ADVERTISEMENT

ಚೆಕ್‌ ಕೊಟ್ಟರು; ಹಣ ‘ತಡೆ’ ಹಿಡಿದರು! ನೆರೆ ಸಂತ್ರಸ್ತ 288 ಮಂದಿಗೆ ಬಾರದ ಪರಿಹಾರ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2020, 9:49 IST
Last Updated 1 ಫೆಬ್ರುವರಿ 2020, 9:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ಗೋಕಾಕ ತಾಲ್ಲೂಕು ಬೀರನಗಡ್ಡಿ ಗ್ರಾಮದ ನೆರೆ ಸಂತ್ರಸ್ತ 288 ಮಂದಿಗೆ ತಾತ್ಕಾಲಿಕ ಪರಿಹಾರವಾಗಿ ನೀಡಿದ ತಲಾ ₹ 10ಸಾವಿರ ಇನ್ನೂ ಸಂದಾಯವಾಗಿಲ್ಲ. ಅವರಿಗೆ ಚೆಕ್‌ ವಿತರಿಸಿದ್ದ ತಾಲ್ಲೂಕು ಆಡಳಿತದ ಅಧಿಕಾರಿಗಳೇ, ಹಣ ಬಿಡುಗಡೆ ಆಗದಂತೆ ತಡೆ ಹಿಡಿದಿರುವುದು ಇದಕ್ಕೆ ಕಾರಣವಾಗಿದ್ದು, ಅಚ್ಚರಿಯನ್ನೂ ಮೂಡಿಸಿದೆ.

ಆ ಗ್ರಾಮದಲ್ಲಿ ಆಗಸ್ಟ್‌ ಮೊದಲ ವಾರ ಪ್ರವಾಹ ಉಂಟಾಗಿತ್ತು. ಆಗ 700 ಕುಟುಂಬಗಳಿಗೆ ತಾತ್ಕಾಲಿಕ ಪರಿಹಾರ ನೀಡಲಾಗಿತ್ತು. ಇದರಲ್ಲಿ 288 ಕುಟುಂಬಗಳಿಗೆ ಹಣ ಬಂದಿಲ್ಲ. ಆಗ ಬರಬಹುದು, ಈಗ ಬರಬಹುದು ಎಂದು ಕಾದಿದ್ದರು. ಅಧಿಕಾರಿಗಳೇ ಹಣ ಬಿಡುಗಡೆಯಾಗದಂತೆ ತಡೆ ಹಿಡಿದಿರುವುದು ಈಚೆಗೆ ತಿಳಿದುಬಂದಿದೆ. ಹೀಗಾಗಿ ಅವರು ಆಕ್ರೋಶಗೊಂಡಿದ್ದಾರೆ.

‘ಪ್ರವಾಹದಿಂದಾಗಿ ಇಡೀ ಊರು ಜಲಾವೃತವಾಗಿತ್ತು. ನಾವೆಲ್ಲರೂ ಪರಿಹಾರ ಕೇಂದ್ರದಲ್ಲಿದ್ದೆವು. ಚೆಕ್‌ ಕೊಡುವುದಕ್ಕೆ ಮುನ್ನವೇ ಅಧಿಕಾರಿಗಳು ಇದೆಲ್ಲವನ್ನೂ ಪರಿಶೀಲನೆ ಮಾಡಿರುತ್ತಾರಲ್ಲವೇ? ಈಗ ಏನೇನೋ ನೆಪ ಹೇಳಿ ಪರಿಹಾರ ಸಿಗದಂತೆ ಮಾಡಿದ್ದಾರೆ. ಹಾಗಾದರೆ ಇಷ್ಟೊಂದು ಮಂದಿ ಅನರ್ಹರಿಗೆ ಚೆಕ್‌ ಕೊಡಲಾಗಿತ್ತೇ’ ಎನ್ನುವ ಪ್ರಶ್ನೆ ಅವರದಾಗಿದೆ.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ, ‘ಸಾಮಾನ್ಯವಾಗಿ ಸಂತ್ರಸ್ತರ ಬ್ಯಾಂಕ್‌ ಖಾತೆಗೆ ಹಣ ಜಮಾ ಮಾಡಲಾಗುತ್ತದೆ. ಆದರೆ, ಗೋಕಾಕದಲ್ಲಿ ಚೆಕ್‌ ವಿತರಿಸಿರುವುದು ನಿಜ. 288 ಮಂದಿಯ ಮನೆಗಳಿಗೆ ಹಾನಿಯಾಗಿಲ್ಲ; ಅವರು ಪರಿಹಾರಕ್ಕೆ ಅರ್ಹರಾಗಿಲ್ಲ ಎನ್ನುವುದು ಮರುದಿನವೇ ಗೊತ್ತಾಗಿದ್ದರಿಂದ ಚೆಕ್‌ ತಡೆ ಹಿಡಿದಿದ್ದೇವೆ. ಇದಕ್ಕೆ ವಿಡಿಯೊ ದಾಖಲೆಯೂ ಇದೆ ಎಂದು ಅಲ್ಲಿನ ತಹಶೀಲ್ದಾರ್‌ ತಿಳಿಸಿದ್ದಾರೆ. ಆದಾಗ್ಯೂ, ರೈತ ಮುಖಂಡರಿಂದ ದೂರು ಬಂದಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಪರಿಶೀಲಿಸುವಂತೆ ತಹಶೀಲ್ದಾರ್‌ ಹಾಗೂ ಉಪವಿಭಾಗಾಧಿಕಾರಿಗೆ ಸೂಚಿಸಿದ್ದೇನೆ. ನೈಜ ಫಲಾನುಭವಿಗಳಿದ್ದಲ್ಲಿ ಅವರಿಗೆ ಪರಿಹಾರ ದೊರೆಯುವಂತೆ ಕ್ರಮ ವಹಿಸುತ್ತೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.