ADVERTISEMENT

‘ಎಂಜಿನಿಯರಿಂಗ್‌: ಉತ್ತಮ ಕಾಲೇಜಿಗೆ ಆದ್ಯತೆ ನೀಡಿ’

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 15:06 IST
Last Updated 27 ಸೆಪ್ಟೆಂಬರ್ 2021, 15:06 IST
ಡಾ.ಜಯಂತ ಕೆ.ಕಿತ್ತೂರ
ಡಾ.ಜಯಂತ ಕೆ.ಕಿತ್ತೂರ   

ಬೆಳಗಾವಿ: ‘ವಿದ್ಯಾರ್ಥಿಗಳು ನಿರ್ದಿಷ್ಟ ಎಂಜಿನಿಯರಿಂಗ್ ಶಾಖೆಗಿಂತ ಉತ್ತಮ ಕಾಲೇಜಿಗೆ ಆದ್ಯತೆ ನೀಡಬೇಕು. ಏಕೆಂದರೆ ಅಂತಹ ಕಾಲೇಜು ವಿವಿಧ ಕೌಶಲಗಳನ್ನು ಪಡೆಯಲು ನೆರವಾಗುತ್ತದೆ. ಕಾರ್ಪೊರೇಟ್ ಜೀವನದ ಸವಾಲುಗಳನ್ನು ಎದುರಿಸಲು ಮತ್ತು ವೃತ್ತಿಜೀವನದಲ್ಲಿ ಉತ್ಕೃಷ್ಟತೆ ಸಾಧಿಸಲು ಅವಕಾಶ ಮಾಡಿಕೊಡುತ್ತದೆ’ ಎಂದು ಕೆಎಲ್ಎಸ್ ಜಿಐಟಿ ಪ್ರಾಂಶುಪಾಲ ಡಾ.ಜಯಂತ ಕೆ.ಕಿತ್ತೂರ ಸಲಹೆ ನೀಡಿದರು.

ನಗರದ ಉದ್ಯಮಬಾಗ್‌ನಲ್ಲಿರುವ ಕೆಎಲ್ಎಸ್ ಜಿಐಟಿಯಲ್ಲಿ ಭಾನುವಾರ ನಡೆದ ಎಂಜಿನಿಯರಿಂಗ್ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮತ್ತು ಜನಜೀವನವನ್ನು ಸುಲಭಗೊಳಿಸುವಲ್ಲಿ ಎಂಜಿನಿಯರ್‌ಗಳ ಪಾತ್ರ ದೊಡ್ಡದಿದೆ’ ಎಂದರು.

ADVERTISEMENT

‘ಬಿ.ಇ. ಪದವಿಯು ವೃತ್ತಿಯನ್ನು ಮುಂದುವರಿಸಲು ವಿಶಾಲವಾದ ನೆಲೆಯನ್ನು ಒದಗಿಸುತ್ತದೆ. ಆದರೆ, ಪಿಜಿ ಕೋರ್ಸ್‌ಗಳಲ್ಲಿನ ವಿಶೇಷತೆಗಳು ಎಂಜಿನಿಯರಿಂಗ್ ಡೊಮೇನ್‌ನಲ್ಲಿ ವೃತ್ತಿಜೀವನವನ್ನು ರೂಪಿಸಲು ಮೌಲ್ಯವನ್ನು ಸೇರಿಸುತ್ತವೆ’ ಎಂದು ತಿಳಿಸಿದರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಿಇಟಿ ಸಹಾಯವಾಣಿ ಕೇಂದ್ರದ ನೋಡಲ್ ಅಧಿಕಾರಿ ರಾಜು ಎಸ್. ಬಸಣ್ಣನವರ, ‘ಸಿಇಟಿ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಆಯ್ಕೆಯ ಪ್ರವೇಶವು ಬಹಳ ಮುಖ್ಯವಾಗಿದೆ. ಸಂಸ್ಥೆಯ ಹೆಸರನ್ನು ಆಯ್ಕೆಗಳಾಗಿ ನಮೂದಿಸುವಾಗ ವಿದ್ಯಾರ್ಥಿಗಳು ಬಹಳ ಜಾಗರೂಕತೆ ವಹಿಸಬೇಕು’ ಎಂದು ಸಲಹೆ ನೀಡಿದರು.

ಅಣಕು ಹಂಚಿಕೆ ಪ್ರಕ್ರಿಯೆ, ಜಾತಿ ಮತ್ತು ಆದಾಯ ಪ್ರಮಾಣಪತ್ರಗಳ ಪ್ರಾಮುಖ್ಯತೆ ಕುರಿತು ಅವರು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ವಿವರಿಸಿದರು. ಸೀಟು ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿದರು.

ಕೆಎಲ್‌ಎಸ್ ಜಿಐಟಿಯಲ್ಲಿನ ವಿವಿಧ ಎಂಜಿನಿಯರಿಂಗ್ ವಿಭಾಗಗಳ ಮುಖ್ಯಸ್ಥರು ಲಭ್ಯವಿರುವ ಎಂಜಿನಿಯರಿಂಗ್ ಕೋರ್ಸ್‌ಗಳ ಸಂಕ್ಷಿಪ್ತ ಟಿಪ್ಪಣಿ ನೀಡಿದರು. ಆಕಾಂಕ್ಷಿಗಳಿಗಾಗಿ ಆ.24 ಮತ್ತು 25ರಂದು ‘ಆನ್‌ಲೈನ್ ಅಣಕು ಸಿಇಟಿ’ ನಡೆಸಲಾಗಿತ್ತು. ಅದರಲ್ಲಿ 500 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅವರಲ್ಲಿ ಮೆರಿಟ್ ಪ್ರಶಂಸಿಸಲು, ಮೊದಲ ಮೂರು ರ‍್ಯಾಂಕ್ ಪಡೆದವರಿಗೆ ನಗದು ಬಹುಮಾನ ನೀಡಲಾಯಿತು.

ಡಾ.ಎಂ.ಎಸ್. ಪಾಟೀಲ ಸ್ವಾಗತಿಸಿದರು. ಡಾ.ಸೂರ್ಯಕುಮಾರ ಎನ್. ಖಾನಾಯಿ ವಂದಿಸಿದರು. ಪ್ರೊ.ರಶ್ಮಿ ಅಡೂರ ಮತ್ತು ಪ್ರೊ.ಜಾಹ್ನವಿ ಕಾರೇಕರ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.