ADVERTISEMENT

ಅಭಿವೃದ್ಧಿ ‘ಭಾಗ್ಯ’ ಕಾಣದ ತಾಣಗಳು

ವಿಶ್ವ ಪ್ರವಾಸೋದ್ಯಮ ದಿನಾಚರಣೆ ಸೆ. 27ರಂದು

ಎಂ.ಮಹೇಶ
Published 26 ಸೆಪ್ಟೆಂಬರ್ 2018, 16:30 IST
Last Updated 26 ಸೆಪ್ಟೆಂಬರ್ 2018, 16:30 IST
ಗೋಕಾಕ ಫಾಲ್ಸ್‌ನಲ್ಲಿ ಗಲೀಜಿನ ದರ್ಶನ
ಗೋಕಾಕ ಫಾಲ್ಸ್‌ನಲ್ಲಿ ಗಲೀಜಿನ ದರ್ಶನ   

ಬೆಳಗಾವಿ: ಯಾವ ದಿಕ್ಕಿನಲ್ಲಿ ಹೋದರೂ ಒಂದಿಲ್ಲೊಂದು ‘ಪ್ರಕೃತಿ ನಿರ್ಮಿತ’ ಪ್ರವಾಸಿ ತಾಣಗಳಿರುವ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರದಿಂದ ನಿರೀಕ್ಷಿತ ಮಟ್ಟದಲ್ಲಿ ಸ್ಪಂದನೆ ದೊರೆಯುತ್ತಿಲ್ಲ. ಇದರಿಂದ ಈ ಸ್ಥಳಗಳು ‘ತ್ರಾಣ’ ಕಳೆದುಕೊಂಡಿವೆ.

ಗಡಿ ಜಿಲ್ಲೆಯಲ್ಲಿ ನಿಸರ್ಗದ ಕೊರಳಿಗೆ ಮುತ್ತಿಗೆ ಹಾರದಂತಿರುವ ಹಲವು ತಾಣಗಳಲ್ಲಿ ಅಭಿವೃದ್ಧಿ, ಸುಧಾರಣೆಗೆ ಆದ್ಯತೆ ನೀಡಲಾಗುತ್ತಿಲ್ಲ. ರಾಜ್ಯದ ವಿವಿಧ ಜಿಲ್ಲೆಗಳವರು, ನೆರೆಯ ಮಹಾರಾಷ್ಟ್ರ, ಗೋವಾ ರಾಜ್ಯಗಳಿಂದಲೂ ಇಲ್ಲಿಗೆ ಪ್ರವಾಸಿಗರು ಬರುತ್ತಾರೆ. ಬಹಳಷ್ಟು ಸ್ಥಳಗಳಲ್ಲಿ ಕನಿಷ್ಠ ಮೂಲಸೌಲಭ್ಯಕ್ಕೂ ಅವರು ಪರದಾಡುವಂಥ ಸ್ಥಿತಿ ಇದೆ.

ಇಲ್ಲಿನ ಪ್ರಮುಖ ಪ್ರವಾಸಿ ತಾಣಗಳನ್ನು ‘ಬ್ರಾಂಡ್‌’ ಮಾಡಿ ಕುಂದಾನಗರಿಯ ಕಂಪನ್ನು ‘ಪ್ರವಾಸೋದ್ಯಮ ಭೂಪಟ’ದಲ್ಲಿ ಪಸರಿಸುವುದಕ್ಕೆ ಹೇರಳ ಅವಕಾಶಗಳಿದ್ದರೂ ಜಿಲ್ಲಾಡಳಿತ ಅಥವಾ ಪ್ರವಾಸೋದ್ಯಮ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಸರ್ಕಾರದಿಂದ ದೊರೆಯುತ್ತಿರುವ ಅನುದಾನವೂ ‘ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎಂಬಂತಾಗಿದೆ. ಆಯಾ ಭಾಗದ ಜನಪ್ರತಿನಿಧಿಗಳು ಕೂಡ ಇದನ್ನು ‘ಆದ್ಯತೆಯ ವಿಷಯ’ವನ್ನಾಗಿ ಪರಿಗಣಿಸಿಲ್ಲ. ಇದರಿಂದಾಗಿ ಪ್ರವಾಸೋದ್ಯಮ ಚೇತರಿಕೆ ಕಾಣುತ್ತಿಲ್ಲ.

ADVERTISEMENT

ಉತ್ತರಕ್ಕೆ ಅನ್ಯಾಯ:

ಸರ್ಕಾರವು, ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ದಕ್ಷಿಣದ ಜಿಲ್ಲೆಗಳಿಗೆ ನೀಡಿದಷ್ಟು ಪ್ರಾಮುಖ್ಯತೆಯನ್ನು ಉತ್ತರದ ಜಿಲ್ಲೆಗಳಿಗೆ ನೀಡದೆ, ಅನ್ಯಾಯ ಮಾಡುತ್ತಿದೆ ಎನ್ನುವ ಆರೋಪವೂ ಸಾರ್ವಜನಿಕರಿಂದ ಕೇಳಿಬರುತ್ತಿದೆ.

ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರ ಕಚೇರಿ ಇದ್ದರು, ಕಾಯಂ ಅಧಿಕಾರಿ ಇಲ್ಲ. ಹಲವು ತಿಂಗಳುಗಳವರೆಗೆ ಎಫ್‌ಡಿಎ, ಎಸ್‌ಡಿಎಗಳೇ ಅಧಿಕಾರಿ ಜವಾಬ್ದಾರಿ ನಿರ್ವಹಿಸಿದ್ದಾರೆ. !2012ರಿಂದಲೂ ಬೇರೊಂದು ಇಲಾಖೆಯ ಅಧಿಕಾರಿಗಳಿಗೆ ಪ್ರಭಾರ ವಹಿಸಲಾಗುತ್ತಿದೆ! ಈ ವಿದ್ಯಮಾನ ಕೂಡ ಉದ್ಯಮದ ಪ್ರಗತಿಗೆ ತೊಡಕಾಗಿ ಪರಿಣಮಿಸಿದೆ.

ಉದ್ಯಾನ ಅಭಿವೃದ್ಧಿಯಾಗಲಿಲ್ಲ:

ಸರ್ವ ಋತುವಿನಲ್ಲೂ ಪ್ರವಾಸಿಗರನ್ನು ಆಕರ್ಷಿಸುವ ‘ಕರ್ನಾಟಕದ ನಯಾಗರ’ ಎಂದೇ ಹೆಸರಾಗಿರುವ ಗೋಕಾಕ ಫಾಲ್ಸ್‌ ಬಳಿ ಪ್ರವಾಸಿಗರಿಗೆ ಮೂಲಸೌಲಭ್ಯಗಳಿಲ್ಲ. ಗೋಕಾಕ ಫಾಲ್ಸ್‌ನ ಪಕ್ಕದಲ್ಲಿರುವ ಉದ್ಯಾನದ ನಿರ್ವಹಣೆ ಸಮರ್ಪಕವಾಗಿ ನಡೆಯತ್ತಿಲ್ಲ. ಈ ತಾಣದಲ್ಲಿ ವಾಹನಗಳ ನಿಲುಗಡೆಗೂ ಪರದಾಡುವಂಥ ಸ್ಥಿತಿ ಇದೆ. ಸಾರ್ವಜನಿಕ ಶೌಚಾಲಯಗಳ ವ್ಯವಸ್ಥೆಯೂ ಸರಿಯಾಗಿಲ್ಲ. ಗೊಡಚನಮಲ್ಕಿ ಜಲಪಾತವೂ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಘಟಪ್ರಭಾ ನದಿಗೆ ಹುಕ್ಕೇರಿ ತಾಲ್ಲೂಕಿನ ಹಿಡಕಲ್‌ನಲ್ಲಿ ನಿರ್ಮಿಸಿರುವ ರಾಜಾ ಲಖಮಗೌಡ ಜಲಾಶಯದ ಉದ್ಯಾನವನ್ನು ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಜಲಾಶಯದ ಉದ್ಯಾನದ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು. ಈ ಮೂಲಕ ಇನ್ನೂ ಹೆಚ್ಚಿನ ಪ್ರವಾಸಿಗರನ್ನು ಸೆಳೆಯಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದಲೂ ನನೆಗುದಿಗೆ ಬಿದ್ದಿದೆ.

ನಿಂತೇ ಹೋಯ್ತು ಕದಂಬೋತ್ಸವ!

ಕಿತ್ತೂರು ಉತ್ಸವ, ಬೆಳವಡಿ ಉತ್ಸವ ಮತ್ತು ಸಂಗೊಳ್ಳಿ ಉತ್ಸವಗಳನ್ನು ನಡೆಸಲಾಗುತ್ತಿದೆ. ಆದರೆ, ಕನ್ನಡಿಗರ ಪ್ರಥಮ ರಾಜಮನೆತನವಾದ ಕದಂಬರ ಉಪ ರಾಜಧಾನಿಯಾಗಿದ್ದ ಖಾನಾಪುರ ತಾಲ್ಲೂಕಿನ ಹಲಸಿಯಲ್ಲಿ ಕದಂಬೋತ್ಸವ ನಡೆಸಲು ಸರ್ಕಾರ ಉತ್ಸಾಹ ತೋರುತ್ತಿಲ್ಲ.

ಅಲ್ಲಿ 2014 ಹಾಗೂ 2015ರಲ್ಲಿ ಉತ್ಸವಗಳನ್ನು ಆಯೋಜಿಸಲಾಗಿತ್ತು. ನಂತರ, ನಿಂತು ಹೋಗಿದೆ. ಗತವೈಭವ ಸಾರುವ ಅಲ್ಲಿನ ಶಿಲ್ಪಕಲೆಯ ಮೆರುಗನ್ನು ಎಲ್ಲೆಡೆಯೂ ಪಸರಿಸುವ ಕೆಲಸವಾಗುತ್ತಿಲ್ಲ. ಇಂತಹ ಹತ್ತು ಹಲವು ತಾಣಗಳು ಜಿಲ್ಲೆಯಲ್ಲಿ ಎಲೆಮರೆ ಕಾಯಿಗಳಂತಿವೆ. ಸೌಕರ್ಯಗಳಿಗಾಗಿ ಕಾಯುತ್ತಿವೆ.

ಪ್ರವಾಸಿ ಟ್ಯಾಕ್ಸಿ, ಮಿತ್ರ, ಹೋಟೆಲ್

ಸರ್ಕಾರದ ಯೋಜನೆಗಳ ಜಾರಿಗೆ ಕ್ರಮ ವಹಿಸಲಾಗಿದೆ ಎಂದು ಪ್ರಭಾರ ಉಪನಿರ್ದೇಶಕ ಸುಭಾಷ್‌ ಉಪ್ಪಾರ ಪ್ರತಿಕ್ರಿಯಿಸಿದರು.

‘2018–19ನೇ ಸಾಲಿನಲ್ಲಿ ಜಿಲ್ಲೆಗೆ ಅನುದಾನ ಹಂಚಿಕೆಯಾಗಿಲ್ಲ. ಪ್ರವಾಸಿ ಹೋಟೆಲ್‌ಗಳನ್ನು ಆರಂಭಿಸುವವರಿಗೆ ಸಹಾಯಧನ ನೀಡಲಾಗುತ್ತಿದೆ. 4 ವರ್ಷಗಳಲ್ಲಿ 17 ಮಂದಿಗೆ ಅನುಮತಿ ನೀಡಲಾಗಿದೆ. ಈ ಪೈಕಿ 7 ಪೂರ್ಣಗೊಂಡಿವೆ. ಸಹಾಯಧನ ಬಿಡುಗಡೆಗೆ ಪ್ರಸ್ತಾವ ಸಲ್ಲಿಸಲಾಗಿದೆ. 3 ವರ್ಷಗಳಲ್ಲಿ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳ 415 ಫಲಾನುಭವಿಗಳಿಗೆ ಪ್ರವಾಸಿ ಟ್ಯಾಕ್ಸಿಗಳನ್ನು ಕೊಡಿಸಲಾಗಿದೆ. ಇದಕ್ಕಾಗಿ ₹ 9 ಕೋಟಿ ವೆಚ್ಚವಾಗಿದೆ. ಪ್ರಸಕ್ತ ಸಾಲಿನಲ್ಲಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ಕೊಡಲಾಗಿದೆ’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಪ್ರಮುಖ ಪ್ರವಾಸಿ ತಾಣಗಳಲ್ಲಿ ಜನರಿಗೆ ನೆರವಾಗಲು ಹಾಗೂ ಮಾಹಿತಿ ನೀಡಲು ಗೃಹರಕ್ಷಕ ದಳದ 32 ಮಂದಿಯನ್ನು ‘ಪ್ರವಾಸಿ ಮಿತ್ರ’ರೆಂದು ನಿಯೋಜಿಸಲಾಗಿದೆ. ಶಿಕ್ಷಣ ಇಲಾಖೆ ಮೂಲಕ ಮಕ್ಕಳಿಗೆ ‘ಕರ್ನಾಟಕ ದರ್ಶನ’ ಪ್ರವಾಸ ಆಯೋಜಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಗೋಕಾಕ ಫಾಲ್ಸ್‌ನಲ್ಲಿ ಆಸನಗಳ ವ್ಯವಸ್ಥೆ ಮಾಡಲಾಗಿದೆ. ತೂಗು ಸೇತುವೆ, ಉದ್ಯಾನ ಹಾಗೂ ರಾಜಹಂಸಗಡ ಕೋಟೆ ಅಭಿವೃದ್ಧಿಗೆ ಪ್ರಸ್ತಾವ ಕಳುಹಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.