ADVERTISEMENT

ತೆಲಸಂಗ: ಬಿಸಿಯೂಟದಲ್ಲಿ ಹಲವು ತಿನಿಸು, ಮಕ್ಕಳ ಹುಟ್ಟುಹಬ್ಬಕ್ಕೆ ವಿಶೇಷ ಅಡುಗೆ

ಜಗದೀಶ ಖೊಬ್ರಿ
Published 31 ಮಾರ್ಚ್ 2022, 19:30 IST
Last Updated 31 ಮಾರ್ಚ್ 2022, 19:30 IST
ಕೊಟ್ಟಲಗಿ ಗ್ರಾಮದ ನಮ್ಮೂರ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಬಿಸಿಯೂಟದಲ್ಲಿ ಹೋಳಿಗೆ, ಹಾಲು, ತುಪ್ಪ ಮತ್ತು ಹಪ್ಪಳವನ್ನು ಈಚೆಗೆ ಬಡಿಸಲಾಯಿತು
ಕೊಟ್ಟಲಗಿ ಗ್ರಾಮದ ನಮ್ಮೂರ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಬಿಸಿಯೂಟದಲ್ಲಿ ಹೋಳಿಗೆ, ಹಾಲು, ತುಪ್ಪ ಮತ್ತು ಹಪ್ಪಳವನ್ನು ಈಚೆಗೆ ಬಡಿಸಲಾಯಿತು   

ತೆಲಸಂಗ: ಸಮೀಪದ ಕೊಟ್ಟಲಗಿ ಗ್ರಾಮದ ನಮ್ಮೂರ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು, ಬಿಸಿಯೂಟದಲ್ಲಿ ಹಲವು ತಿನಿಸುಗಳನ್ನು ಬಡಿಸುವ ಮೂಲಕ ಮಕ್ಕಳನ್ನು ಆಕರ್ಷಿಸುತ್ತಿದ್ದಾರೆ. ದಾಖಲಾತಿ ಪ್ರಮಾಣ ಹೆಚ್ಚಿಸಲು ಈ ಉಪಕ್ರಮ ಕೈಗೊಂಡು ಗಮನಸೆಳೆದಿದ್ದಾರೆ.

ಇಲ್ಲಿನ ಶಿಕ್ಷಕರು ವಿಭಿನ್ನ ಪ್ರಯೋಗ ಮಾಡುತ್ತಿದ್ದಾರೆ. ಇಲಾಖೆ ನೀಡಿದ ಮೆನುವಿನ ಜೊತೆಗೆ ಹಲವು ರೀತಿಯ ತಿನಿಸುಗಳನ್ನು ಸಿದ್ಧಪಡಿಸಿ ಬಡಿಸುತ್ತಿದ್ದಾರೆ.

ಸರ್ಕಾರವು ಮಕ್ಕಳಿಗೆ ಕೊಡುವ ಧಾನ್ಯದಲ್ಲಿಯೇ ವಿಭಿನ್ನ ಊಟ ತಯಾರಿಸಬಹುದು ಎಂಬ ಮಹತ್ವದ ಸಂದೇಶವನ್ನು ಈ ಶಾಲೆಯಿಂದ ನೀಡಲಾಗುತ್ತಿದೆ. ಅನ್ನ–ಸಾರು ಬದಲಿಗೆ ಇಡ್ಲಿ, ದೋಸೆ, ಹೋಳಿಗೆ, ಚಪಾತಿ, ಪೂರಿ ಮೊದಲಾದವುಗಳನ್ನು ನೀಡಲಾಗುತ್ತಿದೆ. ಒಂದೊಂದನ್ನು ಒಂದೊಂದು ದಿನ ಬಡಿಸಲಾಗುತ್ತಿದೆ. ಆಗಾಗ ಬಜಿ ನೀಡಲಾಗುತ್ತಿದೆ.

ADVERTISEMENT

ಶಾಲೆಯಲ್ಲಿ ಓದುವ ಯಾವುದೇ ಮಗುವಿನ ಜನ್ಮ ದಿನವಿದ್ದರೆ ವಿಶೇಷ ಅಡುಗೆ ಮಾಡಿಸಿ, ಸಸಿ ನೆಟ್ಟು ಅರ್ಥಪೂರ್ಣವಾಗಿ ಆಚರಿಸುವ ಪರಿಪಾಠವನ್ನು ಪಾಲಿಸಿಕೊಂಡು ಬರುತ್ತಿದ್ದಾರೆ ಇಲ್ಲಿನ ಶಿಕ್ಷಕರು. ಎಲ್ಲ ಮಕ್ಕಳಿಗೂ ಈ ವಿಶೇಷ ಕಾರ್ಯಕ್ರಮದ ಅವಕಾಶ ಸಿಗುತ್ತಿದೆ. ಇಲ್ಲಿಗೆ ರೈತರು, ಕೂಲಿಕಾರ್ಮಿಕರು ಹಾಗೂ ಬಡ ಕುಟುಂಬಗಳ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಅವರಿಗೆ ಅಕ್ಷರದಾಸೋಹ ಯೋಜನೆಯಲ್ಲಿ ನೀಡಲಾಗುವ ಮಧ್ಯಾಹ್ನದ ಬಿಸಿಯೂಟ ನೆರವಾಗಿದೆ. ಶಿಕ್ಷಕರು ಅದರ ಮೌಲ್ಯವರ್ಧನೆ ಮಾಡುತ್ತಿರುವುದು ವಿಶೇಷವಾಗಿದೆ.

ಈ ಭಾಗದಲ್ಲಿ ಖಾಸಗಿ ಕಾನ್ವೆಂಟ್‌ಗಳು ಆರಂಭವಾದ್ದರಿಂದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಕುಸಿದಿತ್ತು. ಇದನ್ನು ಮನಗಂಡ ಶಿಕ್ಷಕರು ವಿಶಿಷ್ಟ ಪ್ರಯೋಗಗಳ ಮೂಲಕ ಮಕ್ಕಳ ದಾಖಲಾತಿ ಕುಸಿಯದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. 1ರಿಂದ 7ನೇ ತರಗತಿಯವರೆಗಿನ ಈ ಶಾಲೆಯಲ್ಲಿ 200 ಮಕ್ಕಳು ಓದುತ್ತಿದ್ದಾರೆ. ಅಪ್ಪಾಸಾಹೇಬ ಪಾಟೀಲ ಮುಖ್ಯಶಿಕ್ಷಕರಾಗಿದ್ದಾರೆ. ಶಿಕ್ಷಕರಾಗಿ ಬಿ.ಎಸ್. ತಾಂಶಿ, ಎಸ್.ಜಿ. ಕಾಂಬಳೆ, ಎಸ್.ಎಸ್. ಸತ್ತೀಗೇರಿ ಕಾರ್ಯನಿರ್ವಹುಸತ್ತಿದ್ದಾರೆ. ಮೈದಾನ, ಶೌಚಾಲಯ ಸೌಲಭ್ಯವಿದೆ. ಅವುಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಗುಣಮಟ್ಟದ ಶಿಕ್ಷಣದಿಂದಲೂ ಶಾಲೆ ಹೆಸರು ಮಾಡಿದೆ.

‘ವಿಶಿಷ್ಟ ಬಿಸಿಯೂಟ ತಯಾರಿಕೆಗೆ ಹೆಚ್ಚಿಗೆ ಹಣ ಬೇಕಿಲ್ಲ. ಇಚ್ಛಾಶಕ್ತಿಯಷ್ಟೆ ಬೇಕು. ನಾವೇನೂ ಮನೆಯಿಂದ ತಂದು ಮಾಡುವುದಿಲ್ಲ. ಸರ್ಕಾರ ನೀಡುವ ಆಹಾರ ಪದಾರ್ಥ ಬಳಸಿಯೇ ತಯಾರಿಸಿ ನೀಡುತ್ತಿದ್ದೇವೆ. ಸರ್ಕಾರದ ಸೌಲಭ್ಯವನ್ನು ಫಲಾನುಭವಿಗಳಿಗೆ ಪ್ರಾಮಾಣಿಕವಾಗಿ ತಲುಪಿಸುತ್ತಿದ್ದೇವೆ’ ಎಂದು ಮುಖ್ಯಶಿಕ್ಷಕ ಅಪ್ಪಾಸಾಹೇಬ ಪಾಟೀಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.