ಮೂಡಲಗಿ: ಮೂಡಲಗಿ ತಾಲ್ಲೂಕಿನ ತುಕ್ಕಾನಟ್ಟಿಯ ಲಕ್ಷ್ಮೀದೇವಿ ಜಾತ್ರೆಯು ಇದೇ ಸೆ.1 ಮತ್ತು 2ರಂದು ಜರುಗಲಿದ್ದು, ಸೋಮವಾರ (ಸೆ.1ರಂದು) ಬೆಳಿಗ್ಗೆ 10ರಿಂದ ಭಕ್ತಿಭಾವದಲ್ಲಿ ತೇರು ಎಳೆಯಲು ಮತ್ತು ಪಲ್ಲಕ್ಕಿ ಸೇವೆಗೈಯಲು ಗ್ರಾಮದ ಭಕ್ತರು ಸಜ್ಜಾಗಿದ್ದಾರೆ.
ತುಕ್ಕಾನಟ್ಟಿಯ ‘ಹಸರಬ್ಬ’ ಎಂದೇ ಪ್ರಸಿದ್ಧಿ ಇರುವ ಲಕ್ಷ್ಮೀದೇವಿ ಜಾತ್ರೆಗೆ 150 ವರ್ಷಗಳ ಪೂರ್ವ ಇತಿಹಾಸವಿದೆ. ಕಲ್ಲು ರೂಪದಲ್ಲಿ ಲಕ್ಷ್ಮೀದೇವಿ ಉದ್ಭವಾಗಿರುವ ಸ್ಥಳದಲ್ಲಿ ಇಲ್ಲಿಯ ಪೂರ್ವಜರು ದೀಪ ಹಚ್ಚಿ ನಿತ್ಯ ಪೂಜೆ ಸಲ್ಲಿಸಿಕೊಂಡು ಬಂದಿರುವರು. ಲಕ್ಷ್ಮೀದೇವಿಯ ಶ್ರದ್ಧಾ ಸ್ಥಳದ ಸುತ್ತಮುತ್ತಲೂ ಗ್ರಾಮವು ಬೆಳೆದು ನಿಂತು ಇಂದು ಸಾವಿರಾರು ಕುಟುಂಬಗಳ ನೆಲೆಯಾಗಿದೆ. 70–80 ವರ್ಷಗಳ ಹಿಂದೆ ದೇವಿಗೆ ದೇವಸ್ಥಾನ ನಿರ್ಮಿಸಿ ಗ್ರಾಮದ ಜನರೆಲ್ಲ ಪೂಜಿಸಿಕೊಂಡು ಮತ್ತು ದೇವಿ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡು ನಡೆದುಕೊಂಡು ಬಂದಿದ್ದಾರೆ.
ಜಾತ್ರೆಗೆ ಹಸರಬ್ಬದ ಮೆರಗು:
ಕೃಷಿಯನ್ನು ನಂಬಿಕೊಂಡಿರುವ ಇಲ್ಲಿಯ ರೈತಾಪಿ ಜನರು ಮುಂಗಾರು ಮಳೆಯ ನಂತರ ಬಿತ್ತನೆ ಮಾಡಿ, ಶ್ರಾವಣ ತಿಂಗಳು ಮುಗಿಯುತ್ತಿದ್ದಂತೆ ಭೂಮಿಯ ತುಂಬೆಲ್ಲ ಹಚ್ಚುಹಸಿರಿನಿಂದ ಪೈರು ತುಂಬಿಕೊಂಡು ಎಲ್ಲರ ಮೊಗದಲ್ಲಿ ಸಂಭ್ರಮ ತುಂಬಿಕೊಂಡಿರುವ ಕಾಲ. ‘ಪೈರು ರೂಪದಲ್ಲಿ ಎಲ್ಲರ ಮನೆಗೆ ಲಕ್ಷ್ಮೀ ಬರುವಳು’ ಎಂದು ನಂಬಿಕೆ ಇಲ್ಲಿಯ ಜನರಲ್ಲಿದ್ದು ಪ್ರತಿ ವರ್ಷ ಅನಂತ ಹುಣ್ಣಿಮೆಯ ಪೂರ್ವದಲ್ಲಿ ಬರುವ ಮಂಗಳವಾರ ಜಾತ್ರೆ ಮಾಡುವ ಸಂಪ್ರದಾಯ ಗ್ರಾಮದಲ್ಲಿ ನಡೆದುಕೊಂಡು ಬಂದಿದೆ. ಮುಂಚೆ ಜಾತ್ರೆಯು ಪಲ್ಲಕ್ಕಿ ಸೇವೆಗೈಯುವ ಮೂಲಕ ನಡೆಯುತಿತ್ತು. ಕಳೆದ ನಾಲ್ಕು ವರ್ಷಗಳ ಹಿಂದೆ ದೇವಿಗೆ ಸುಂದರ ರಥವನ್ನು ಮಾಡಿಸಿದ್ದು, ರಥದಲ್ಲಿ ಲಕ್ಷ್ಮೀದೇವಿಯ ಬೆಳ್ಳಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಜೃಂಭಣೆಯಿಂದ ರಥೋತ್ಸವ ಮಾಡುತ್ತಿರುವರು. ಜಾತಿ, ಮತ, ಧರ್ಮ ಮತ್ತು ಮೇಲು, ಕೀಳು ಎನ್ನುವ ಬೇಧ ಇಲ್ಲದೆ ಜನರು ಸಾಮರಸ್ಯದಲ್ಲಿ ಜಾತ್ರೆ ಮಾಡುತ್ತಾರೆ. ‘ಭಕ್ತರು ಸೇರಿ ಲಕ್ಷ್ಮೀದೇವಿ ದೇವಸ್ಥಾನಕ್ಕೆ ₹80 ಲಕ್ಷ ವೆಚ್ಚದ ಕಲ್ಯಾಣ ಮಂಟಪ ನಿರ್ಮಿಸಿದ್ದು, ಅದರಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ₹10 ಲಕ್ಷ ಸ್ವತ: ದೇಣಿಗೆ ನೀಡಿದ್ದಾರೆ ಮತ್ತು ಅವರು ಹಲವು ವರ್ಷಗಳಿಂದ ಜಾತ್ರೆಯ ಅನ್ನದಾಸೋಹ ಸೇವೆ ಮಾಡುತ್ತಿದ್ದಾರೆ’ ಎಂದು ಲಕ್ಷ್ಮೀದೇವಿ ಸೇವಾ ಕಮಿಟಿ ಅಧ್ಯಕ್ಷ ಬಾಪು ಎಸ್. ಗದಾಡಿ ಮತ್ತು ಸದಸ್ಯರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಭಕ್ತರ ಹರಕೆ:
‘ನಂಬಿದ ಲಕ್ಷ್ಮೀದೇವಿಯು ಕೈ ಬಿಡುವುದಿಲ್ಲ; ಬೇಡಿದ್ದನ್ನು ಕೊಡುವಳು’ ಎನ್ನುವ ಪ್ರತೀತಿ ಇಲ್ಲಿ ಇದ್ದು, ಭಕ್ತರು ದೇವಿ ಮೇಲೆ ಅಪಾರ ಭಕ್ತಿ ಇಟ್ಟು ಜಾತ್ರೆಗೆ ತಮ್ಮ ಶಖ್ಯಾನುಸಾರ ಭಕ್ತಿ ಕಾಣಿಕೆ ನೀಡುವರು. ಜಾತ್ರೆಯ ಎರಡು ದಿನ ಮಧ್ಯರಾತ್ರಿಯಿಂದ ಬೆಳಗಿನ ಜಾವದವರೆಗೆ ತಮ್ಮ ಇಷ್ಟಿತಾರ್ಥ ಇಡೇರಿಕೆಗಾಗಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ದೀರ್ಘದಂಡ ನಮಸ್ಕಾರದ ಹರಕೆ ತೀರಿಸುವುದು ಇಲ್ಲಿಯ ವಿಶೇಷವಿದೆ. ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಗೋವಾ ರಾಜ್ಯಗಳಿಂದ ಭಕ್ತರು ಜಾತ್ರೆಗೆ ಬಂದು ಲಕ್ಷ್ಮೀದೇವಿ ದರ್ಶನ ಪಡೆಯುವರು.
ಜಾತ್ರೆಯ ವಿವರ:
ಸೋಮವಾರ (ಸೆ.1ರಂದು) ಬೆಳಿಗ್ಗೆ 5ಕ್ಕೆ ದೇವಿಗೆ ಅಭಿಷೇಕ, ವಿಶೇಷ ಪೂಜೆ ಜರುಗಿದ ನಂತರ ಉಡಿ ತುಂಬುವರು. ಬೆಳಿಗ್ಗೆ 10ರಿಂದ ಲಕ್ಷ್ಮೀದೇವಿ ದೇವಸ್ಥಾನದಿಂದ ವಿವಿಧ ವಾದ್ಯಗಳೊಂದಿಗೆ ರಥೋತ್ಸವವು ಕೆರೆಸಿದ್ಧೇಶ್ವರ ದೇವಸ್ಥಾನ (ಹುನಸಿ ಬಣ)ವರೆಗೆ ಸಾಗಿ ಮರಳಿ ಮೂಲ ಸ್ಥಳಕ್ಕೆ ಬರುವುದು. ದಾರಿಯುದ್ದಕ್ಕೂ ಭಂಡಾರ ಎರಚುವರು. ಬೆಳಿಗ್ಗೆಯಿಂದ ಅನ್ನಪ್ರಸಾದ ಇರುವುದು. ಬೆಳಿಗ್ಗೆ ಜಾತ್ರೆ ಕಾರ್ಯಕ್ರಮವನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಉದ್ಘಾಟಿಸುವರು.
ಸೆ.2ರಂದು ಬೆಳಿಗ್ಗೆ ದೇವಿಗೆ ವಿಶೇಷ ಪೂಜೆ ಜರುಗುವುದು. ಟ್ಯಾಕ್ಟರ್ ಜಗ್ಗುವ ಸ್ಪರ್ಧೆ, ತೆರೆಬಂಡಿ, ಎತ್ತು, ಕುದರೆ ಶರತ್ತು ಮತ್ತು ಸಾಮಾಜಿ ನಾಟಕಗಳ ಪ್ರದರ್ಶನ ಇರುವುದು.
ತುಕ್ಕಾನಟ್ಟಿಯ ಲಕ್ಷ್ಮೀದೇವಿಯು ಜಾಗೃತ ಸ್ಥಳವಾಗಿದ್ದು, ನನಗೆ ದೇವಿಯ ಸೇವೆ ಮಾಡುವ ಭಾಗ್ಯವನ್ನು ಗ್ರಾಮಸ್ಥರು ಒದಗಿಸಿಕೊಟ್ಟಿದ್ದಾರೆಬಾಲಚಂದ್ರ ಜಾರಕಿಹೊಳಿ, ಶಾಸಕರು, ಅರಭಾವಿ ಕ್ಷೇತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.