ADVERTISEMENT

ಬೆಳಗಾವಿ ಉಪ ಚುನಾವಣೆ: ಮದ್ಯ ಹಾವಳಿ ತಡೆಗೆ ತಂಡಗಳ ರಚನೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 14:15 IST
Last Updated 8 ಏಪ್ರಿಲ್ 2021, 14:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ಲೋಕಸಭಾ ಕ್ಷೇತ್ರದ ಉಪ ಚುನಾವಣೆ ವೇಳೆ ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ಗೋಕಾಕ ವಲಯವನ್ನು ಕೇಂದ್ರವನ್ನಾಗಿರಿಸಿಕೊಂಡು ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಿಬ್ಬಂದಿ ಒಳಗೊಂಡ ತಂಡಗಳನ್ನು ರಚಿಸಲಾಗಿದೆ.

ಉತ್ತರ ಜಿಲ್ಲೆ ಚಿಕ್ಕೋಡಿಯು ಮಹಾರಾಷ್ಟ್ರ ಗಡಿ ಹೊಂದಿದೆ. ಚುನಾವಣೆಯಲ್ಲಿ ಮತದಾರರರಿಗೆ ಮದ್ಯ ಹಂಚಲು ಅಕ್ರಮವಾಗಿ ಮಹಾರಾಷ್ಟ್ರದಿಂದ ತರುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಪರಿಣಾಮಕಾರಿ ಜಾರಿ ಮತ್ತು ತನಿಖಾ ಚಟುವಟಿಕೆಗಳನ್ನು ಕೈಗೊಳ್ಳಲು ಹಾಗೂ ಗಡಿ ಪ್ರದೇಶದ ಮೂಲಕ ಹಾಯ್ದು ಬರುವ ವಾಹನಗಳ ಮೂಲಕ ಹೊರ ರಾಜ್ಯದ ಮದ್ಯ ಇಲ್ಲಿಗೆ ತಲುಪದಂತೆ ಗಸ್ತು ನಿರ್ವಹಿಸಲು ಸೂಚಿಸಲಾಗಿದೆ.

ಉತ್ತರ ಜಿಲ್ಲೆಯ ಗೋಕಾಕ ಮತ್ತು ಮೂಡಲಗಿ ತಾಲ್ಲೂಕುಗಳು ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಅಲ್ಲಿ ನೀತಿ ಸಂಹಿತೆ ಜಾರಿಯಾದಾಗಿನಿಂದ (ಮಾರ್ಚ್‌ 16) ಇಲ್ಲಿವರೆಗೆ ಇಲಾಖೆಯಿಂದ 32 ದಾಳಿಗಳನ್ನು ನಡೆಸಿ, ಕೈಗೊಂಡು 36 ಪ್ರಕರಣಗಳನ್ನು ದಾಖಲಿಸಲಾಗಿದೆ. 56.370 ಲೀಟರ್‌ ಭಾರತೀಯ ತಯಾರಿಕಾ ಮದ್ಯ, 1.95 ಲೀ. ಬಿಯರ್, 17 ಲೀ. ಗೋವಾ ಮದ್ಯ, 3.5 ಲೀ. ಕಳ್ಳಭಟ್ಟಿ, 5 ದ್ವಿಚಕ್ರವಾಹನಗಳು ಮತ್ತು 1 ನಾಲ್ಕು ಚಕ್ರದ ವಾಹನ ಜಪ್ತಿ ಮಾಡಲಾಗಿದೆ. 24 ಆರೋಪಿಗಳನ್ನು ಬಂಧಿಸಲಾಗಿದೆ.

ADVERTISEMENT

ಗೋಕಾಕ, ಚಿಕ್ಕೋಡಿ, ಹುಕ್ಕೇರಿ, ಅಥಣಿ ಮತ್ತು ಹಾಗೂ ರಾಯಬಾಗ ವಲಯಗಳಲ್ಲಿ ಇದುವರೆಗೆ 120 ದಾಳಿಗಳನ್ನು ನಡೆಸಲಾಗಿದೆ. 66 ಪ್ರಕರಣಗಳನ್ನು ದಾಖಲಿಸಿ, 177.570 ಲೀ. ಭಾರತೀಯ ತಯಾರಿಕಾ ಮದ್ಯ, 1.95 ಲೀ. ಬಿಯರ್, 17 ಲೀ. ಗೋವಾ ಮದ್ಯ, 3.5 ಲೀ. ಕಳ್ಳಬಟ್ಟಿ, 10 ದ್ವಿಚಕ್ರ ವಾಹನಗಳು ಮತ್ತು 1 ನಾಲ್ಕು ಚಕ್ರದ ವಾಹನ ಜಪ್ತಿ ಮಾಡಲಾಗಿದೆ. 47 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.