ADVERTISEMENT

ಬೆಳಗಾವಿ | ಗುಣಮಟ್ಟದ ಕಬ್ಬು: ರೈತರಿಗೆ ₹1,300 ಕೋಟಿ ಹೆಚ್ಚು ಆದಾಯ!

ಹೆಚ್ಚು ಲಾಭ ಮಾಡಿಕೊಂಡ ಕಾರ್ಖಾನೆಗಳು

ಸಂತೋಷ ಈ.ಚಿನಗುಡಿ
Published 8 ನವೆಂಬರ್ 2025, 4:14 IST
Last Updated 8 ನವೆಂಬರ್ 2025, 4:14 IST
<div class="paragraphs"><p> ಕಬ್ಬು ಖರೀದಿ</p></div>

ಕಬ್ಬು ಖರೀದಿ

   

ಬೆಳಗಾವಿ: ಕಳೆದ 2024–25ನೇ ಸಾಲಿನಲ್ಲಿ ರಾಜ್ಯದ ಕಬ್ಬು ಬೆಳೆಗಾರರು ನ್ಯಾಯಯುತ ಹಾಗೂ ಲಾಭದಾಯಕ ದರಕ್ಕಿಂತ (ಎಫ್‌ಆರ್‌ಪಿ) ₹1,300 ಕೋಟಿ ಹೆಚ್ಚುವರಿ ಆದಾಯ ಪಡೆದಿದ್ದಾರೆ. ಇದು ಸಕ್ಕರೆ ಕಾರ್ಖಾನೆಗಳು ತೋರಿಸಿದ ಉದಾರತೆ ಅಲ್ಲ; ರೈತರೇ ಗುಣಮಟ್ಟದ ಕಬ್ಬು ಬೆಳೆದು ಗಿಟ್ಟಿಸಿಕೊಂಡ ಆದಾಯ.

ರೈತರ ಶ್ರಮದಿಂದಾಗಿ ಕಾರ್ಖಾನೆಗಳಿಗೆ ಉತ್ತಮ ರಿಕವರಿ ಪಡೆದು, ಗಮನಾರ್ಹ ಲಾಭ ಮಾಡಿಕೊಂಡಿವೆ. ಸಕ್ಕರೆ ಆಯುಕ್ತಾಲಯ ಹಾಗೂ ಕರ್ನಾಟಕ ಕಬ್ಬು ನಿಯಂತ್ರಣ ಮಂಡಳಿಗಳು ಇದನ್ನು ದಾಖಲಿಸಿವೆ.

ADVERTISEMENT

81 ಕಾರ್ಖಾನೆಗಳು 585 ಲಕ್ಷ ಮೆಟ್ರಿಕ್‌ ಟನ್‌ ಕಬ್ಬು ನುರಿಸಿವೆ. ಇದರಿಂದ 52.91 ಲಕ್ಷ ಮೆಟ್ರಿಕ್‌ ಟನ್‌ ಸಕ್ಕರೆ ಉತ್ಪಾದನೆ ಮಾಡಿವೆ. ಕಳೆದ ಬಾರಿ ಕೂಡ ರಿಕವರಿ ದರವನ್ನು ಶೇ 10.25ಕ್ಕೆ ನಿಗದಿ ಮಾಡಲಾಗಿತ್ತು. (ರಿಕವರಿ ಎಂದರೆ ಒಂದು ಟನ್‌ ಕಬ್ಬಿಗೆ ಉತ್ಪಾದನೆಯಾದ ಸಕ್ಕರೆಯ ಶೇಕಡ ಪ್ರಮಾಣ)

ಆದರೆ, 81 ಕಾರ್ಖಾನೆಗಳ ಪೈಕಿ ಉತ್ತರ ಕರ್ನಾಟಕದ 48 ಕಾರ್ಖಾನೆಗಳಲ್ಲಿ ರಿಕವರಿ ಪ್ರಮಾಣ ಶೇ 10.50ರಿಂದ ಶೇ 12.50 ರವರೆಗೂ ಬಂದಿದೆ. ಉಳಿದ 33 ಕಾರ್ಖಾನೆಗಳೂ ನಿಗದಿತ ಪ್ರಮಾಣಕ್ಕಿಂತ ಕಡಿಮೆ; ಅಂದರೆ ಶೇ 8ರಿಂದ 10ರಷ್ಟು ರಿಕವರಿ ದಾಖಲಿಸಿವೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಸಂಗಮ ಸಹಕಾರ ಸಕ್ಕರೆ ಕಾರ್ಖಾನೆಯು ರಾಜ್ಯದಲ್ಲೇ ಅತಿ ಹೆಚ್ಚು; ಅಂದರೆ ಶೇ 12.53ರಷ್ಟು ರಿಕವರಿ ದಾಖಲಿಸಿದೆ. ಮಂಡ್ಯದಲ್ಲಿರುವ ಮೈಸೂರು ಶುಗರ್ಸ್‌ ಶೇ 6.35 ಇಳುವರಿ ದರ ಪಡೆಯುವ ಮೂಲಕ ಅತ್ಯಂತ ಕಳಪೆ ಎಣಿಸಿಕೊಂಡಿದೆ.

ಲಾಭ ಸಿಗಲು ಕಾರಣವೇನು?: ಉತ್ಪಾದನೆಯಾದ ಸಕ್ಕರೆ ಪ್ರಮಾಣದಲ್ಲಿ ಶೇ 1ರಷ್ಟು (ರಿಕವರಿ) ಹೆಚ್ಚಾದರೆ ಪ್ರತಿ ಟನ್‌ ಕಬ್ಬಿಗೆ ₹346 ಹೆಚ್ಚು ದರ ಕೊಡಲಾಗುತ್ತದೆ. ಕಡಿಮೆಯಾದರೆ ಇಷ್ಟೇ ದರ ಕಡಿಮೆ ಮಾಡಲಾಗುತ್ತದೆ.

ಶೇ 10.25ಕ್ಕಿಂತ ಹೆಚ್ಚು ರಿಕವರಿ ಪಡೆದಿರುವ 48 ಕಾರ್ಖಾನೆಗಳಿಂದ ರೈತರಿಗೆ ಹೆಚ್ಚು ಆದಾಯ ಹೋಗಿದೆ. ಬೆಳಗಾವಿ ಜಿಲ್ಲೆಯ ಎಲ್ಲ 29 ಕಾರ್ಖಾನೆಗಳೂ ಶೇ 10.70ಕ್ಕಿಂತ ಹೆಚ್ಚು ರಿಕವರಿ ನೀಡಿವೆ. ಹೀಗಾಗಿ, ರಾಜ್ಯದ ರೈತರು ಪಡೆದ ₹1,300 ಕೋಟಿ ಹೆಚ್ಚುವರಿ ಲಾಭದಲ್ಲಿ ₹418.56 ಕೋಟಿಯನ್ನು ಇಲ್ಲಿನ ರೈತರೇ ಬಾಚಿಕೊಂಡಿದ್ದಾರೆ.

ರೈತರ ಹೋರಾಟಕ್ಕೆ ಕಾರಣವೇನು?

ಎಫ್‌ಆರ್‌ಪಿಗಿಂತ ಹೆಚ್ಚು ಆದಾಯವನ್ನು ರೈತರು ಪಡೆಯುತ್ತಿದ್ದರೂ ಹೋರಾಟ ಮಾಡುತ್ತಿರುವುದು ಏಕೆ ಎಂಬ ಪ್ರಶ್ನೆ ಕಾಡಬಹುದು. ಆದರೆ, ರೈತರು ತಮ್ಮ ಶ್ರಮದಿಂದ ಆದಾಯ ಪಡೆಯುತ್ತಿದ್ದಾರೆ. ಶ್ರಮಕ್ಕೆ ತಕ್ಕ ಲಾಭ ಸಿಗುತ್ತಿಲ್ಲ ಎಂಬುದು ಅವರ ತಕರಾರು.

ಕಳೆದ ವರ್ಷ ಟನ್‌ ಕಬ್ಬಿಗೆ ₹3,005 ದರ ನೀಡಲಾಗಿದೆ. ಗುಣಮಟ್ಟದ ಕಬ್ಬು ನೀಡಿದ್ದರಿಂದ ₹4,100ರವರೆಗೆ ಆದಾಯ ಬಿಲ್‌ ಪಡೆದಿದ್ದಾರೆ. ಈ ಬಾರಿ ಮೂಲ ದರವನ್ನೇ ₹3,550ಕ್ಕೆ ಹೆಚ್ಚಿಸಬೇಕು, ಗರಿಷ್ಠ ₹5,000ವರೆಗೆ ಆದಾಯ ದೊರೆಯಲಿದೆ ಎಂಬುದು ರೈತರ ಆಶಯ.

ಕಬ್ಬನ್ನು ಖರೀದಿಸಿ, ಸಂಗ್ರಹಿಸಿ ಇಡಲು ಬರುವುದಿಲ್ಲ. ಹಾಗಾಗಿ, ಸರ್ಕಾರ ಇದಕ್ಕೆ ಬೆಂಬಲ ಬೆಲೆ ಘೋಷಣೆ ಮಾಡಲು ಬರುವುದಿಲ್ಲ. ಬದಲಾಗಿ, ಕೇಂದ್ರ ಸರ್ಕಾರ ದೇಶದಾದ್ಯಂತ ಒಂದೇ ತೆರನಾದ ಎಫ್‌ಆರ್‌ಪಿ ನಿಗದಿ ಮಾಡುತ್ತದೆ.

ಕಳೆದ ವರ್ಷ ರಿಕವರಿ ದರ ಉತ್ತಮವಾಗಿದೆ. ಎಲ್ಲ ಕಾರ್ಖಾನೆಗಳೂ ಶೇ 100ರಷ್ಟು ಬಿಲ್ ಪಾವತಿ ಮಾಡಿವೆ. ರೈತರು ಎಫ್‌ಆರ್‌ಪಿಗಿಂತ ಉತ್ತಮ ಆದಾಯ ಪಡೆದಿದ್ದಾರೆ.
-ಗೋವಿಂದ ರೆಡ್ಡಿ, ಸಕ್ಕರೆ ಆಯುಕ್ತ, ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.