
ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ನಡೆದ ಸಭೆಯಲ್ಲಿ ಮಲಪ್ರಭಾ ಕಾರ್ಖಾನೆ ನಿರ್ದೇಶಕ ಫಕ್ಕೀರಪ್ಪ ಸಕ್ರೆಣ್ಣವರ ಮಾತನಾಡಿದರು
ಎಂ.ಕೆ.ಹುಬ್ಬಳ್ಳಿ: ಕಾರ್ಖಾನೆ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಕಟಾವು ತಂಡಗಳನ್ನು ನಿಯಂತ್ರಣದಲ್ಲಿಟ್ಟು, ರೈತರು ಕೊಟ್ಟಷ್ಟು ಹಣ ಪಡೆದು ಕಬ್ಬು ಕಟಾವು ಮಾಡಲು ಸೂಚಿಸಬೇಕು ಎಂದು ರೈತರು ಆಗ್ರಹಿಸಿದರು.
ಪಟ್ಟಣದ ಕಂಬಳಿ ಬಸವೇಶ್ವರ ದೇವಸ್ಥಾನದ ಬಳಿ ಗುರುವಾರ ಸಭೆ ನಡೆಸಿದ ರೈತರು, ಪಟ್ಟಣದ ಹಾಗೂ ಸುತ್ತಲಿನ ಗ್ರಾಮಗಳ ರೈತರು ಪ್ರತಿ ಟ್ರಿಪ್(ಗಾಡಿ) ಕಬ್ಬಿಗೆ, ಕಟಾವು ತಂಡಕ್ಕೆ ಒಂದು ಸಾವಿರ ಹಾಗೂ ಚಾಲಕರಿಗೆ ಎರಡು ನೂರು ಮಾತ್ರ ನೀಡಲು ನಿರ್ಧರಿಸಿದ್ದೇವೆ. ಕಟಾವು ಗ್ಯಾಂಗ್‌ಗಳು ರೈತರಿಂದ ಹೆಚ್ಚಿನ ಹಣ ಸುಲಿಗೆ ಮಾಡುತ್ತಿವೆ. ಇದು ರೈತರಿಗೆ ಹೊರೆಯಾಗುತ್ತಿದ್ದು, ಪ್ರತಿವರ್ಷ ಪಟ್ಟಣದ ರೈತರು ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ. ಹೀಗಾಗಿಯೇ ಈ ವರ್ಷ ರೈತರೆಲ್ಲ ಸೇರಿಕೊಂಡು ಈ ಒಮ್ಮತದ ನಿರ್ಧಾರ ಮಾಡಿದ್ದೇವೆ’ ಎಂದು ರೈತರು ತಿಳಿಸಿದರು.
ರೈತರು ನಿಗದಿಪಡಿಸಿದ ಹಣಕ್ಕಿಂತ ಹೆಚ್ಚಿಗೆ ಕೊಡಬಾರದು. ಕಬ್ಬು ಕಳಿಸಲು ಅವಸರ ಮಾಡಿ, ದರ ಹೆಚ್ಚಿಸಬಾರದು. ಎಲ್ಲ ರೈತರ ಕಬ್ಬನ್ನು ಸಮಾನವಾಗಿ ಕಾರ್ಖಾನೆಗಳು ಕಟಾವು ಮಾಡಿಸಿಕೊಂಡು ಹೋಗಬೇಕು. ತಮ್ಮ ಕಾರ್ಖಾನೆಗಳಿಂದ ರೈತರ ಜಮೀನುಗಳಿಗೆ ಕಳಿಸುವ ಕಟಾವು(ತೊಡ್ನಿ) ಗ್ಯಾಂಗ್‌ಗಳಿಗೆ ರೈತರು ನೀಡುವ ಹಣವಷ್ಟೆ ಪಡೆದುಕೊಂಡು ಸರಿಯಾಗಿ ಕಟಾವು ಮಾಡುವಂತೆ ಕಟಾವು ತಂಡಗಳಿಗೆ ಕಾರ್ಖಾನೆ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಸೂಚಿಸಬೇಕು ಎಂದು ಆಗ್ರಹಿಸಿದರು.
ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಫಕ್ಕೀರಪ್ಪ ಸಕ್ರೆಣ್ಣವರ ಮಾತನಾಡಿ, ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ರೈತರ ನಿರ್ಧಾರಕ್ಕೆ ಬದ್ಧವಿದೆ ಎರಡ್ಮೂರು ತಿಂಗಳಲ್ಲಿ ಕಬ್ಬು ಕಟಾವು ಪೂರ್ಣಗೊಳ್ಳುತ್ತದೆ. ಕಟಾವು ಗ್ಯಾಂಗ್‌ಗಳಿಗೆ ಹೆಚ್ಚಿಗೆ ಹಣ ಕೇಳದಂತೆ ಸೂಚಿಸುತ್ತೇವೆ’ ಎಂದು ಭರವಸೆ ನೀಡಿದರು.
ಎಂ.ಕೆ.ಹುಬ್ಬಳ್ಳಿ ಪಟ್ಟಣದ ರೈತರಿಂದಲೇ ಪ್ರತಿದಿನ ಮಲಪ್ರಭಾ ಕಾರ್ಖಾನೆಗೆ 500 ಟನ್‌ಗೂ ಅಧಿಕ ಕಬ್ಬು ಒಯ್ಯುತ್ತೇವೆ ಎಂದು ತಿಳಿಸಿದರು.
ರೈತರ ಸಭೆಗೆ ಆಗಮಿಸಿದ್ದ ಇತರ ಕಾರ್ಖಾನೆಗಳ ಸಿಬ್ಬಂದಿ ಕೂಡ ರೈತರ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದರು.
ಮಲಪ್ರಭಾ ಕಾರ್ಖಾನೆ ನಿರ್ದೇಶಕ ಶಂಕರ ಕಿಲ್ಲೇದಾರ, ಶ್ರೀಶೈಲ ಗಣಾಚಾರಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಪ್ರಕಾಶ ಕೊಡ್ಲಿ, ಸದಸ್ಯರಾದ ಸುರೇಶ ಮುತ್ನಾಳ, ದೇಮಪ್ಪ ಬಸರಗಿ, ರೈತರಾದ ಶಿವನಪ್ಪ ವಾಲಿ, ಸುರೇಶ ಕರವಿನಕೊಪ್ಪ, ಮಹಾಂತೇಶ ಗಣಾಚಾರಿ, ಮಲ್ಲಿಕಾರ್ಜುನ ದಡ್ಡಿ, ರಾಜು ಬೆಂಡಿಗೇರಿ, ರುದ್ರಪ್ಪ ಕರವಿನಕೊಪ್ಪ, ರಾಜು ಗಣಾಚಾರಿ, ಶಂಕರ ಕೊಡ್ಲಿ, ಈರಣ್ಣ ಕೊಡ್ಲಿ, ರಾಜು ಹರಕಮನಿ, ರಾಜು ಗಾಣಿಗೇರ, ಚಂಬಯ್ಯ ಕಲ್ಮಠ ಸೇರಿ ನೂರಾರು ರೈತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.