ADVERTISEMENT

ಚನ್ನಮ್ಮನ ಕಿತ್ತೂರು: ಕಬ್ಬು ದರ ನಿಗದಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 2:29 IST
Last Updated 30 ಅಕ್ಟೋಬರ್ 2025, 2:29 IST
ಚನ್ನಮ್ಮನ ಕಿತ್ತೂರಿನಲ್ಲಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತ ಮುಖಂಡರು ಬುಧವಾರ ತಹಶೀಲ್ದಾರ್ ಕಲಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು
ಚನ್ನಮ್ಮನ ಕಿತ್ತೂರಿನಲ್ಲಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತ ಮುಖಂಡರು ಬುಧವಾರ ತಹಶೀಲ್ದಾರ್ ಕಲಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು   

ಚನ್ನಮ್ಮನ ಕಿತ್ತೂರು: ಸಕ್ಕರೆ ಕಾರ್ಖಾನೆಗಳಿಗೆ ರೈತರು ಪೂರೈಕೆ ಮಾಡುವ ಮೆಟ್ರಿಕ್ ಟನ್ ಕಬ್ಬಿಗೆ ₹3,500 ಧಾರಣಿ ನಿಗದಿ ಪಡಿಸಬೇಕು, ತೂಕದಲ್ಲಾಗುತ್ತಿರುವ ಮೋಸ ತಡೆಯಬೇಕು, ಪೂರೈಕೆ ಮಾಡಿದ ಕಬ್ಬಿಗೆ ಹದಿನೈದು ದಿನದೊಳಗೆ ಬಿಲ್ ಪಾವತಿ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕಿತ್ತೂರು ಕರ್ನಾಟಕ ರೈತ ಜಾಗೃತಿ ಸಂಘಟನೆಯು ಇಲ್ಲಿನ ಚನ್ನಮ್ಮ ವರ್ತುಲದಲ್ಲಿ ಬುಧವಾರ ಪ್ರತಿಭಟನೆ ನಡೆಸಿತು.

ಪ್ರತಿಭಟನೆ ಸಭೆಯಲ್ಲಿ ಸಂಘಟನೆ ಅಧ್ಯಕ್ಷ ಎಂ.ಎಫ್. ಜಕಾತಿ ಮಾತನಾಡಿ, ರೈತರ ಕಬ್ಬಿಗೆ ಬೆಲೆ ನಿಗದಿ ಮಾಡಿ ಕಾರ್ಖಾನೆ ಪ್ರಾರಂಭ ಮಾಡಬೇಕು ಎಂದು ತಾಕೀತು ಮಾಡಿದರು.

ಮುಖಂಡ ಅಪ್ಪೇಶ ದಳವಾಯಿ ಮಾತನಾಡಿ, ಕಬ್ಬಿನ ತೂಕದಲ್ಲಿ ಸಕ್ಕರೆ ಕಾರ್ಖಾನೆಯವರು ರೈತರಿಗೆ ಮೋಸ ಮಾಡುತ್ತಿದ್ದಾರೆಂದು ಶಾಸಕ ಲಕ್ಷ್ಮಣ ಸವದಿ ವಿಧಾನಸಭೆಯಲ್ಲಿಯೇ ಮಾತನಾಡಿದ್ದಾರೆ. ಅದನ್ನು ತಡೆಯಲು ಸರ್ಕಾರದ ವತಿಯಿಂದ ಆಯಾ ಕಾರ್ಖಾನೆ ಆವರಣದಲ್ಲಿ ತೂಕದ ಯಂತ್ರ ಅಳವಡಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಪ್ರವೀಣ ಸರದಾರ ಮಾತನಾಡಿ, ರೈತರು ಆರ್ಥಿಕವಾಗಿ ತೀವ್ರ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇದನ್ನು ಮನಗಂಡಿರುವ ಕಾರ್ಖಾನೆ ಮಾಲೀಕರಿಗೆ ಬೆಲೆ ನಿಗದಿ ಮಾಡಿ ಕಬ್ಬು ನುರಿಸಬೇಕು ಎಂಬ ಆಲೋಚನೆ ಬರುತ್ತಿಲ್ಲ ಎಂದು ನುಡಿದರು.

ಮುಖಂಡರಾದ ಶಿವಾನಂದ ಹೊಳೆಹಡಗಲಿ, ವಿಜಯಕುಮಾರ ಶಿಂದೆ, ನಾಗರತ್ನ ಪಾಟೀಲ, ಶಿವನಸಿಂಗ್ ಮೊಕಾಶಿ, ಮಡಿವಾಳೆಪ್ಪ ವರಗಣ್ಣವರ, ರಾಚಯ್ಯ ತೊರಗಲ್ಮಠ, ಅಶೋಕ ಕುಗಟಿ, ಫಕ್ಕೀರಪ್ಪ ಜಾಂಗಟಿ, ಮಲ್ಲೇಶ ಮಾದಾರ, ಕಲ್ಲಪ್ಪ ಬುಡರಕಟ್ಟಿ, ಸುತ್ತಲಿನ ಹಳ್ಳಿಗಳ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಅನಂತರ ತಹಶೀಲ್ದಾರ್ ಕಚೇರಿಗೆ ಹೋಗಿ ಮನವಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.