ADVERTISEMENT

ದೇವರ ಕುದುರೆ ಸಾವು; ಅಂತ್ಯಕ್ರಿಯೆಯಲ್ಲಿ ಸಾವಿರಾರು ಮಂದಿ ಭಾಗಿ!

ಕೊರೊನಾ ನಿಯಂತ್ರಿಸಲೆಂದು ಬಿಟ್ಟಿದ್ದ ‘ದೇವರ ಕುದುರೆ'

​ಪ್ರಜಾವಾಣಿ ವಾರ್ತೆ
Published 23 ಮೇ 2021, 11:20 IST
Last Updated 23 ಮೇ 2021, 11:20 IST
ಕೊರೊನಾ ನಿಯಂತ್ರಿಸಲೆಂದು ಬಿಟ್ಟಿದ್ದ ‘ದೇವರ ಕುದುರೆ'
ಕೊರೊನಾ ನಿಯಂತ್ರಿಸಲೆಂದು ಬಿಟ್ಟಿದ್ದ ‘ದೇವರ ಕುದುರೆ'   

ಬೆಳಗಾವಿ: ತಮ್ಮೂರಲ್ಲಿ ಕೊರೊನಾ ನಿಯಂತ್ರಣಕ್ಕೆ ಬರಲೆಂದು ಪ್ರಾರ್ಥಿಸಿ ದೇವರ ಮೊರೆ ಹೋದ ಜಿಲ್ಲೆಯ ಗೋಕಾಕ ತಾಲ್ಲೂಕಿನ ಕೊಣ್ಣೂರ ಗ್ರಾಮದವರು, ರಾತ್ರಿ ವೇಳೆ ಸಂಚರಿಸಲು ಬಿಟ್ಟಿದ್ದ ಸುಕ್ಷೇತ್ರ ಮರಡಿಮಠದ ಕಾಡಸಿದ್ದೇಶ್ವರ ‘ದೇವರ ಕುದುರೆ’ ಭಾನುವಾರ ಮುಂಜಾನೆ ಮೃತಪಟ್ಟಿದೆ.

ಆ ಗ್ರಾಮದ ಹಿರಿಯರು ನಡೆಸಿದ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಹಾಗೂ ಮರಡಿಠದ ಪವಾಡ ಸ್ವಾಮೀಜಿ ಅವರ ಮಾರ್ಗದರ್ಶನದಂತೆ ಗ್ರಾಮದ ಜನರು ಮಠದ ಕುದುರೆಯನ್ನು ಬುಧವಾರ ಮಧ್ಯರಾತ್ರಿ 12ರಿಂದ ಗ್ರಾಮದಾದ್ಯಂತ ಸಂಚರಿಸಲು ಬಿಟ್ಟಿದ್ದರು. ನಿತ್ಯವೂ ರಾತ್ರಿ ವಿವಿಧ ಗ್ರಾಮಗಳಲ್ಲಿ ಕುದುರೆಯನ್ನು ಸುತ್ತಾಡಿಸಬೇಕು ಎನ್ನುವ ಉದ್ದೇಶ ಅವರದಾಗಿತ್ತು. ಹೀಗೆ ಮಾಡುವುದರಿಂದ ಗ್ರಾಮದಲ್ಲಿ ಸೋಂಕು ಹರಡುವುದಿಲ್ಲ ಎನ್ನುವುದು ಜನರ ನಂಬಿಕೆಯಾಗಿತ್ತು. ದಶಕಗಳ ಹಿಂದೆ ಸಾಂಕ್ರಾಮಿಕ ರೋಗಗಳು ವ್ಯಾಪಿಸಿದಾಗ ನಿಯಂತ್ರಿಸುವುದಕ್ಕಾಗಿ ಮಠದ ಕುದುರೆಯನ್ನು ಬಿಡುತ್ತಿದ್ದರಂತೆ. ಅದರಂತೆ ಈ ನಿರ್ಧಾರವನ್ನು ಜನರು ಕೈಗೊಂಡಿದ್ದರು ಎಂದು ತಿಳಿದುಬಂದಿದೆ.

ಈ ಮಠದ ಕುದುರೆ ಗ್ರಾಮದಲ್ಲಿ ರಾತ್ರಿ‌ ವೇಳೆ ಓಡಾಡಿದ್ದರೆ, ಗ್ರಾಮವು ಸೋಂಕಿನಿಂದ ಮುಕ್ತವಾಗುತ್ತದೆ ಎನ್ನುವ ನಂಬಿಕೆ ಇತ್ತು. ಹೀಗೆ ಪ್ರದಕ್ಷಿಣಿಗೆ ಬಿಡಲಾಗಿದ್ದ ಮಠದ ಕುದುರೆ (ಅದಕ್ಕೆ ‘ಶೌರ್ಯ’ ಎಂದೂ ಕರೆಯಲಾಗುತ್ತಿತ್ತು) ಭಾನುವಾರ ಮೃತಪಟ್ಟಿದೆ.

ADVERTISEMENT

ಕೋವಿಡ್‌ನಿಂದ ಕೆಲವರ ಸಾವು ಸಂಭವಿಸಿದ್ದರಿಂದಾಗಿ ಕಂಗಾಲಾದ ಜನರು ಕೊರೊನಾ 2ನೇ ಅಲೆಯಿಂದ ಗ್ರಾಮವನ್ನು ರಕ್ಷಿಸುವಂತೆ ಶ್ರೀಗಳನ್ನು ಭೇಟಿಯಾಗಿ ಮನವಿ ಮಾಡಿದ್ದರು. ಸಮಸ್ಯೆ ನಿವಾರಣೆಗೆ ಪರಿಹಾರ ನೀಡುವಂತೆ ಮನವಿ ಮಾಡಿದ್ದರು. ಆಗ, ಶ್ರೀಗಳು ತಮ್ಮ ಕುದುರೆಯನ್ನು ಊರಲ್ಲಿ ಬಿಡುವುದಾಗಿ ಹೇಳಿದ್ದರು ಎಂದು ತಿಳಿದುಬಂದಿದೆ.

ಆದರೆ, ಈ ಕುದುರೆಯು ಮೃತಪಟ್ಟಿರುವುದು ಗ್ರಾಮಸ್ಥರು ಹಾಗೂ ಭಕ್ತರಿಗೆ ದೊಡ್ಡ ಆಘಾತ ತಂದಿದೆ. ಆ ‘ದೇವರ ಕುದುರೆ’ಯನ್ನು ನೋಡಲು ಮತ್ತು ಅಂತ್ಯಸಂಸ್ಕಾರ ನೆರವೇರಿಸಲು ಗ್ರಾಮದವರು ಹಾಗೂ ಸುತ್ತಮುತ್ತಲಿನವರು ಸಂಪೂರ್ಣ ಲಾಕ್‌ಡೌನ್‌ ನಡುವೆಯೂ, ಕೋವಿಡ್ ಭೀತಿಯನ್ನೂ ಲೆಕ್ಕಿಸದೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು. ದೊಡ್ಡ ಮಟ್ಟದಲ್ಲಿ ಮೆರವಣಿಗೆಯೂ ನಡೆದಿದೆ. ಅಂತರ ಕಾಯ್ದುಕೊಳ್ಳದೆ ಮಾರ್ಗಸೂಚಿ ಗಾಳಿಗೆ ತೂರಿದ್ದಾರೆ.

ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಎಚ್ಚೆತ್ತುಕೊಂಡ ತಹಶೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ ಗ್ರಾಮಕ್ಕೆ ಭೇಟಿ ನೀಡಿದ್ದರು.ಮುಂಜಾಗ್ರತಾ ಕ್ರಮವಾಗಿ ಮಠಡಿ ಮಠದ ಆವರಣ ಹಾಗೂ ಸುತ್ತಮುತ್ತಲಿನ ಮನೆಗಳಿರುವ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ.

‘ವಿಡಿಯೊಗಳನ್ನು ನೋಡಿದರೆ ಸುಮಾರು 400 ಮಂದಿ ಸೇರಿದ್ದರು ಎಂದು ಗೊತ್ತಾಗಿದೆ. ಪೊಲೀಸರು ಕಾರ್ಯಕ್ರಮವನ್ನು ತಡೆದಿದ್ದಾರೆ. ಆಯೋಜಿಸಿದ್ದ 15 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗುವುದು’ ಎಂದು ತಹಶೀಲ್ದಾರ್‌ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.