ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲ್ಲೂಕಿನ ಚಿಕಲೆ ಜಲಪಾತದ ಬಳಿ ಪ್ರವಾಸಿಗರ ಹುಚ್ಚಾಟ ಹೆಚ್ಚಾಗಿದೆ. ಕೆಲವರು ನಿಷೇಧಿತ ಸ್ಥಳದಲ್ಲೂ ನುಸುಳುವುದು, ಜಲಪಾತದ ತುತ್ತ ತುದಿಯಲ್ಲಿ ನಿಂತು ರೀಲ್ಸ್ ಮಾಡುವುದು, ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು ಮುಂದುವರಿದಿದೆ.
ಇಂಥ ಅಪಾಯಕಾರಿ ಸ್ಥಳಕ್ಕೆ ಹೋಗದಂತೆ ತಡೆಯಲು ಅರಣ್ಯ ಇಲಾಖೆಯಿಂದ ನಿರ್ಮಿಸಿದ ಸುರಕ್ಷತಾ ಬೇಲಿ (ಫೆನ್ಸಿಂಗ್) ಕಳಪೆಯಾಗಿದ್ದೇ ಇದಕ್ಕೆ ಕಾರಣ ಎಂಬುದು ಸ್ಥಳೀಯರ ದೂರು. ಈ ಬೇಲಿಯನ್ನು ಯಾರು ಬೇಕಾದರೂ ಸುಲಭವಾಗಿ ದಾಟಿಕೊಂಡು ಹೋಗುವಂತೆ ನಿರ್ಮಿಸಿದ್ದಾರೆ. ಇದು ಅಪಾಯಕ್ಕೆ ಆಹ್ವಾನ ನೀಡಿದಂತಿದೆ ಎಂಬುದೂ ಜನರ ತಕರಾರು.
ಮಳೆಗಾಲದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಪ್ರವಾಸಿಗರು ಖಾನಾಪುರದತ್ತ ಧಾವಿಸುತ್ತಾರೆ. ಇಲ್ಲಿರುವ ವಿವಿಧ ಜಲಪಾತಗಳ ಸೊಬಗು ಸವಿಯುತ್ತಾರೆ. ಬೆಳಗಾವಿ ಪ್ರಾದೇಶಿಕ ಅರಣ್ಯ ವಿಭಾಗದ ಕಣಕುಂಬಿ ಪ್ರಾದೇಶಿಕ ವಲಯಕ್ಕೆ ಸೇರಿದ ಸುಪ್ರಸಿದ್ಧ ಚಿಕಲೆ ಜಲಪಾತ ಎಲ್ಲಕ್ಕಿಂತ ಹೆಚ್ಚು ಆಕರ್ಷಕವಾಗಿದೆ. ಹೀಗಾಗಿ, ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ದೊಡ್ಡದಿದೆ.
ಈ ಹಿಂದೆ ಅಪಾಯಗಳು ಸಂಭವಿಸಿದ್ದರಿಂದ ಇಲಾಖೆಯಿಂದ ಫೆನ್ಸಿಂಗ್ ನಿರ್ಮಿಸಲಾಗಿದೆ. ಆದರೆ, ಇದು ಮೂರರಿಂದ ಆರೂವರೆ ಅಡಿಯಷ್ಟು ಮಾತ್ರ ಎತ್ತರವಿದೆ. ಕೆಲ ಯುವಕರು ಸುಲಭವಾಗಿ ಇದನ್ನು ದಾಟಿ ಜಲಪಾತದ ತುತ್ತತುದಿಗೆ ಹೋಗಿ ವಿಡಿಯೊ, ಫೋಟೊ ತೆಗೆದುಕೊಳ್ಳುತ್ತಾರೆ. ಮತ್ತೆ ಕೆಲವರು ಜಲಪಾತದ ಕೆಳಭಾಗಕ್ಕೆ ಹೋಗಿ ಹಾಡು, ಕುಣಿತ ಮಾಡುತ್ತಾರೆ. ಚಿಕಲೆ ಜಲಪಾತಕ್ಕೆ ಸನಿಹದಲ್ಲಿರುವ ಪಾರವಾಡ ಜಲಪಾತಕ್ಕೂ ಪ್ರವಾಸಿಗರು ಅಕ್ರಮವಾಗಿ ಪ್ರವೇಶಿಸಿ ಹುಚ್ಚಾಟ ನಡೆಸಿದ್ದಾರೆ.
ಆಯತಪ್ಪಿ ಬಿದ್ದರೆ ಪ್ರಾಣಾಪಾಯ ಕಟ್ಟಿಟ್ಟ ಬುತ್ತಿ. ಇಂಥ ಸ್ಥಳದಲ್ಲಿ ಸಿಬ್ಬಂದಿ ಕಾವಲು ಇಡಬೇಕು ಅಥವಾ ಬೇಲಿಯನ್ನು ಇನ್ನಷ್ಟು ಎತ್ತರ ಮಾಡಬೇಕೆಂಬ ಆಗ್ರಹ ಕೇಳಿಬಂದಿದೆ.
ಅರಣ್ಯ ಇಲಾಖೆ ಹಾಗೂ ಗ್ರಾಮ ಅರಣ್ಯ ಸಮಿತಿಯ ಮೂಲಕ ಜಲಪಾತ ಪ್ರದೇಶವನ್ನು ನಿರ್ವಹಿಸಲು ಅನುಕೂಲವಾಗುವಂತೆ ಶುಲ್ಕ ವಿಧಿಸಲು ಡಿಸಿಎಫ್ ಮೇ 26ರಂದು ಆದೇಶ ಹೊರಡಿಸಿದ್ದಾರೆ. ಚಿಕಲೆ ಜಲಪಾತವನ್ನು ಪ್ರವಾಸಿ ತಾಣವನ್ನಾಗಿಸಲು ಪ್ರವಾಸಿಗರ ಸುರಕ್ಷತೆಗೆ ಹಾಗೂ ಪರಿಸರ ಶುಚಿಯಾಗಿ ಇಟ್ಟುಕೊಳ್ಳುವುದೂ ಇದರಲ್ಲಿ ಸೇರಿವೆ. ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿಲ್ಲ ಎಂಬುದು ಪರಿಸರವಾದಿಗಳ ಆರೋಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.