ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಜಲಾಶಯದ ಕಚೇರಿಯಲ್ಲಿ ಮಂಗಳವಾರ ನಡೆದ ಮಲಪ್ರಭಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಶಾಸಕ ಸಿ.ಸಿ.ಪಾಟೀಲ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಜತೆ ಚರ್ಚಿಸಿದರು. ಶಾಸಕರಾದ ವಿಶ್ವಾಸ ವೈದ್ಯ, ಎನ್.ಎಚ್.ಕೋನರಡ್ಡಿ ಕೂಡ ಆಲಿಸಿದರು
– ಪ್ರಜಾವಾಣಿ ಚಿತ್ರ
ನವಿಲುತೀರ್ಥ: ‘ಕೆಲವೇ ದಿನಗಳಲ್ಲಿ ನವಿಲುತೀರ್ಥ ಜಲಾಶಯ ಸಂಪೂರ್ಣ ಭರ್ತಿಯಾಗಲಿದೆ. ಇನ್ನು ಒಂದು ವರ್ಷದವರೆಗೆ ಜನ, ಜಾನುವಾರು ಹಾಗೂ ಜಮೀನುಗಳಿಗೆ ಸಮರ್ಪಕ ನೀರು ನೀಡಲಾಗುವುದು’ ಎಂದು ಮಲಪ್ರಭಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರೂ ಆದ, ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
ನವಿಲುತೀರ್ಥ ಜಲಾಶಯದ ಅಧೀಕ್ಷಕ ಎಂಜಿನಿಯರ್ ಕಚೇರಿಯಲ್ಲಿ ಮಂಗಳವಾರ ಮಲಪ್ರಭಾ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು, ‘ಜಲಾಶಯ ಭರ್ತಿಯಾಗುವ ಹಂತ ತಲುಪಿದೆ. ಈಗಾಗಲೇ 3,594 ಕ್ಯುಸೆಕ್ ನೀರು ಹರಿಸಲಾಗುತ್ತಿದ್ದು, ಮಳೆ ಪ್ರಮಾಣ ಆಧರಿಸಿ ಇನ್ನೂ ಹೆಚ್ಚಿನ ನೀರು ಬಿಡಲಾಗುವುದು. ಜಲಾಶಯ ಭರ್ತಿಗೆ ನಾಲ್ಕೇ ಅಡಿ ಬಾಕಿ ಇದೆ. ಏಕಕಾಲಕ್ಕೆ ಹೆಚ್ಚಿನ ನೀರು ಬಿಡುಗಡೆಗೊಳಿಸಿದರೆ ಪ್ರವಾಹ ಪರಿಸ್ಥಿತಿ ತಲೆದೋರುತ್ತದೆ. ಸಂಕಷ್ಟ ಎದುರಾಗದಂತೆ ಉಪಾಯ ಮಾಡಿ ನೀರು ಹರಿಸಲಾಗುವುದು’ ಎಂದರು.
‘ನದಿಪಾತ್ರದ ಜನರ ಹಿತ ಗಮನದಲ್ಲಿ ಇಟ್ಟುಕೊಂಡು ಬುಧವಾರ ಜಲಾಶಯದಿಂದ 8,000ರಿಂದ 10 ಸಾವಿರ ಕ್ಯುಸೆಕ್ ನೀರು ಬಿಡಲಾಗುವುದು. ರೇಣುಕಾ ಯಲ್ಲಮ್ಮ ದೇವಿಗೆ ಪೂಜೆ ಸಲ್ಲಿಸಿ, ಮುಂದಿನ ಮಂಗಳವಾರ ಅಥವಾ ಶುಕ್ರವಾರ ಬಾಗಿನ ಅರ್ಪಿಸಲಾಗುವುದು’ ಎಂದು ಹೇಳಿದರು.
ಬೇಕಾದಾಗ ನೀರು ಬಿಡುವುದಿಲ್ಲ:
‘ಬೇಸಿಗೆಯಲ್ಲಿ ಜನ ಮತ್ತು ಜಾನುವಾರುಗಳಿಗೆ ಅಗತ್ಯವಿದ್ದಾಗ, ಜಲಾಶಯದಿಂದ ಕಾಲುವೆಗೆ ನೀರು ಹರಿಸುವುದಿಲ್ಲ. ಮಳೆಗಾಲದಲ್ಲಿ ಬೇಕಾಬಿಟ್ಟಿಯಾಗಿ ಬಿಡುತ್ತಾರೆ. ಇಲ್ಲಿ ನೀರಿನ ನಿರ್ವಹಣೆ ಸರಿಯಾಗಿಲ್ಲ’ ಎಂದು ಶಾಸಕರು ಹಾಗೂ ರೈತರು ಆಕ್ಷೇಪಿಸಿದರು.
‘ಜಲಾಶಯದಲ್ಲಿ ಸಂಗ್ರಹವಾಗುವ 37 ಟಿಎಂಸಿ ಅಡಿ ನೀರಿನಲ್ಲಿ 2025ರ ಜುಲೈವರೆಗೆ ಕುಡಿಯುವ ಉದ್ದೇಶಕ್ಕಾಗಿ 15 ಟಿಎಂಸಿ ಅಡಿ ಬಳಕೆಯಾಗಲಿದೆ. ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ನೀರಿನ ಸಮಸ್ಯೆ ಎದುರಾಗದು. ಜಲಾಶಯದ ನೀರನ್ನು ಸಮರ್ಪಕವಾಗಿ ಬಳಸಿಕೊಂಡು, ಮುಂದಿನ ವರ್ಷದವರೆಗೆ ರೈತರ ಜಮೀನು, ಜನ– ಜಾನುವಾರುಗಳಿಗೆ ಪೂರೈಸಲಾಗುವುದು’ ಎಂದು ಸಚಿವೆ ಉತ್ತರಿಸಿದರು.
ನವಲಗುಂದ ಶಾಸಕ ಎನ್.ಎಚ್.ಕೋನರೆಡ್ಡಿ, ನರಗುಂದ ಶಾಸಕ ಸಿ.ಸಿ.ಪಾಟೀಲ, ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಸಲಹೆ ನೀಡಿದರು. ಸವದತ್ತಿ ಶಾಸಕ ವಿಶ್ವಾಸ ವೈದ್ಯ, ಮಲಪ್ರಭಾ ನೀರಾವರಿ ಸಲಹಾ ಸಮಿತಿ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.
‘ಕಡತದಲ್ಲಷ್ಟೇ ಯೋಜನೆ’
‘ನವಿಲುತೀರ್ಥ ಜಲಾಶಯ ಭರ್ತಿಯಾಗುವ ಹಂತಕ್ಕೆ ಬಂದಿದ್ದರೂ ಕಾಲುವೆಗಳನ್ನೇ ದುರಸ್ತಿಗೊಳಿಸಿಲ್ಲ, ಸ್ವಚ್ಛಗೊಳಿಸಿಲ್ಲ. ಯಾವಾಗ ಈ ಕೆಲಸ ಮಾಡುತ್ತೀರಿ’ ಎಂದು ಸಿ.ಸಿ.ಪಾಟೀಲ ಹಾಗೂ ರೈತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
‘ಕಾಲುವೆಗಳ ಅಂತ್ಯದವರೆಗೆ ಜಲಾಶಯದ ನೀರು ಹರಿಯುತ್ತಿಲ್ಲ. ಎಡದಂಡೆ ಕಾಲುವೆಗೆ ನೀರನ್ನೇ ನಿಡುತ್ತಿಲ್ಲ. ಹಲವು ಕಾಮಗಾರಿಗಳು ಕಡತಕ್ಕಷ್ಟೇ ಸೀಮಿತವಾಗಿವೆ’ ಎಂದು ದೂರಿದರು.
‘ಇನ್ನು ಮುಂದೆ ತಪ್ಪು ಮುಂದುವರಿಯಬಾರದು. ಜಲಾಶಯದ ನೀರು ಸರಾಗವಾಗಿ ಹರಿದುಹೋಗುವಂತೆ ಕಾಲುವೆಗಳನ್ನು ಸ್ವಚ್ಛಗೊಳಿಸಬೇಕು’ ಎಂದು ಸಚಿವೆ ತಾಕೀತು ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.