
ಪ್ರಜಾವಾಣಿ ವಾರ್ತೆ
ಬೆಳಗಾವಿ: ‘ತಾಲ್ಲೂಕಿನ ಗ್ರಾಮವೊಂದರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಅನೇಕ ವಿದ್ಯಾರ್ಥಿನಿಯರೊಂದಿಗೆ ಅನುಚಿತ ವರ್ತನೆ ನಡೆಸಿದ್ದು ಅತ್ಯಂತ ಗಂಭೀರ ಹಾಗೂ ಆಘಾತಕಾರಿ. ಶೀಘ್ರ ತನಿಖೆ ನಡೆಸಿ ತಪ್ಪಿತಸ್ಥನಿಗೆ ಶಿಕ್ಷೆ ಕೊಡಿಸಬೇಕು’ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಕಾರ್ಯದರ್ಶಿ ಡಾ.ಸೋನಾಲಿ ಸರ್ನೋಬತ್ ಆಗ್ರಹಿಸಿದ್ದಾರೆ.
‘ಈ ಘಟನೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ಬಹಿರಂಗವಾಗುತ್ತಿದ್ದಂತೆಯೇ ಪೋಷಕರು, ಗ್ರಾಮಸ್ಥರು ಹಾಗೂ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ಉಕ್ಕಿಬಂದಿದೆ. ಶಾಲೆಗಳು ವಿದ್ಯಾರ್ಥಿಗಳಿಗೆ ಸುರಕ್ಷಿತವಾಗಿಲ್ಲ. ಸಂಸ್ಕಾರ ತುಂಬುವ ಕೇಂದ್ರಗಳಾಗಿ ಉಳಿದಿಲ್ಲ. ಇಂತಹ ಅಮಾನವೀಯ ಹಾಗೂ ವಿಕೃತ ಕೃತ್ಯಗಳು ಸಂಪೂರ್ಣ ಶಿಕ್ಷಣ ವ್ಯವಸ್ಥೆಯನ್ನೇ ಪ್ರಶ್ನೆ ಮಾಡುವಂತಿವೆ’ ಎಂದರು.
‘ಆರೋಪಿ ವಿರುದ್ಧ ತಕ್ಷಣವೇ ಪ್ರಕರಣ ದಾಖಲಿಸಿ, ಯಾವುದೇ ರಾಜಕೀಯ ಅಥವಾ ಪ್ರಭಾವಕ್ಕೆ ಒಳಗಾಗದೇ ತನಿಖೆ ಮಾಡಬೇಕು. ರಾಜಕೀಯ ಪಕ್ಷಗಳಿಂದ ಪರೋಕ್ಷ ಬೆಂಬಲ ಅಥವಾ ರಕ್ಷಣೆಯನ್ನು ಒದಗಿಸಬಾರದು. ಬಾಲಕಿಯ ಪಾಲಕರು ದೂರು ನೀಡದಿದ್ದರೆ ಪೊಲೀಸರೇ ಸುಮೊಟೊ ಪ್ರಕರಣ ದಾಖಲಿಸಿಕೊಳ್ಳಬೇಕು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.