ADVERTISEMENT

ಮೂಡಲಗಿ | ಟನ್‌ ಕಬ್ಬಿಗೆ ₹3500 ಬಲೆ ನಿಗದಿಗೆ ಒತ್ತಾಯ: ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 4:43 IST
Last Updated 31 ಅಕ್ಟೋಬರ್ 2025, 4:43 IST
ಪ್ರಸಕ್ತ ಹಂಗಾಮಿಗೆ ಟನ್‌ ಕಬ್ಬಿಗೆ 3500 ಬೆಲೆ ನಿಗದಿಗೊಳಿಸಬೇಕು ಎಂದು ಒತ್ತಾಯಿಸಿ  ಮೂಡಲಗಿ ತಾಲ್ಲೂಕಿನ ಗುರ್ಲಾಪುರ ಬಳಿಯಲ್ಲಿ ರಾಜ್ಯ ಹೆದ್ದಾರಿಯಲ್ಲಿ ಗುರುವಾರ ರೈತರು ಬೃಹತ್ತ ಪ್ರತಿಭಟನೆ ಮಾಡಿದರು. 
ಪ್ರಸಕ್ತ ಹಂಗಾಮಿಗೆ ಟನ್‌ ಕಬ್ಬಿಗೆ 3500 ಬೆಲೆ ನಿಗದಿಗೊಳಿಸಬೇಕು ಎಂದು ಒತ್ತಾಯಿಸಿ  ಮೂಡಲಗಿ ತಾಲ್ಲೂಕಿನ ಗುರ್ಲಾಪುರ ಬಳಿಯಲ್ಲಿ ರಾಜ್ಯ ಹೆದ್ದಾರಿಯಲ್ಲಿ ಗುರುವಾರ ರೈತರು ಬೃಹತ್ತ ಪ್ರತಿಭಟನೆ ಮಾಡಿದರು.    

ಮೂಡಲಗಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕಬ್ಬು ಬೆಳೆಗಾರರ ವಿವಿಧ ಸಂಘಟನೆಗಳಿಂದ ಪ್ರಸಕ್ತ ಹಂಗಾಮಿಗೆ ಟನ್‌ ಕಬ್ಬಿಗೆ ₹3500 ಬೆಲೆ ನಿಗದಿಗೊಳಿಸಬೇಕು ಎಂದು ಒತ್ತಾಯಿಸಿ ಗುರುವಾರ ತಾಲ್ಲೂಕಿನ ಗುರ್ಲಾಪುರ ಬಳಿಯ ನಿಪ್ಪಾಣಿ– ಮುಧೋಳ ರಾಜ್ಯ ರಸ್ತೆಯ ಮೇಲೆ ಸಾವಿರಾರು ಸಂಖ್ಯೆಯ ರೈತರು ಕುಳಿತು ಪ್ರತಿಭಟನೆ ನಡೆಸಿದರು.

ಬೆಳಗಾವಿ ಜಿಲ್ಲೆ ಸೇರಿದಂತೆ ಪಕ್ಕದ ಬಾಗಲಕೋಟೆ, ವಿಜಯಪುರ ಜಿಲ್ಲೆಯ ಅನೇಕ ರೈತರು ಪ್ರತಿಭಟನೆಯಲ್ಲಿ ಭಾವವಹಿಸಿ ಸರ್ಕಾರದ ವಿರುದ್ಧ ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರು ಮತ್ತು ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿದರು. ಹಸಿರು ಟವಲು ಮತ್ತು ಬಾರಕೋಲಗಳನ್ನು ಪ್ರದರ್ಶಿಸಿ  ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ಇರುವ ಮುಖ್ಯಮಂತ್ರಿ, ಸಕ್ಕರೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗಿದರು. ಜೈ ಜವಾನ್‌ ಜೈ ಕಿಸಾನ್‌ ಎನ್ನುವ ಘೋಷಣೆಗಳು ಮುಗಿಲು ಮುಟ್ಟಿದ್ದವು.

ADVERTISEMENT

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ, ರಾಜ್ಯಾಧ್ಯಕ್ಷ ಚುನ್ನಪ್ಪ ಪುಜಾರಿ, ಬಾಗಲಕೋಟದ ಈರಪ್ಪ ಹಂಚಿನಾಳ, ಸಂಚಾಲಕ ಬಾಬುರಾವ ಪಾಟೀಲ, ಧರೆಪ್ಪ ಮಂಗಳೂರ, ಮಕ್ತುಮ ನದಾಫ, ಚಿಕ್ಕೋಡಿ ಜಿಲ್ಲಾಧ್ಯಕ್ಷ ಮಲ್ಲಪ್ಪ ಅಂಗಡಿ, ಮುಖಂಡರಾದ ರಮೇಶ ಕಲ್ಲಾರ, ಶ್ರೀಶೈಲ್‌ ಅಂಗಡಿ, ಸತ್ಯಪ್ಪ ಮಲ್ಲಾಪೂರೆ, ನಿಂಗಪ್ಪ ಪಕಾಡಿ ಸೇರಿದಂತೆ ಹಲವರು ಪ್ರತಿಭಟನಕಾರರನ್ನು ಉದ್ಧೇಶಿಸಿ ಮಾತನಾಡಿ ಕಬ್ಬಿಗೆ ದರ ನಿಗದಿಯಾಗುವ ವರೆಗೆ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದರು. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಪ್ರಸಕ್ತ ಹಂಗಾಮಿಗೆ ಕಬ್ಬಿನ ಬೆಲೆ ಘೋಷಣೆಯಾಗಬೇಕು ಎಂದು ಒತ್ತಾಯಿಸಿದರು.

ಸರ್ಕಾರವು ಸಕ್ಕರೆ ಕಾರ್ಖಾನೆ ಮಾಲೀಕರ ಗುಲಾಮರಂತೆ ವರ್ತಿಸುತ್ತಿದೆ ಹೊರತು ರೈತರ ಹಿತ ಕಾಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜನಪ್ರತಿನಿಧಿಗಳು ಸ್ವಂತ ಸಕ್ಕರೆ ಕಾರ್ಖಾನೆಗಳನ್ನು ಹೊಂದಿದ್ದು ಕಬ್ಬು ಬೆಳೆಗಾರರ ಕಷ್ಟ, ಅವರ ಕಷ್ಟ ಗೊತ್ತಾಗುತ್ತಿಲ್ಲ ಎಂದು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಪಕ್ಕದ ಮಹಾರಾಷ್ಟ್ರದಲ್ಲಿ ಟನ್‌ ಕಬ್ಬಿಗೆ ₹3600 ಬೆಲೆ ಕೊಡುತ್ತಿದ್ದು, ಅವರಿಗೆ ಸಾಧ್ಯವಾಗಿರುವಾಗ ಕರ್ನಾಟಕದ ಸಕ್ಕರೆ ಕಾರ್ಖಾನೆಯವರಿಗೆ ಏನಾಗಿದೆ. ಒಂದು ಟನ್‌ ಕಬ್ಬಿನಿಂದ ಲಕ್ಷಾಂತರ ಹಣವನ್ನು ಲಾಭ ಮಾಡಿಕೊಳ್ಳುವರು, ಸರ್ಕಾರದ ಬೊಕ್ಕಸಕ್ಕೆ ತೆರಿಗೆ ಸೇರುವುದು. ಆದರೆ ರೈತ ಮಾತ್ರ ತನ್ನ ಕಷ್ಟಕ್ಕೆ ತಕ್ಕಂತೆ ಬೆಲೆ ದೊರೆಯದೆ ಕಷ್ಟದಲ್ಲಿ ಬೀದಿಗೆ ಬರಬೇಕಾಗಿದೆ’ ಎಂದರು.

ದೇಶದಲ್ಲಿ ಶೇ75 ರೈತರಿದ್ದು ನಮ್ಮ ಮತದ ಶಕ್ತಿಯಿಂದ ಶಾಸಕರು, ಸಚಿವರು, ಪ್ರಧಾನಿಯಾಗುತ್ತಿದ್ದು ಮತ್ತು ಸರ್ಕಾರವು ಅಸ್ತಿತ್ವಕ್ಕೆ ಬರುತ್ತದೆ. ಆದರೆ ದೇಶಕ್ಕೆ ಅನ್ನ ಹಾಕುವ ರೈತರ ಬಗ್ಗೆ ಯಾರಿಗೂ ಕಾಳಜಿ ಇಲ್ಲ. ಚುನಾವಣೆ ಪ್ರಣಾಳಿಕೆಯಲ್ಲಿ ಮಾತ್ರ ರೈತರ ಪರವಾದ ದೊಡ್ಡ ಭರವಸೆ ತೋರಿಸಿ, ಅಧಿಕಾರ ಬಂದ ಮೇಲೆ ರೈತರು ಇವರ ಕಣ್ಣಿಗೆ ಕಾಣುವದಿಲ್ಲ ಎಂದು ದೂರಿದರು.

ಸ್ಥಳಕ್ಕೆ ಆಗಮಿಸಿದ್ದ ರಾಯಬಾಗದ ಜೆಡಿಎಸ್‌ ಮುಖಂಡ ಪ್ರತಾಪರಾವ ಪಾಟೀಲ, ಮಾಜಿ ಶಾಸಕ ಶಶಿಕಾಂತ ನಾಯಕ ಪ್ರತಿಭಟನಕಾರರಿಗೆ ಬೆಂಬಲ ನೀಡಿ ಮಾತನಾಡಿದರು.

ಸಂಜೆ ಹೊತ್ತಿಗೆ ಚಿಕ್ಕೋಡಿ ಎಸಿ ಸ್ಥಳಕ್ಕೆ ಆಗಮಿಸಿ ಶುಕ್ರವಾರ ಬೆಳಿಗ್ಗೆ 10ಕ್ಕೆ ಜಿಲ್ಲಾಧಿಕಾರಿಗಳ ಬಳಿಯಲ್ಲಿ ಮಾತುಕತೆಗೆ ಆಹ್ವಾನಿಸಿರುವ ಬಗ್ಗೆ ತಿಳಿಸಿದರು. ರೈತರು ಅದನ್ನು ತಿರಸ್ಕರಿಸಿ ಜಿಲ್ಲಾಧಿಕಾರಿಗಳು ರೈತರ ಬಳಿಗೆ ಬಂದು ಬೆಲೆ ಬಗ್ಗೆ ತಿಳಿಸಬೇಕು ಹಠ ಹಿಡಿದು, ಮುಷ್ಕರವನ್ನು ಅಹೋರಾತ್ರಿ ಮಾಡಲು ನಿರ್ಧರಿಸಿ ಮುಂದುವರಿಸಿದರು.

ಬೆಳಿಗ್ಗೆಯಿಂದ ರಾಜ್ಯ ಹೆದ್ದಾರಿ ಬಂದಾಗಿದ್ದರಿಂದ ನೂರಾರು ವಾಹನಗಳು ಸುತ್ತುಬಳಸಿ ಸಾಗಿದವು.

ಆರ್‌ಎಸ್‌ಎಸ್‌ ಬ್ಯಾನ್‌ ಮಾಡಿರಿ ಎಂದು ಪತ್ರ ಬರೆದರೆ ಮುಖ್ಯಮಂತ್ರಿಗಳು ತಕ್ಷಣ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅದರೆ ರೈತರಿಗೆ ಕಬ್ಬಿಗೆ ಬೆಲೆ ನಿಗದಿ ಮಾಡಬೇಕು ಎಂದು ರೈತರು ಬೀದಿಗೆ ಇಳಿದರು ಸರ್ಕಾರ ಸ್ಪಂದಿಸುತ್ತಿಲ್ಲ
ಬಸವಕಲ್ಯಾಣದ ಬಸವ ಪ್ರಭು ಸ್ವಾಮೀಜಿ

ಹೋರಾಟಕ್ಕೆ ಬೆಂಬಲ

ಮೂಡಲಗಿ ಮತ್ತು ರಾಯಬಾಗ ತಾಲ್ಲೂಕಗಳ ವಕೀಲರ ಸಂಘ ಹಾಗೂ ಮಾಜಿ ಸೈನಿಕರ ಸಂಘದವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರ ಹೋರಾಟಕ್ಕೆ ಬೆಂಬಲಿಸಿದರು. ಕಬ್ಬಿಗೆ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು. ಹೋರಾಟಕ್ಕೆ ಕಾನೂನು ಅವಶ್ಯವಿದ್ದರೆ ವಕೀಲರು ಉಚಿತವಾಗಿ ವಕಾಲತ್ತು ಮಾಡುವ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.