ADVERTISEMENT

ಗೋಕಾಕದಲ್ಲಿ ಸಾರಿಗೆ ಬಸ್‌ಗಳಿಗೆ ಕಲ್ಲು, ಗಾಜು ಪುಡಿ ಪುಡಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 15:41 IST
Last Updated 3 ಮಾರ್ಚ್ 2021, 15:41 IST
   

ಬೆಳಗಾವಿ: ‘ರಮೇಶ ಜಾರಕಿಹೊಳಿ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ ಎಂದು ಆರೋಪಿಸಿ ಹಾಗೂ ಅವರು ಸಚಿವ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಅಂಗೀಕರಿಸಬಾರದು’ ಎಂದು ಆಗ್ರಹಿಸಿ ಅವರ ಬೆಂಬಲಿಗರು ಗೋಕಾಕದಲ್ಲಿ ಬುಧವಾರ ಪ್ರತಿಭಟನೆ ನಡೆಸಿದ ವೇಳೆ, ಎನ್‌ಡಬ್ಲ್ಯುಆರ್‌ಸಿಟಿ ಬಸ್‌ಗಳ ಮೇಲೆ ಕಲ್ಲು ತೂರಿದ್ದಾರೆ.

10ಕ್ಕೂ ಹೆಚ್ಚು ಬಸ್‌ಗಳ ಹಿಂಬದಿಯ ಗಾಜುಗಳನ್ನು ಒಡೆದಿದ್ದಾರೆ. ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್‌ಗಳ ಮೇಲೆ ಕಲ್ಲು ತೂರಿದ್ದಾರೆ. ಬಸ್‌ಗಳಲ್ಲಿ ಪ್ರಯಾಣಿಕರಿರಲಿಲ್ಲ. ಹೀಗಾಗಿ, ಅನಾಹುತ ಸಂಭವಿಸಿಲ್ಲ ಎಂದು ಗೊತ್ತಾಗಿದೆ.

ADVERTISEMENT

‘ಪ್ರಾಥಮಿಕ ಮಾಹಿತಿ ಪ್ರಕಾರ, ನಮ್ಮ ವಿಭಾಗಕ್ಕೆ ಸೇರಿದ ಗೋಕಾಕ ಬಸ್‌ ನಿಲ್ದಾಣದಲ್ಲಿ ಏಳು ಬಸ್‌ಗಳ ಗಾಜುಗಳನ್ನು ಒಡೆದಿರುವುದು ತಿಳಿದುಬಂದಿದೆ. ಹಿಂಬದಿ ಗಾಜುಗಳನ್ನು ಒಡೆಯಲಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡುವಂತೆ ಡಿಪೊ ವ್ಯವಸ್ಥಾಪಕರಿಗೆ ಸೂಚಿಸಿದ್ದೇನೆ’ ಎಂದು ಚಿಕ್ಕೋಡಿ ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ ಮರಿದೇವರಮಠ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಳಗಾವಿ ವಿಭಾಗದ 4ನೇ ಡಿಪೊಕ್ಕೆ ಸೇರಿದ ಒಂದು ಬಸ್‌ನ ಗಾಜು ಒಡೆಯಲಾಗಿದೆ ಎಂದು ಮಾಹಿತಿ ಬಂದಿದೆ’ ಎಂದು ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ಮಹಾದೇವಪ್ಪ ಮುಂಜಿ ಪ್ರತಿಕ್ರಿಯಿಸಿದರು.

ಈ ನಡುವೆ ಪ್ರತಿಭಟನಾಕಾರರಲ್ಲಿ ಕೆಲವರು, ರಸ್ತೆಯಲ್ಲಿ ಹಾಕಿದ್ದ ರಮೇಶ ಜಾರಕಿಹೊಳಿ ಕಟೌಟ್‌ಗೆ ಹಾಲಿನ ಅಭಿಷೇಕವನ್ನೂ ಮಾಡಿದ್ದಾರೆ. ರಮೇಶ ವಿರುದ್ಧ ದೂರು ನೀಡಿದ ದಿನೇಶ ಕಲ್ಲಹಳ್ಳಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಗಡಿಗಳನ್ನು ಒತ್ತಾಯಪೂರ್ವಕವಾಗಿ ಬಂದ್ ಮಾಡಿಸಿದ್ದಾರೆ. ಹೀಗಾಗಿ, ಗೋಕಾಕದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ.

ಮಾರ್ಚ್‌ 4ರಂದು ಕೂಡ ಗೋಕಾಕ ಸಂಪೂರ್ಣ ಬಂದ್‌ಗೆ ಬೆಂಬಲಿಗರು ಕರೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.