ಮೂಡಲಗಿ (ಬೆಳಗಾವಿ ಜಿಲ್ಲೆ): ಸಾಲ ಮರುಪಾವತಿಸಲು ವಿಳಂಬ ಮಾಡಿದ ಕಾರಣಕ್ಕೆ ತಾಲ್ಲೂಕಿನ ನಾಗನೂರು ಪಟ್ಟಣದಲ್ಲಿ ಖಾಸಗಿ ಫೈನಾನ್ಸ್ ಸಿಬ್ಬಂದಿ ಕುಟುಂಬದ ಏಳು ಸದಸ್ಯರನ್ನು ಹೊರಗೆ ಹಾಕಿ, ಮನೆ ಕಬ್ಜಾ ಮಾಡಿದ್ದಾರೆ. ಮನೆಯಲ್ಲಿದ್ದ ಬಾಣಂತಿಯನ್ನೂ ಹೊರಗೆ ಹಾಕಿದ್ದಾರೆ.
ಗ್ರಾಮದ ಬಡ ರೈತ ಶಂಕರೆಪ್ಪ ಗದ್ದಾಡಿ ಎಂಬುವರ ಮನೆಗೆ ಫೈನಾನ್ಸ್ ಸಿಬ್ಬಂದಿ ಸೋಮವಾರ ಸಂಜೆಯೇ ಬೀಗ ಹಾಕಿದ್ದಾರೆ. ಒಂದೂವರೆ ತಿಂಗಳ ಹಸುಗೂಸನ್ನು ಮಡಿಲಲ್ಲಿ ಇಟ್ಟುಕೊಂಡು, ಬಾಣಂತಿ ಇಡೀ ರಾತ್ರಿ ಚಳಿಯಲ್ಲೇ ಮನೆ ಮುಂಭಾಗದಲ್ಲಿ ಕಾಲ ಕಳೆದಿದ್ದಾರೆ. ಅವರೊಂದಿಗೆ ಎರಡು ಮಕ್ಕಳು ಮತ್ತು ವೃದ್ಧರು ರಾತ್ರಿ ಊಟವಿಲ್ಲದೇ ಅಂಗಳದಲ್ಲೇ ಮಲಗಿದ್ದಾರೆ.
‘ಶಂಕರೆಪ್ಪ ಅವರು ಚೆನ್ನೈ ಮೂಲದ ಫೈನಾನ್ಸ್‌ನಿಂದ ಹೈನುಗಾರಿಕೆಗೆ ₹5 ಲಕ್ಷ ಸಾಲ ಪಡೆದಿದ್ದಾರೆ. ನಷ್ಟ ಸಂಭವಿಸಿದ್ದರಿಂದ ಸಾಲ ಪಾವತಿಸಲು ಆಗಿಲ್ಲ. ಹಣಕಾಸು ಸಂಸ್ಥೆಯವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ನ್ಯಾಯಾಲಯದ ಆದೇಶದಂತೆ ಸೋಮವಾರ ಮನೆ ಜಪ್ತಿ ಮಾಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
ಈ ಮನೆಯನ್ನು ಶಂಕರೆಪ್ಪ ಅವರಿಗೆ ವಾಜಪೇಯಿ ನಗರ ವಸತಿ ಯೋಜನೆಯಡಿ ನಿರ್ಮಿಸಿ ಕೊಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.