ADVERTISEMENT

ಹಿರೇಬಾಗೇವಾಡಿ ಬಳಿ ಬೀದಿ ನಾಯಿಗಳ ಶೆಡ್‌: ವಿರೋಧ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 2:54 IST
Last Updated 13 ಜನವರಿ 2026, 2:54 IST
<div class="paragraphs"><p>ಬೀದಿ ನಾಯಿ</p></div>

ಬೀದಿ ನಾಯಿ

   

(ಸಾಂದರ್ಭಿಕ ಚಿತ್ರ)

ಹಿರೇಬಾಗೇವಾಡಿ: ಬೆಳಗಾವಿ ನಗರದ ಬೀದಿನಾಯಿಗಳನ್ನು ಬಿಡಲು, ಹಿರೇಬಾಗೇವಾಡಿ ಸಮೀಪದ ಮಲ್ಲಪ್ಪನ ಗುಡ್ಡದಲ್ಲಿ ಶೆಡ್‌ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ನಿರ್ಜನ ಪ್ರದೇಶದಲ್ಲಿ ನಾಯಿಗಳನ್ನು ಬಿಡುವ ಬದಲು ಹಳ್ಳಿಗೆ ಕೂಗಳತೆಯಲ್ಲೇ ಶೆಡ್‌ ನಿರ್ಮಿಸುತ್ತಿರುವುದು ಸರಿಯಲ್ಲ ಎಂದು ಜನ ದೂರಿದ್ದಾರೆ.

ADVERTISEMENT

ಬೆಳಗಾವಿ ನಗರದಲ್ಲಿ ಈಗ ಬೀದಿ ನಾಯಿಗಳ ಸಂಖ್ಯೆ ವಿಪರೀತ ಹೆಚ್ಚಾಗಿದೆ. ಇವುಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿ, ಒಂದೆಡೆ ಇರಿಸಿ ಪೋಷಣೆ ಮಾಡಲು ಪಾಲಿಕೆ ಮುಂದಾಗಬೇಕಿತ್ತು. ಆದರೆ, ಅದನ್ನು ಗ್ರಾಮೀಣ ಆಡಳಿತದ ತಲೆಯ ಮೇಲೆ ಹೇರಿದೆ. ಪರಿಣಾಮ ನಗರದ ಜನರ ಸಂಕಷ್ಟ ಈಗ ಹಿರೇಬಾಗೇವಾಡಿಗೆ ವರ್ಗವಾದಂತಾಗಿದೆ.

ಮುಖ್ಯವಾಗಿ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್‌ ಈ ಗುಡ್ಡದ ಪಕ್ಕದಲ್ಲೇ ನಿರ್ಮಾಣವಾಗಿದೆ. ಈ ವಿಶ್ವವಿದ್ಯಾಲಯ ಕಟ್ಟಡದಿಂದ ಕೆಲವೇ ದೂರದಲ್ಲಿ 2 ಎಕರೆ ಪ್ರದೇಶದಲ್ಲಿ ನಾಯಿಗಳ ಶೆಡ್‌ ನಿರ್ಮಿಸಲು ಸಿದ್ಧತೆ ನಡೆದಿದೆ. ಮುಂದೆ ಇದು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಅಧ್ಯಯನ ದೃಷ್ಟಿಯಿಂದಲೂ ಅಡಚಣೆ ಆಗಲಿದೆ ಎಂಬುದು ಗ್ರಾಮಸ್ಥರ ದೂರು.

ಮಾತ್ರವಲ್ಲ; ಈ ಗುಡ್ಡದ ಸುತ್ತ ಕೃಷಿ ಭೂಮಿ ಇದ್ದು ನೂರಾರು ರೈತರು ಪ್ರತಿದಿನ ಸಂಚರಿಸುತ್ತಾರೆ. ಇಲ್ಲಿ ಬೀದಿನಾಯಿಗಳ ಆವಾಸ ಸ್ಥಾನ ನಿರ್ಮಿಸಿದರೆ ಹೊಲಕ್ಕೆ ಹೋಗುವ ಜನರಿಗೆ ಆತಂಕ ಎದುರಾಗಲಿದೆ. ಗ್ರಾಮ ಪಂಚಾಯಿತಿಯನ್ನು, ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಈ ನಿರ್ಧಾರ ಮಾಡಿದ್ದು ಸರಿಯಲ್ಲ. ಇದನ್ನು ಕೈಬಿಟ್ಟು ನಿರ್ಜನ ಪ್ರದೇಶದಲ್ಲಿ ನಾಯಿಗಳ ಸಾಕು ನೆಲೆ ನಿರ್ಮಿಸಬೇಕು ಎಂದು ಜನ ಆಗ್ರಹಿಸಿದ್ದಾರೆ.

ಇಲ್ಲದಿದ್ದರೆ ಬೆಳಗಾವಿ ಮಹಾನಗರ ಪಾಲಿಕೆಯ ವಿರುದ್ಧ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.