ಬೆಳಗಾವಿ: ಸತತ ಮಳೆಯಿಂದಾಗಿ ಇಲ್ಲಿನ ತಹಶೀಲ್ದಾರ್ ಕಚೇರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ (ಡಿಡಿಪಿಐ) ಕಚೇರಿ ಸೋರುತ್ತಿವೆ.
ಸ್ವಾಮಿ ವಿವೇಕಾನಂದ ಮಾರ್ಗದ ಮಹಾನಗರ ಪಾಲಿಕೆ ಹಳೆಯ ಕಟ್ಟಡದಲ್ಲಿ ಕಳೆದೊಂದು ದಶಕದಿಂದ ತಹಶೀಲ್ದಾರ್ ಕಚೇರಿ ಕಾರ್ಯನಿರ್ವಹಿಸುತ್ತಿದೆ. ‘ಬೆಳಗಾವಿ ಒನ್’ ಕೇಂದ್ರವೂ ಇದೇ ಕಟ್ಟಡದಲ್ಲಿದೆ. ವಿವಿಧ ಕೆಲಸಗಳ ನಿಮಿತ್ತ ಇಲ್ಲಿಗೆ ನಿತ್ಯ ನೂರಾರು ಜನರು ಬರುತ್ತಾರೆ. ಆದರೆ, ಕಚೇರಿಯಿಡೀ ಸೋರುತ್ತಿರುವ ಕಾರಣ ಸಿಬ್ಬಂದಿಯೊಂದಿಗೆ ಸಾರ್ವಜನಿಕರೂ ತೊಂದರೆ ಅನುಭವಿಸುವಂತಾಗಿದೆ. ಕಡತಗಳ ನಿರ್ವಹಣೆಯೂ ಕಷ್ಟವಾಗಿದೆ.
ಕೊಡೆ ಹಿಡಿದೇ ಕಾಯಕ: ಕ್ಲಬ್ ರಸ್ತೆಯ ಡಿಡಿಪಿಐ ಕಚೇರಿ ಸ್ಥಿತಿಯೂ ಇದಕ್ಕಿಂತ ಭಿನ್ನವಿಲ್ಲ. 1959ರಲ್ಲಿ ಉದ್ಘಾಟನೆಯಾದ ಈ ಕಟ್ಟಡವೂ ಹಾಳಾಗಿದೆ. ವಿವಿಧ ಕೊಠಡಿಗಳು, ವರಾಂಡದ ತುಂಬೆಲ್ಲ ಚಾವಣಿಯಿಂದ ಮಳೆನೀರು ಬೀಳುತ್ತಿರುವುದರಿಂದ ಸಿಬ್ಬಂದಿ ಕೊಡೆ ಹಿಡಿದುಕೊಂಡೇ ಕೆಲಸ ಮಾಡುತ್ತಿರುವುದು ಕಂಡುಬರುತ್ತದೆ. ಮಳೆನೀರು ಹಿಡಿಯಲು ಅಲ್ಲಲ್ಲಿ ಬಕೆಟ್ ಇರಿಸಿದ್ದಾರೆ. ಮಹತ್ವದ ದಾಖಲೆಗಳ ರಕ್ಷಣೆಗಾಗಿ ಪ್ಲಾಸ್ಟಿಕ್ ಹೊದಿಸಿದ್ದಾರೆ.
‘ಡಿಡಿಪಿಐ ಕಚೇರಿ ಪರಿಸ್ಥಿತಿಯೇ ಹೀಗಾದರೆ, ಸರ್ಕಾರಿ ಶಾಲೆಗಳ ದುಸ್ಥಿತಿ ಬಗ್ಗೆ ಗಮನ ಹರಿಸುವವರ್‍ಯಾರು’ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
‘ತಹಶೀಲ್ದಾರ್ ಕಚೇರಿಯಲ್ಲಿ ಕನಿಷ್ಠ ಮೂಲಸೌಕರ್ಯವೂ ಇಲ್ಲ. ಈಗ ಜಿಟಿಜಿಟಿ ಮಳೆಯಾದರೂ ಸೋರುತ್ತದೆ. ತ್ವರಿತವಾಗಿ ಇದನ್ನು ದುರಸ್ತಿಗೊಳಿಸಬೇಕು. ಇಲ್ಲದಿದ್ದರೆ ಸುಸ್ಥಿತಿಯಲ್ಲಿರುವ ಬೇರೆ ಸರ್ಕಾರಿ ಕಟ್ಟಡಕ್ಕೆ ಸ್ಥಳಾಂತರಿಸಬೇಕು’ ಎಂದು ಸ್ಥಳೀಯರಾದ ವೀರೇಂದ್ರ ಒತ್ತಾಯಿಸಿದರು.
‘ನಿತ್ಯ ಕಿರಿಕಿರಿಯಲ್ಲೇ ಕೆಲಸ’
‘ರಾತ್ರಿಯಿಡೀ ಮಳೆಯಾಗಿ ಬೆಳಿಗ್ಗೆ ನಾವು ಕಚೇರಿಗೆ ಬಂದರೆ ಇಡೀ ಕೊಠಡಿಯಲ್ಲಿ ನೀರು ನಿಂತಿರುತ್ತದೆ. ಆ ನೀರು ಹೊರಹಾಕಿ ಕೆಲಸ ಮಾಡೋಣವೆಂದರೆ ಮತ್ತೆ ಮಳೆಯಾಗುತ್ತದೆ. ಹಾಗಾಗಿ ಕಿರಿಕಿರಿಯಲ್ಲೇ ಕೆಲಸ ಮಾಡುವ ಅನಿವಾರ್ಯ ಬಂದೊದಗಿದೆ’ ಎಂದು ಎರಡೂ ಕಚೇರಿ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸಿದರು.
ಇದು ಮಹಾನಗರ ಪಾಲಿಕೆ ಕಟ್ಟಡವಾಗಿದ್ದು ದುರಸ್ತಿಗೊಳಿಸುವಂತೆ ಆಯುಕ್ತರಿಗೆ ಮನವಿ ಸಲ್ಲಿಸುತ್ತೇವೆ. ಹೊಸ ಜಿಲ್ಲಾಧಿಕಾರಿ ಸಂಕೀರ್ಣಕ್ಕೆ ಇದು ಸ್ಥಳಾಂತರವಾಗಲಿದ್ದು ಆಗ ಸಮಸ್ಯೆ ಬಗೆಹರಿಯಲಿದೆ.ಬಸವರಾಜ ನಾಗರಳ, ತಹಶೀಲ್ದಾರ್ ಬೆಳಗಾವಿ
ತಹಶೀಲ್ದಾರ್ ಕಚೇರಿ ಸೋರುತ್ತಿರುವುದು ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಿ ಕ್ರಮ ವಹಿಸಲಾಗುವುದು.ಅಶೋಕ ದುಡಗುಂಟಿ, ಆಯುಕ್ತ, ಮಹಾನಗರ ಪಾಲಿಕೆ ಬೆಳಗಾವಿ
ಡಿಡಿಪಿಐ ಕಚೇರಿ ದುರಸ್ತಿಗಾಗಿ ಲೋಕೋಪಯೋಗಿ ಇಲಾಖೆಯವರು ₹25 ಲಕ್ಷದ ಯೋಜನೆ ಸಿದ್ಧಪಡಿಸುತ್ತಿದ್ದಾರೆ. ಹೊಸದಾಗಿ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೂ ಕ್ರಮ ವಹಿಸಲಾಗುವುದು.ಮೋಹನಕುಮಾರ ಹಂಚಾಟೆ, ಡಿಡಿಪಿಐ, ಬೆಳಗಾವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.