ADVERTISEMENT

ಬೆಳಗಾವಿ: ಸಾರಿಗೆ ನೌಕರರ ಮುಷ್ಕರ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2020, 4:52 IST
Last Updated 13 ಡಿಸೆಂಬರ್ 2020, 4:52 IST
ಸಾರಿಗೆ ನೌಕರರ ಮುಷ್ಕರ ಮುಂದುವರಿಕೆ
ಸಾರಿಗೆ ನೌಕರರ ಮುಷ್ಕರ ಮುಂದುವರಿಕೆ   

ಬೆಳಗಾವಿ: ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯುಕೆಆರ್‌ಟಿಸಿ) ನೌಕರರು ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆಸುತ್ತಿರುವ ಮುಷ್ಕರ ಭಾನುವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ.

ಕೆಲಸದಿಂದ ದೂರ ಉಳಿದು ಅವರು ಮುಷ್ಕರ ಮುಂದುವರಿಸಿದ್ದಾರೆ. ಅವರಿಗೆ ಕನ್ನಡಪರ ಸಂಘಟನೆಗಳ ಮುಖಂಡರು ಮತ್ತು ರಾಜ್ಯ ರೈತ ಸಂಘಟನೆಯ ನಾಯಕರು ಬೆಂಬಲ ನೀಡಿದ್ದಾರೆ.

ನಿಲ್ದಾಣದಲ್ಲಿದ್ದ ಬಸ್‌ಗಳನ್ನು ಶನಿವಾರ ತಡರಾತ್ರಿ ಡಿಪೊಗೆ ತೆಗೆದುಕೊಂಡು ಹೋಗಿ ನಿಲ್ಲಿಸಿದ ಚಾಲಕರು, ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಇದರಿಂದಾಗಿ ಭಾನುವಾರ ನಗರ ಹಾಗೂ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್‌ಗಳು ಕಂಡುಬರಲಿಲ್ಲ.

ADVERTISEMENT

ಜೊತೆಗೆ, ಪ್ರಯಾಣಿಕರು ಕೂಡ ನಿಲ್ದಾಣಗಳತ್ತ ಸುಳಿಯುತ್ತಿಲ್ಲ. ರಜಾ ದಿನ ಆಗಿರುವುದರಿಂದ ವಿಟಿಯು, ಆರ್‌ಸಿಯು ಸೇರಿದಂತೆ ವಿವಿಧ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಬಸ್‌ ನಿಲ್ದಾಣಗಳತ್ತ ಬರಲಿಲ್ಲ. ಇದರಿಂದಾಗಿ ನಿಲ್ದಾಣ ಬಿಕೋ ಎನ್ನುತ್ತಿದೆ.

ತುರ್ತು ಕೆಲಸಗಳಿಗೆಂದು ಪ್ರಯಾಣ ಮಾಡಲೇಬೇಕಾದವರು ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ.

ನೌಕರರ ಮುಷ್ಕರದಿಂದಾಗಿ ಸಂಸ್ಥೆಯ ಬೆಳಗಾವಿ ಹಾಗೂ ಚಿಕ್ಕೋಡಿ ವಿಭಾಗ ಸೇರಿ ನಿತ್ಯ ₹ 1 ಕೋಟಿ ನಷ್ಟ ಉಂಟಾಗುತ್ತಿದೆ. ಎರಡು ದಿನಗಳಲ್ಲಿ ₹ 2 ಕೋಟಿ ನಷ್ಟವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.