ADVERTISEMENT

ಸಾರಿಗೆ ನೌಕರರ ವೇತನಕ್ಕೆ ದುಡ್ಡಿಲ್ಲ: ಲಕ್ಷ್ಮಣ ಸವದಿ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 10:24 IST
Last Updated 14 ನವೆಂಬರ್ 2020, 10:24 IST
ಸಾರಿಗೆ ಸಚಿವ ಲಕ್ಷ್ಮಣ ಸವದಿ
ಸಾರಿಗೆ ಸಚಿವ ಲಕ್ಷ್ಮಣ ಸವದಿ   

ಬೆಳಗಾವಿ: ‘ಸಾರಿಗೆ ಇಲಾಖೆ ನೌಕರರಿಗೆ ಸಂಬಳ ಕೊಡಲು ದುಡ್ಡಿಲ್ಲ. ಆರ್ಥಿಕ ಇಲಾಖೆಗೆ ಮತ್ತೊಮ್ಮೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಉಪ ಮುಖ್ಯಮಂತ್ರಿಯೂ ಆಗಿರುವ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.

ಇಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಇಲಾಖೆಯಲ್ಲಿ 1.30 ಲಕ್ಷ ಸಿಬ್ಬಂದಿ ಇದ್ದಾರೆ. ಅವರಿಗೆ ವೇತನಕ್ಕಾಗಿಯೇ ತಿಂಗಳಿಗೆ ₹ 325 ಕೋಟಿ ಬೇಕಾಗುತ್ತದೆ. ಕೋವಿಡ್–19 ಲಾಕ್‌ಡೌನ್‌ನಿಂದಾಗಿ ಇಲಾಖೆಗೆ ಹೆಚ್ಚಿನ ಹಾನಿಯಾಗಿದೆ. ಲಾಕ್‌ಡೌನ್‌ ಜಾರಿಯಲ್ಲಿದ್ದಾಗಲೂ ಎರಡು ತಿಂಗಳ ಸಂಬಳ ಕೊಟ್ಟಿದ್ದೇವೆ. ಆ ಬಳಿಕ ಮತ್ತೆ 4 ತಿಂಗಳ ವೇತನವನ್ನು ಶೇ.25ರಷ್ಟನ್ನು ಸಂಬಂಧಿಸಿದ ಸಾರಿಗೆ ನಿಗಮ ಮತ್ತು ಶೇ. 75ರಷ್ಟು ಸರ್ಕಾರದಿಂದ ಹೊಂದಿಸಿ ಕೊಟ್ಟಿದ್ದೇವೆ’ ಎಂದರು.

‘ಕೊರೊನಾ ಆತಂಕ ನಿವಾರಣೆಯಾಗದೆ ಇರುವುದರಿಂದಾಗಿ, ಸಾರಿಗೆ ಬಸ್‌ಗಳಲ್ಲಿ ಸಂಚರಿಸಲು ಪ್ರಯಾಣಿಕರು ನಿರೀಕ್ಷಿಸಿದಷ್ಟು ಬರುತ್ತಿಲ್ಲ. ಇದರಿಂದಾಗಿ, ಈಗ ಸಿಗುತ್ತಿರುವ ವರಮಾನವು ಬಸ್‌ಗಳ ಡೀಸೆಲ್‌ಗೆ ಮಾತ್ರವೇ ಸಾಕಾಗುತ್ತಿದೆ. ಹೀಗಾಗಿ ವೇತನ ಕೊಡಲು ನಮ್ಮ ಬಳಿ ಹಣವಿಲ್ಲದಾಗಿದೆ. ಆದ್ದರಿಂದ ನೌಕರರಿಗೆ ಸಂಬಳ ಬಿಡುಗಡೆಯಲ್ಲಿ ತೊಂದರೆ ಆಗುತ್ತಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಆರ್ಥಿಕ ನೆರವು ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದೆವು. ಆದರೆ, ಪ್ರಸ್ತಾವ ತಿರಸ್ಕೃತವಾಗಿದೆ. ಹಣ ಕೊಡುವುದು ಕಷ್ಟವಿದೆ ಎಂದು ಆ ಇಲಾಖೆ ಹೇಳಿದೆ. ಮತ್ತೊಮ್ಮೆ ಪ್ರಸ್ತಾವ ಸಲ್ಲಿಸಲಿದ್ದೇವೆ. ಕೆಲವೇ ದಿನಗಳಲ್ಲಿ ಸಮಸ್ಯೆ ಬಗೆಹರಿಯುವ ಭರವಸೆ ಇದೆ. ಸಿಬ್ಬಂದಿಗೆ ಸಂಬಳ ಕೊಡಿಸುವ ಕೆಲಸವನ್ನು ಮಾಡುತ್ತೇನೆ. ಮುಖ್ಯಮಂತ್ರಿಯೊಂದಿಗೂ ಚರ್ಚಿಸುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.