೀಡುವುದನ್ನು ಮುಂದುವರಿಸಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಪಕ್ಷದಿಂದ ಹೊರ ಹಾಕಲೇಬೇಕಾಗುತ್ತದೆ’ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ತಿಳಿಸಿದರು.

ಇಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಆ ವ್ಯಕ್ತಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ಅವರ ಬಗ್ಗೆ ಮಾತನಾಡಿದರೆ ಅವರಿಗೆ ಹೆಚ್ಚು ಪ್ರಸಿದ್ಧಿ ಸಿಗುತ್ತದೆ. ಹೀಗಾಗಿ, ಹೆಚ್ಚು ಚರ್ಚಿಸಲು ನಾನು ಇಚ್ಛಿಸುವುದಿಲ್ಲ. ಅವರ ಬಗ್ಗೆ ನಮಗೆ ಕೊಂಚವೂ ವಿಶ್ವಾಸವಿಲ್ಲ. ಪಕ್ಷದ ಶಿಸ್ತು ಸಮಿತಿಯು ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು. ಆಂತರಿಕ ವಿಚಾರಗಳನ್ನು ಹೆಚ್ಚು ತಿಳಿಸುವುದಕ್ಕೆ ಆಗುವುದಿಲ್ಲ’ ಎಂದರು.

‘ಏ.30ರ ಒಳಗೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗುತ್ತದೆ’ ಎಂಬ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಯಾವುದೇ ಬದಲಾವಣೆ ಇಲ್ಲ. ಆ ವ್ಯಕ್ತಿಗೆ ಕನಸು ಬಿದ್ದಿರಬೇಕಷ್ಟೆ’ ಎಂದು ತಿರುಗೇಟು ನೀಡಿದರು.

ADVERTISEMENT

ಇದಕ್ಕೂ ಮುನ್ನ ವಿಮಾನನಿಲ್ದಾಣದಲ್ಲಿ ಮಾತನಾಡಿದ್ದ ಅವರು, ‘ಯತ್ನಾಳ್ ಹೇಳಿಕೆಯಲ್ಲಿ ಧಂ ಇಲ್ಲ. ಅವರ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಇನ್ನೆಷ್ಟು ಕ್ರಮ ಕೈಗೊಳ್ಳುವುದು?’ ಎಂದು ಕೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.