ADVERTISEMENT

ಖಾನಾಪುರ: ಸಮಗ್ರ ಕೃಷಿಯಿಂದ ಯಶಸ್ಸು ನಿಶ್ಚಿತ

ಉತ್ತಮ ಆದಾಯ ಗಳಿಸುತ್ತಿರುವ ದೇವಲತ್ತಿಯ ಕೃಷಿಕ ನಿಂಗನಗೌಡ ಪಾಟೀಲ

ಪ್ರಸನ್ನ ಕುಲಕರ್ಣಿ
Published 28 ಫೆಬ್ರುವರಿ 2025, 6:26 IST
Last Updated 28 ಫೆಬ್ರುವರಿ 2025, 6:26 IST
ಖಾನಾಪುರ ತಾಲ್ಲೂಕಿನ ದೇವಲತ್ತಿಯಲ್ಲಿ ರೈತ ನಿಂಗನಗೌಡ ಪಾಟೀಲ ತಮ್ಮ ಜಮೀನಿನಲ್ಲಿ ಬೆಳೆದಿರುವ ರೇಷ್ಮೆ ಬೆಳೆ
ಖಾನಾಪುರ ತಾಲ್ಲೂಕಿನ ದೇವಲತ್ತಿಯಲ್ಲಿ ರೈತ ನಿಂಗನಗೌಡ ಪಾಟೀಲ ತಮ್ಮ ಜಮೀನಿನಲ್ಲಿ ಬೆಳೆದಿರುವ ರೇಷ್ಮೆ ಬೆಳೆ   

ಖಾನಾಪುರ: ‘ಒಂದೇ ಬೆಳೆ ನೆಚ್ಚಿಕೊಂಡರೆ, ಕೆಲವೊಮ್ಮೆ ಆರ್ಥಿಕ ನಷ್ಟ ಎದುರಿಸಬೇಕಾಗಬಹುದು’ ಎಂಬುದನ್ನು ಅರಿತ ತಾಲ್ಲೂಕಿನ ದೇವಲತ್ತಿಯ ರೈತ ನಿಂಗನಗೌಡ ಪಾಟೀಲ, ಸಮಗ್ರ ಕೃಷಿಯಲ್ಲಿ ತೊಡಗಿದ್ದಾರೆ.  

ಹೊಲದಲ್ಲೇ ಮನೆ ನಿರ್ಮಿಸಿಕೊಂಡು ಇಡೀ ಕುಟುಂಬದೊಂದಿಗೆ ವಾಸಿಸುತ್ತಿರುವ ಅವರು, 15 ಎಕರೆ ಜಮೀನಿನಲ್ಲಿ ಸಾವಯವ ಪದ್ಧತಿಯಡಿ ಕೃಷಿ ಮಾಡುತ್ತಿದ್ದಾರೆ. ಪ್ರತಿವರ್ಷ ಉತ್ತಮ ಆದಾಯ ಗಳಿಕೆ ಮೂಲಕ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.

ಆರು ಎಕರೆ ಪ್ರದೇಶದಲ್ಲಿ ಮುಖ್ಯಬೆಳೆಯಾಗಿ ಕಬ್ಬು ಬೆಳೆಯುತ್ತಿರುವ ಅವರು, ಎರಡು ಎಕರೆಯಲ್ಲಿ ರೇಷ್ಮೆ ಬೆಳೆಯತ್ತಿದ್ದಾರೆ. ಉಳಿದ ಜಮೀನಿನಲ್ಲಿ ಮಾವು, ಸಾಗವಾನಿ, ಗೋಡಂಬಿ ಗಿಡ ಬೆಳೆಸಿದ್ದಾರೆ. ಮಳೆಗಾಲದಲ್ಲಿ ಭತ್ತ, ಬೇಸಿಗೆಯಲ್ಲಿ ಹಸಿಮೆಣಸಿನಕಾಯಿ ಬೆಳೆಯುತ್ತಿದ್ದಾರೆ.

ADVERTISEMENT

ಮನೆಯಲ್ಲಿ ನಿತ್ಯ ಬಳಕೆಗೆ ಅಗತ್ಯವಿರುವ ಮೆಣಸು, ಕರಿಬೇವು, ಅಡಿಕೆ, ಲಿಂಬೆ, ಹುಣಸೆ, ಬಾಳೆ, ವಿವಿಧ ತರಕಾರಿ, ಹಣ್ಣು, ಕಾಫಿ, ಏಲಕ್ಕಿಯನ್ನು ಖಾಲಿ ಜಮೀನಿನಲ್ಲಿ ಸಣ್ಣ ಪ್ರಮಾಣದಲ್ಲಿ ಬೆಳೆದಿದ್ದಾರೆ.

ಸರ್ಕಾರದ ವಿವಿಧ ಯೋಜನೆಗಳ ಸಹಾಯ ಪಡೆದು ಕೃಷಿ ಮಾಡುವ ಜತೆಗೆ, ಶಿಸ್ತುಬದ್ಧವಾಗಿ ಹೈನುಗಾರಿಕೆ, ತೋಟಗಾರಿಕೆ, ಕುರಿ ಸಾಕಾಣಿಕೆ ಮತ್ತು ರೇಷ್ಮೆ ಕೃಷಿಯಲ್ಲಿ ತೊಡಗಿದ್ದಾರೆ. ಕುಟುಂಬದಲ್ಲಿರುವ ಒಂಭತ್ತು ಸದಸ್ಯರು ಅವರ ಪೂರ್ಣಾವಧಿ ಕೃಷಿಗೆ ನೆರವಾಗುತ್ತಾರೆ. ತಮ್ಮೂರಿನ ಐವರು ಕಾರ್ಮಿಕರಿಗೆ ವರ್ಷವಿಡೀ ಕೆಲಸ ಒದಗಿಸಿದ್ದಾರೆ.

ಐದು ಆಕಳು, ಒಂದು ಎಮ್ಮೆ ಸಾಕಿದ್ದು, ಅವು ನೀಡುವ ಹಾಲು, ಮೊಸರು, ಬೆಣ್ಣೆ ಮಾರಾಟದಿಂದಲೂ ಒಂದಿಷ್ಟು ಆದಾಯ ನಿಯಮಿತವಾಗಿ ಕೈಗೆಟುಕುತ್ತಿದೆ. 

ಉತ್ತಮ ಇಳುವರಿ ಬರುತ್ತಿದೆ: ‘ನಾನು ಗೋಮೂತ್ರ, ಗಂಜಲು, ಸಗಣಿಯನ್ನು ರಸಗೊಬ್ಬರ ಸಿದ್ಧಪಡಿಸಲು ಬಳಸುತ್ತಿದ್ದೇನೆ. ಶೂನ್ಯ ಬಂಡವಾಳ ಕೃಷಿಯ ಭಾಗವಾಗಿ ನನ್ನ ಜಮೀನಿನ ಎತ್ತರದ ಪ್ರದೇಶದಲ್ಲಿ ಕೃಷಿಹೊಂಡ ನಿರ್ಮಿಸಿ, ಅದರಲ್ಲಿ ಕೃಷಿ ತ್ಯಾಜ್ಯ, ಸಾಕುಪ್ರಾಣಿಗಳ ತ್ಯಾಜ್ಯ, ಸಗಣಿ, ಗೋಮೂತ್ರ, ಗೋಕೃಪಾಮೃತ, ವೇಸ್ಟ್ ಡಿ ಕಂಪೋಜರ್, ಜೀವಾಮೃತ, ಗೋನಂದಾಜಲ, ಪಂಚಗವ್ಯ, ಸಗಣಿ ಗೊಬ್ಬರ, ಹಸಿರೆಲೆ ಗೊಬ್ಬರ, ಎರೆಜಲ ಮಿಶ್ರಣ ಮಾಡುತ್ತೇನೆ. ಅದೇ ನೀರನ್ನು ಬೆಳೆಗೆ ಉಣಿಸುತ್ತಿರುವ ಕಾರಣ, ಉತ್ತಮ ಇಳುವರಿ ಬರುತ್ತಿದೆ’ ಎಂದು ನಿಂಗನಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗ ಬೇಡಿಕೆಯಂತೆ ಹೆಚ್ಚಿನ ಕಾರ್ಮಿಕರು ದುಡಿಯಲು ಸಿಗುತ್ತಿಲ್ಲ. ಈ ಕೊರತೆ ನೀಗಿಸಲು ಯಂತ್ರೋಪಕರಣ ಬಳಸಿಕೊಳ್ಳುತ್ತಿದ್ದೇನೆ. ಸಾವಯವ ಪದ್ಧತಿ ಅನುಸರಿಸುವ ಕಾರಣ, ಕೃಷಿಗೆ ವ್ಯಯಿಸುವ ಖರ್ಚು ಕಡಿಮೆಯಾಗಿದೆ. ಸಮಗ್ರ ಕೃಷಿಯಿಂದ ವರ್ಷಕ್ಕೆ ₹5 ಲಕ್ಷ ಆದಾಯ ಕೈಸೇರುತ್ತಿದೆ’ ಎಂದರು.

ನಿಂಗನಗೌಡ ಪಾಟೀಲ ಅವರು ಸಾಕಿರುವ ದನ–ಕರುಗಳು
ಜನರಿಗೆ ಪೋಷಕಾಂಶವುಳ್ಳ ಆಹಾರ ಒದಗಿಸುವ ಉದ್ದೇಶದಿಂದ ಸಾವಯವ ಕೃಷಿ ಮಾಡುತ್ತಿದ್ದೇನೆ. ಇದರಿಂದ ಉತ್ತಮ ಆದಾಯ ನೆಮ್ಮದಿ ಎರಡೂ ಸಿಕ್ಕಿದೆ
ನಿಂಗನಗೌಡ ಪಾಟೀಲ ಕೃಷಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.