ADVERTISEMENT

ಅಥಣಿ: ಆಂಬುಲೆನ್ಸ್‌ನಲ್ಲೆ ಹೆರಿಗೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 12:12 IST
Last Updated 29 ಸೆಪ್ಟೆಂಬರ್ 2020, 12:12 IST
ತೆಲಸಂಗದ 108–ಆಂಬುಲೆನ್ಸ್‌ನಲ್ಲಿ ರಾಮತೀರ್ಥದ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ
ತೆಲಸಂಗದ 108–ಆಂಬುಲೆನ್ಸ್‌ನಲ್ಲಿ ರಾಮತೀರ್ಥದ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ   

ತೆಲಸಂಗ: ಅಥಣಿ ತಾಲ್ಲೂಕಿನ ರಾಮತೀರ್ಥ ಗ್ರಾಮದ ಅಮ್ಮಾಜೇಶ್ವರಿ ಅವರು ತೆಲಸಂಗ 108-ಆಂಬುಲೆನ್ಸ್‌ನಲ್ಲೇ ಮಂಗಳವಾರ ಗಂಡು ಮಗುವಿಗೆ ಜನ್ಮ ನೀಡಿದರು.

ಅವರಿಗೆ ಮಧ್ಯಾಹ್ನ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ, ತೆಲಸಂಗದಿಂದ ಆಂಬುಲೆನ್ಸ್ ಕರೆಸಿಕೊಳ್ಳಲಾಗಿತ್ತು. ಆರೋಗ್ಯ ಇಲಾಖೆಯ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಸೆ. 24ರಿಂದ ವಿವಿಧ ಬೇಡಿಕೆಗಳ ಆಗ್ರಹಿಸಿ ಮುಷ್ಕರ ನಡೆಸುತ್ತಿರುವುದರಿಂದಾಗಿ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಸ್ಟಾಫ್‌ ನರ್ಸ್‌ಗಳು ಗೈರು ಹಾಜರಾಗಿದ್ದರಿಂದ ಆಂಬುಲೆನ್ಸ್‌ ಅಥಣಿ ತಾಲ್ಲೂಕು ಆಸ್ಪತ್ರೆಗೆ ಹೊರಟಿತ್ತು. ಈ ವೇಳೆ ಹೆರಿಗೆ ನೋವು ಹೆಚ್ಚಾಗಿದ್ದರಿಂದ, ಆಂಬುಲೆನ್ಸ್‌ನಲ್ಲಿದ್ದ ಸಿಬ್ಬಂದಿಯೇ ಹೆರಿಗೆ ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ.

ಸಿಬ್ಬಂದಿ ಗೌಸ್ಪಾಕ್ ಎಚ್. ಬಿಸ್ತಿ, ತಾತೆಬಾ ಸಾಳುಂಕೆ, ಆಶಾ ಕಾರ್ಯಕರ್ತೆ ರತ್ನಾಬಾಯಿ ಹೆರಿಗೆ ಮಾಡಿಸಿದ್ದಾರೆ. ತಾಯಿ, ಮಗು ಆರೋಗ್ಯವಾಗಿದ್ದಾರೆ ಎಂದು ಸಿಬ್ಬಂದಿ ತಿಳಿಸಿದರು.

ADVERTISEMENT

‘ಹೋಬಳಿಯ ಏಕೈಕ ಪ್ರಸೂತಿ ಆಸ್ಪತ್ರೆಯಾದ ತೆಲಸಂಗ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸದ್ಯ ಹೆರಿಗೆ ಮಾಡಿಸುವುದನ್ನು ನಿಲ್ಲಿಸಲಾಗಿದೆ. ದೂರದ ತಾಲ್ಲೂಕು ಕೇಂದ್ರಕ್ಕೆ ಹೋಗಬೇಕಾದ ಸ್ಥಿತಿ ಇದೆ. ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಬೇಕು. ಸಮಸ್ಯೆ ನಿವಾರಿಸಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.