ADVERTISEMENT

ಬೊಕ್ಕಸಕ್ಕೆ ನಷ್ಟ: ಉಪ ನೋಂದಣಾಧಿಕಾರಿ ಅಮಾನತು

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2021, 6:45 IST
Last Updated 25 ಮಾರ್ಚ್ 2021, 6:45 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಳಗಾವಿ: ಸರ್ಕಾರಕ್ಕೆ ರಾಜಸ್ವ ನಷ್ಟ ಉಂಟು ಮಾಡಿರುವುದರಿಂದ ಇಲ್ಲಿನ ಉಪ ನೋಂದಣಿ ಕಚೇರಿಯ ಉಪ ನೋಂದಣಾಧಿಕಾರಿ ವಿಷ್ಣುತೀರ್ಥ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು ಈ ಆದೇಶ ಹೊರಡಿಸಿದ್ದಾರೆ.

ಮಹಾಲೇಖಪಾಲರು 2018–19ನೇ ಸಾಲಿನಲ್ಲಿ ಕಚೇರಿಯಲ್ಲಿ ತಪಾಸಣೆ ನಡೆಸಿ, 2015ರಿಂದ 2018ರ 9 ದಸ್ತಾವೇಜುಗಳಿಂದ ₹12 ಕೋಟಿಗೂ ಹೆಚ್ಚಿನ ಕೊರತೆ ಕಂಡುಬಂದಿದೆ ಎಂದು ಆಕ್ಷೇಪಿಸಿದ್ದರು. ಆಸ್ತಿ ನೋಂದಣಿ ವೇಳೆ ದರವನ್ನು ಅಪಮೌಲ್ಯಗೊಳಿಸಿ ನೋಂದಣಿ ಮಾಡಲಾಗಿದೆ. ಮುದ್ರಾಂಕ ಶುಲ್ಕ ₹12,78,79,056 ಹಾಗೂ ನೋಂದಣಿ ಶುಲ್ಕ ₹12,91,707 ಕಡಿಮೆ ಆಕರಿಸಿದ್ದನ್ನು ಪತ್ತೆ ಹಚ್ಚಲಾಗಿತ್ತು. ಕೊರತೆ ಮೊತ್ತವನ್ನು ನಿಮ್ಮಿಂದ ವಸೂಲಿ ಮಾಡಬಾರದೇಕೆ ಹಾಗೂ ಅಮಾನತಿನಲ್ಲಿ ಇಡಬಾರದೇಕೆ ಎಂದು ವಿಷ್ಣುತೀರ್ಥ ಅವರಿಗೆ ನೋಟಿಸ್ ಜಾರಿಗೊಳಿಸಿ, ಸಮಜಾಯಿಷಿ ಕೇಳಲಾಗಿತ್ತು.

ADVERTISEMENT

‘2015-16ನೇ ಸಾಲಿನಲ್ಲಿ ಜಾರಿಯಲ್ಲಿದ್ದ ಮಾರ್ಗಸೂಚಿ ದರ ಅಳವಡಿಸಿ ದಸ್ತಾವೇಜನ್ನು ನೋಂದಾಯಿಸಲಾಗಿದೆ. ಬೆಳಗಾವಿ ನಗರದಲ್ಲಿ ಕೃಷಿ ಜಮೀನಿನ ಮೌಲ್ಯ ಪ್ರತಿ ಎಕರೆಗೆ ₹ 26.84 ಲಕ್ಷ ಇದ್ದುದ್ದನ್ನು ವಾಣಿಜ್ಯ ಉದ್ದೇಶಕ್ಕಾಗಿ ಶೇ 75ರಷ್ಟು ಹೆಚ್ಚಿಸಿ ₹46.97 ಲಕ್ಷ ನಿಗದಿಪಡಿಸಲಾಗಿತ್ತು’ ಎಂದು ಅಧಿಕಾರಿ ಲಿಖಿತ ಹೇಳಿಕೆ ನೀಡಿದ್ದರು.

‘ಅವರ ಹೇಳಿಕೆ ಒಪ್ಪಲು ಸಾಧ್ಯವಿಲ್ಲ. ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಉದ್ದೇಶಪೂರ್ವಕವಾಗಿ ದುರುದ್ದೇಶದಿಂದ ಅಭಿವೃದ್ಧಿ ಹೊಂದದ ಭೂಪರಿವರ್ತಿತ ಜಮೀನಿನ ದರ ಅನುಸರಿಸಿ, ಸ್ವತ್ತುಗಳ ಅಪಮೌಲ್ಯಗೊಳಿಸಿ ನೋಂದಾಯಿಸಿ ಸರ್ಕಾರಕ್ಕೆ ₹12.91 ಕೋಟಿ ರಾಜಸ್ವ ನಷ್ಟ ಉಂಟು ಮಾಡಿದ್ದಾರೆ. ಹೀಗಾಗಿ, ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಲಾಗಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಉಪ ನೋಂದಣಾಧಿಕಾರಿಗಳಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿರುವ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ಅವರು ಗುರುವಾರ ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.