ADVERTISEMENT

ಬೆಳಗಾವಿ: ಕನೇರಿ ಸ್ವಾಮೀಜಿ ಗಡೀಪಾರಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 2:45 IST
Last Updated 18 ಅಕ್ಟೋಬರ್ 2025, 2:45 IST
<div class="paragraphs"><p>ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಬಸವಪರ ಸಂಘಟನೆಗಳ ವತಿಯಿಂದ ಬೆಳಗಾವಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು&nbsp; </p></div>

ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಬಸವಪರ ಸಂಘಟನೆಗಳ ವತಿಯಿಂದ ಬೆಳಗಾವಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು 

   

ಪ್ರಜಾವಾಣಿ ಚಿತ್ರ

ಬೆಳಗಾವಿ: ಬಸವಾಭಿಮಾನಿಗಳ ವಿರುದ್ಧ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಅವಮಾನಕರ ಹೇಳಿಕೆ ನೀಡಿದ್ದಾರೆ. ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಬಸವಪರ ಸಂಘಟನೆಗಳ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ADVERTISEMENT

ಮಹಾರಾಷ್ಟ್ರದ ಕೊಲ್ಹಾಪುರದ ಕನ್ಹೇರಿ ಮಠದ ಸ್ವಾಮೀಜಿಗೆ ಬೆಳಗಾವಿಯೂ ಸೇರಿದಂತೆ ರಾಜ್ಯದ ಎಲ್ಲಿಯೂ ಪ್ರವೇಶಕ್ಕೆ ಅವಕಾಶ ಕೊಡಬಾರದು. ಅವರನ್ನು ಗಡಿಪಾರು ಮಾಡಬೇಕು. ಅವರ ಅವಹೇಳನಕಾರಿ ಹಾಗೂ ಪ್ರಚೋದನಾತ್ಮಕ ಹೇಳಿಕೆ ಸಮಾಜದಲ್ಲಿ ಶಾಂತಿ ಕದಡಿ ಕಾನೂನು ವ್ಯವಸ್ಥೆಗೆ ಧಕ್ಕೆ ಬರುವ ಸಂಭವವಿದೆ ಎಂದೂ ಆಕ್ರೋಶ ಹೊರಹಾಕಿದರು.

‘ಮಹಾರಾಷ್ಟ್ರದ ಬಿಳ್ಳೂರ ಮಠದಲ್ಲಿ ಜರುಗಿದ ಸಮಾರಂಭದಲ್ಲಿ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಬಸವ ಸಂಸ್ಕೃತಿ ಅಭಿಯಾನವನ್ನು ಅಪಮಾನಿಸಿದ್ದಾರೆ. ಅಲ್ಲದೇ, ಲಿಂಗಾಯತ ಮಠಾಧೀಶರ ವಿರುದ್ಧ ಅವಾಚ್ಯ, ಅಶ್ಲೀಲ ಪದ ಬಳಕೆ ಮಾಡಿದ್ದಾರೆ. ಒಬ್ಬ ಸ್ವಾಮೀಜಿಯಾಗಿ ಈ ರೀತಿ ಪದ ಬಳಕೆ ಮಾಡಿರುವುದು ಖಂಡನೀಯ. ಇದು ಲಿಂಗಾಯಿತ ಧರ್ಮೀಯರಿಗೆ ಹಾಗೂ ಬಸವಣ್ಣನವರ ಅನುಯಾಯಿಗಳಿಗೆ ನೋವುಂಟು ಮಾಡಿದೆ. ಹೀಗಾಗಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದರು.

ಲಿಂಗಾಯತ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಈರಣ್ಣ ದಯಣ್ಣವರ, ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಎಸ್.ಜಿ.ಸಿದ್ನಾಳ, ಎಂ.ಎಂ.ಬಾಳಿ, ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಕ್ಕ ಅಂಗಡಿ, ಸಿ.ಎಂ.ಬೂದಿಹಾಳ, ಶಂಕಡ ಗುಡಸ, ರಾಷ್ಟ್ರೀಯ ಬಸವ ದಳ ಅಧ್ಯಕ್ಷ ಅಶೋಕ ಬೆಂಡಿಗೇರಿ, ಈರಣ್ಣ ಚಿನಗುಡಿ ಇತರರು ನೇತೃತ್ವ ವಹಿಸಿದ್ದರು.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರಿಗೆ ಅವಮಾನ ಮಾಡಿದ ವಕೀಲನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘಟನೆ ಕರ್ನಾಟಕ ರಾಜ್ಯ ಛಲವಾದಿ ಮಹಾಸಭೆ ಜಿಲ್ಲಾ ಘಟಕದ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಶುಕ್ರವಾರ ಅಣಕು ಶವಯಾತ್ರೆ ನಡೆಸಲಾಯಿತು 

ಮುಖ್ಯ ನ್ಯಾಯಮೂರ್ತಿಗೆ ಅವಮಾನ: ಆಕ್ರೋಶ

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಬೂಟು ಎಸೆಯಲು ಯತ್ನಿಸಿದ ವಕೀಲನಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘಟನೆ ಕರ್ನಾಟಕ ರಾಜ್ಯ ಛಲವಾದಿ ಮಹಾಸಭೆ ಜಿಲ್ಲಾ ಘಟಕದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ನಗರದಲ್ಲಿ ಶುಕ್ರವಾರ ಬೃಹತ್‌ ಪ್ರತಿಭಟನೆ ನಡೆಸಿದರು. ಇಲ್ಲಿನ ಅಂಬೇಡ್ಕರ್ ಉದ್ಯಾನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಅಣಕು ಶವಯಾತ್ರೆ ನಡೆಸಿದ ಪ್ರತಿಭಟನೆಕಾರರು ವಕೀಲನ ‍ಪ್ರವೃತ್ತಿಗೆ ತೀವ್ರ ಆಕ್ರೋಶ ಹೊರಹಾಕಿದರು. ‘ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆಯೇ ಶ್ರೇಷ್ಠವಾದದ್ದರು. ನ್ಯಾಯ ಹೇಳುವವರ ಮೇಲೆ ನಡೆಸಿದ ಈ ಕೃತ್ಯದಿಂದ ದೇಶವೇ ತಲೆ ತಗ್ಗಿಸುವಂತಾಗಿದೆ. ಇದು ಸಂವಿಧಾನಕ್ಕೆ ಮಾಡಿದ ಅವಮಾನ ಎಂದೂ ಮುಖಂಡರು ಕಿಡಿ ಕಾರಿದರು. ಮುಖಂಡರಾದ ದೀಪಕ ದಬ್ಬಾಳೆ ಶಶಿ ಸಾವಳ ಸಾಗರ ಕಾಂಬಳೆ ಆನಂದ ತಳವಾರ ಲಕ್ಷ್ಮೀ ಮಾದರ  ಲಕ್ಷ್ಮಣ ಕಾಂಬಳೆ ಮಹಾದೇವಿ ಕಾಂಬಳೆ ಇತರರು ನೇತೃತ್ವ ವಹಿಸಿದ್ದರು. ರಾಣಿಚನ್ನಮ್ಮ ವೃತ್ತದಲ್ಲಿ ಅಣಕ ಶವಕ್ಕೆ ಬೆಂಕಿ ಹಚ್ಚಲು ಮುಂದಾದಾಗ ಪೊಲೀಸರು ತಡೆದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ಬಂದು ಮನವಿ ಸಲ್ಲಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.