ADVERTISEMENT

ಬೆಳಗಾವಿ: ಆರ್‌ಎಸ್‌ಎಸ್‌ನವರು ಇತಿಹಾಸ ತಿಳಿದು ಮಾತನಾಡಲಿ -ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2021, 13:06 IST
Last Updated 11 ನವೆಂಬರ್ 2021, 13:06 IST
ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಗುರುವಾರ ನಡೆದ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹಾಗೂ ಮುಖಂಡರು ಪಾಲ್ಗೊಂಡಿದ್ದಾರೆ
ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಗುರುವಾರ ನಡೆದ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹಾಗೂ ಮುಖಂಡರು ಪಾಲ್ಗೊಂಡಿದ್ದಾರೆ   

ಬೆಳಗಾವಿ: ‘ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅಪ್ರತಿಮ ಹೋರಾಟಗಾರ. ತನ್ನ ಕೊನೆ ಉಸಿರು ಇರುವವರೆಗೂ ನಾಡು ಮತ್ತು ದೇಶಕ್ಕಾಗಿ ಹೋರಾಡಿದರು. ಅದು ಇಂದಿನ ಪೀಳಿಗೆಯವರಿಗೆ ಮಾದರಿಯಾಗಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆಶಿಸಿದರು.

ಇಲ್ಲಿನ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಟಿಪ್ಪು ಫೋಟೊಗೆ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಮಡಿಕೇರಿ ದಂಗೆಯಲ್ಲಿ 70ಸಾವಿರ ಸೈನಿಕರನ್ನು ಟಿಪ್ಪು ಕೊಂದ ಎಂದು ಹೇಳುವ ಮೂಲಕ ಬಿಜೆಪಿಗರು ಇತಿಹಾಸವನ್ನು ತಿರುಚುತ್ತಿದ್ದಾರೆ. ಆ ಸಮಯದಲ್ಲಿ 70ಸಾವಿರ ಸೈನಿಕರು ಇರಲೇ ಇಲ್ಲ. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರು ಇತಿಹಾಸ ತಿಳಿದು ಮಾತನಾಡಬೇಕು’ ಎಂದು ತಿರುಗೇಟು ನೀಡಿದರು.

ADVERTISEMENT

‘ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್, ಆರ್.ಅಶೋಕ್‌ ಸೇರಿದಂತೆ ಬಿಜೆಪಿ ನಾಯಕರು ಹಿಂದೆ ಟಿಪ್ಪು ಜಯಂತಿಯಲ್ಲಿ ಭಾಗವಹಿಸಿ ಗುಣಗಾನ ಮಾಡಿದ್ದರು. ಆದರೆ, ಇಂದು ರಾಜಕೀಯಕ್ಕಾಗಿ ಟಿಪ್ಪುವಿನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಟಿಪ್ಪು ಜಾತ್ಯತೀತವಾದಿ ಆಗಿದ್ದರು. ಅವರ ಸೇನೆಯಲ್ಲಿ ಎಲ್ಲ ಜಾತಿ, ಧರ್ಮದವರೂ ಇದ್ದರು. ಕನ್ನಡ ಭಾಷೆಯ ಬಗ್ಗೆಯೂ ಅವರಿಗೆ ಅಪಾರ ಅಭಿಮಾನವಿತ್ತು. ಅವರು ಒಂದೇ ಜಾತಿ, ಸಮುದಾಯಕ್ಕೆ ಸೀಮಿತವಲ್ಲ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ಮುಖಂಡರಾದ ಮೂಸಾ ಗೋರಿಖಾನ, ಅಕ್ಬರ್ ಸಡೇಕರ್, ತಬಸುಮ್ ಮುಲ್ಲಾ, ದಿಲ್‌ದಾರ್‌ ಬೋಜಗಾರ್, ಇರ್ಫಾನ್ ನದಾಪ್, ಮುಬಸೀರ ಸಾಕಲೈನ್, ರೋಹಿಣಿ ಬಾಬಸೇಟ್ ಪಾಲ್ಗೊಂಡಿದ್ದರು.

ಆಸ್ಪತ್ರೆಗೆ ದಿಢೀರ್ ಭೇಟಿ:ಶಾಸಕ ಸತೀಶ ಜಾರಕಿಹೊಳಿ ನಗರದ ಜಿಲ್ಲಾಸ್ಪತ್ರೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು. ಸಿಬ್ಬಂದಿ ಹಾಗೂ ರೋಗಿಗಳಿಂದ ಮಾಹಿತಿ ಪಡೆದರು.

ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸ್ಥಳದಲ್ಲಿದ್ದ ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಒದಗಿಸುವಂತೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.