ADVERTISEMENT

ಅಕಾಲಿಕ ಮಳೆ: ರೈತರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 6:47 IST
Last Updated 9 ಜನವರಿ 2021, 6:47 IST

ಬೆಳಗಾವಿ: ಜಿಲ್ಲೆಯ ವಿವಿಧೆಡೆ ಆಗಾಗ ಅಕಾಲಿಕ ಮಳೆ ಆಗುತ್ತಿರುವುದರಿಂದ ದ್ರಾಕ್ಷಿ ಬೆಳೆಯಲ್ಲಿ ಹಾನಿ ತಪ್ಪಿಸಲು ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರಿಗೆ ಸಲಹೆ ನೀಡಿದ್ದಾರೆ.

ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆಯನ್ನು ಪ್ರಮುಖವಾಗಿ ಅಥಣಿ, ರಾಯಬಾಗ ತಾಲ್ಲೂಕುಗಳಲ್ಲಿ ಬೆಳೆಯಲಾಗುತ್ತಿದೆ. ಒಟ್ಟು 4,998 ಹೆಕ್ಟೇರ್ ಪ್ರದೇಶದಲ್ಲಿ ಈ ಬೆಳೆ ಇದೆ. ಹವಾಮಾನ ವೈಪರೀತ್ಯದಿಂದ ಮಳೆ ಬರುತ್ತಿದ್ದು, ಇದರಿಂದ ದ್ರಾಕ್ಷಿ ತೋಟಗಳಿಗೆ ರೋಗ ಮತ್ತು ಕೀಟ ಬರುವ ಸಾಧ್ಯತೆ ಇದೆ. ಹೀಗಾಗಿ, ದ್ರಾಕ್ಷಿ ಗೊಂಚಲುಗಳಲ್ಲಿನ ಕಾಯಿಗಳಲ್ಲಿ ಸಕ್ಕರೆ ಅಂಶ ಕಂಡುಬರುವ ಹಂತದಲ್ಲಿ ಕಾಳುಗಳು ಸೀಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಹಂತದಲ್ಲಿ ಚಿಲೇಟೆಡ್ ಕ್ಯಾಲ್ಸಿಯಂ 1 ಗ್ರಾಂ. ಜೊತೆಗೆ ಬೋರಾನ್ 1 ಗ್ರಾಂ.ಗಳನ್ನು 1 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ದ್ರಾಕ್ಷಿ ಗೊಂಚಲಿನಲ್ಲಿನ ಕಾಯಿಗಳು ಇನ್ನೂ ನೀರು ತುಂಬುವ ಹಂತ ಪ್ರಾರಂಭವಾಗಿರದೇ ಇದ್ದಲ್ಲಿ ಕಾಳುಗಳು ಸೀಳುವ ಸಾಧ್ಯತೆ ಕಡಿಮೆ. ಮಳೆ ಆಗಿರುವ ಕಾರಣ ಡ್ರಿಪ್ ಮೂಲಕ ನೀರು ಹರಿಸುವುದನ್ನು ನಿಲ್ಲಿಸಬೇಕು. ಈಗಾಗಲೇ ಡೌನಿ ರೋಗದ ಬಾಧೆ ಇರುವ ತೋಟಗಳಲ್ಲಿ ಫಾಸಟೀಲ್ ಎ.ಎಲ್ (ಅಲಿಯಟ್) 2 ಗ್ರಾಂ. ಅನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಡೌನಿ ರೋಗ ಇಲ್ಲದಿರುವ ತೋಟಗಳಲ್ಲಿ ಮ್ಯಾಂಡಿಪ್ರೊಪಮಿಡ್ (ರೇವಸ್) 0.60 ಮಿ.ಲೀ. ಅನ್ನು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ADVERTISEMENT

ದ್ರಾಕ್ಷಿ ಹಣ್ಣುಗಳಲ್ಲಿಸಂಪೂರ್ಣವಾಗಿ ಸಕ್ಕರೆ ಅಂಶ ತುಂಬಿಕೊಂಡಿದ್ದಲ್ಲಿ ಕ್ಯಾಲ್ಸಿಯಂ ಸಿಂಪರಣೆ ನಂತರ ಮರುದಿನ ಟ್ರೈಕೋಡರ್ಮಾ ಎಂಬ ಜೈವಿಕ ಶಿಲೀಂದ್ರ ನಾಶಕವನ್ನು 5 ಗ್ರಾಂ. ಅನ್ನು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಗೋಡಂಬಿ ಬೆಳೆಯು 5,309 ಹೆಕ್ಟೇರ್ ಪ್ರದೇಶದಲ್ಲಿದೆ. ಅದರಲ್ಲಿ ಟೀ ಸೊಳ್ಳೆಯು ಹೂ, ಹಣ್ಣು ಮತ್ತು ಬೀಜಗಳಿಂದ ರಸ ಹೀರುವುದರಿಂದ ಹೂಗಳು ಒಣಗುತ್ತವೆ. ಬೀಜಗಳು ಮುರುಟಾಗುತ್ತವೆ ಮತ್ತು ಅವುಗಳ ಮೇಲೆ ಕಜ್ಜಿಯಂತ ಚುಕ್ಕೆಗಳಾಗಿ ಬೀಜದ ಗುಣಮಟ್ಟ ಕಡಿಮೆಯಾಗುತ್ತದೆ. ಇದರ ನಿಯಂತ್ರಣಕ್ಕಾಗಿ ಪ್ರತಿ ಲೀಟರ್ ನೀರಿಗೆ 1 ಮಿ.ಲೀ. ಫೆನಿಟ್ರೋಥಿಯಾನ್–100 ಇಸಿ ಅಥವಾ 1 ಮಿ.ಲೀ. ಲ್ಯಾಮಾಡಾ ಸೈಲೋತ್ರಿನ್ ಬೆರೆಸಿ ಸಿಂಪಡಿಸಬೇಕು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.