ADVERTISEMENT

ಬೆಳಗಾವಿ: ಅವೈಜ್ಞಾನಿಕ ರಸ್ತೆ ಉಬ್ಬುಗಳೇ ಜಾಸ್ತಿ!

ಸೂಚನಾಫಲಕಗಳಿಲ್ಲ, ಬಣ್ಣ ಬಳಿದಿಲ್ಲ; ಅಪಘಾತಕ್ಕೆ ಆಸ್ಪದ

ಎಂ.ಮಹೇಶ
Published 10 ಅಕ್ಟೋಬರ್ 2021, 19:30 IST
Last Updated 10 ಅಕ್ಟೋಬರ್ 2021, 19:30 IST
ಬೆಳಗಾವಿಯ ಉದ್ಯಮಬಾಗ್‌ನಲ್ಲಿರುವ ಈ ರಸ್ತೆಉಬ್ಬು ಕಡಿದಾಗಿದೆಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿಯ ಉದ್ಯಮಬಾಗ್‌ನಲ್ಲಿರುವ ಈ ರಸ್ತೆಉಬ್ಬು ಕಡಿದಾಗಿದೆಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ   

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಬಹುತೇಕ ರಸ್ತೆ ಉಬ್ಬುಗಳು ಅವೈಜ್ಞಾನಿಕವಾಗಿದ್ದು, ಜನರು ಹಲವು ತೊಂದರೆ ಅನುಭವಿಸುವಂತಾಗಿದೆ.

ಬಾಚಿ–ರಾಯಚೂರು ಹೆದ್ದಾರಿಯಲ್ಲಿ ನಗರದಿಂದ ಮಾರಿಹಾಳದವರೆಗೆ ಹೆಜ್ಜೆ ಹೆಜ್ಜೆಗೂ ರಸ್ತೆಉಬ್ಬುಗಳನ್ನು ಹಾಕಲಾಗಿದೆ. ಪ್ರಮುಖ ವೃತ್ತ, ತಿರುವು, ಶಾಲಾ–ಕಾಲೇಜುಗಳ ಎದುರು ನಿರ್ಮಿಸುವುದು ಕಂಡುಬರುತ್ತದೆ. ಆದರೆ, ಅವುಗಳಲ್ಲಿ ಕೆಲವು ಕಡೆಗಳಲ್ಲಿ ಮಾತ್ರವೇ ವೈಜ್ಞಾನಿಕವಾದ ಅಂಶಗಳನ್ನು ಪರಿಗಣಿಸಲಾಗಿದೆ.

‘ಮುಂದೆ ರಸ್ತೆಉಬ್ಬು’ ಇದೆ ಎಂದು ತಿಳಿಸುವ ಸೂಚನಾಫಲಕ ಅಳವಡಿಸಬೇಕು, ಬಿಳಿ ಬಣ್ಣದಿಂದ ಪಟ್ಟಿ ಬಳಿಯಬೇಕು ಹಾಗೂ ಅವಶ್ಯಬಿದ್ದರೆ ರೇಡಿಯಂ ಹಾಕಬೇಕು ಎನ್ನುವ ನಿಯಮವಿದೆ. ಆದರೆ, ಇದು ಬಹುತೇಕ ಕಡೆಗಳಲ್ಲಿ ಪಾಲನೆ ಆಗುತ್ತಿಲ್ಲ. ಉಬ್ಬುಗಳಿರುವುದು ಗೊತ್ತಾಗದೆ ದ್ವಿಚಕ್ರವಾಹನ ಸವಾರರು ವೇಗ ನಿಯಂತ್ರಿಸಲಾಗದೆ ಬಿದ್ದ ಅಥವಾ ಅಪಘಾತಕ್ಕೆ ಕಾರಣವಾದ ಘಟನೆಗಳು ಸಾಮಾನ್ಯ ಎನ್ನುವಂತಾಗಿವೆ.

ADVERTISEMENT

ಉಬ್ಬುಗಳು ಕೆಲವೆಡೆ ಪ್ರಮಾಣ ಸಣ್ಣದಿರುತ್ತವೆ; ಕೆಲವೆಡೆ ದೊಡ್ಡದಿರುತ್ತವೆ. ವಾಹನಗಳ ವೇಗ ನಿಯಂತ್ರಿಸುವುದಕ್ಕಾಗಿ ಅಥವಾ ಅಪಘಾತಗಳನ್ನು ತಪ್ಪಿಸುವುದಕ್ಕಾಗಿ ರಸ್ತೆಉಬ್ಬುಗಳನ್ನು ಹಾಕಲಾಗುತ್ತದೆ. ಆದರೆ, ಕೆಲವೆಡೆ ಅವುಗಳಿಂದ ಅಪಘಾತ ಉಂಟಾಗಿರುವ ಘಟನೆಗಳು ನಡೆದಿವೆ.

ಹನುಮಾನ ನಗರದಿಂದ ಬಾಕ್ಸೈಟ್‌ ರಸ್ತೆಗೆ ಬರುವ ದಾರಿಯಲ್ಲಿನ ಹಂಪ್ಸ್‌ ಅವೈಜ್ಞಾನಿಕವಾಗಿದ್ದು, ವಾಹನಗಳ ಚಕ್ರಗಳು ಅಲ್ಲಿಯೇ ಸಿಲುಕಿಬಿಡುತ್ತವೆ. ನಾಜೂಕಿನಿಂದ ವಾಹನ ಚಲಾಯಿಸಬೇಕಾದ ಸ್ಥಿತಿ ಅಲ್ಲಿದೆ. ಖಾನಾಪುರ ರಸ್ತೆಯಲ್ಲೂ ಇದೇ ರೀತಿಯ ಹಂಪ್ಸ್‌ಗಳಿವೆ. ಗ್ರಾಮೀಣ ಪ್ರದೇಶಗಳಲ್ಲಿನ ಸ್ಥಿತಿಯೂ ಇದಕ್ಕಿಂತ ಭಿನ್ನವಾಗೇನಿಲ್ಲ.

ಪಾಲನೆ ಕಂಡುಬರುತ್ತಿಲ್ಲ

ಭಾರತೀಯ ಎಂಜಿನಿಯರ್‌ಗಳ ಸಂಸ್ಥೆ ಬೆಳಗಾವಿ ಶಾಖೆಯ ಅಧ್ಯಕ್ಷರಾಗಿರುವ ರಮೇಶ ಜಂಗಲ ಸಮಸ್ಯೆಯನ್ನು ಹೀಗೆ ಗುರುತಿಸುತ್ತಾರೆ. ‘ನಗರದಲ್ಲಿ ಬಹುತೇಕ ರಸ್ತೆಉಬ್ಬುಗಳು ವೈಜ್ಞಾನಿಕವಾಗಿಲ್ಲ. 20 ಮಿ.ಮೀ. ಎತ್ತರ ಮತ್ತು 20 ಸೆಂ.ಮೀ. ಅಗಲ ಇರಬೇಕು ಎನ್ನುವುದು ನಿಯಮ. ಅದರ ಪಾಲನೆ ಕಂಡುಬರುತ್ತಿಲ್ಲ. ಅಪಘಾತಗಳನ್ನು ತಪ್ಪಿಸಬೇಕೆಂಬ ಉದ್ದೇಶದಿಂದ ಎತ್ತರ ಜಾಸ್ತಿ ಮಾಡಿರುತ್ತಾರೆ. ತಾಂತ್ರಿಕ ಅಂಶಗಳನ್ನು ಪರಿಗಣಿಸುತ್ತಿಲ್ಲ. ಸೂಚನಾ ಫಲಕ ಅಳವಡಿಸುವ ಕೆಲಸವೂ ನಡೆಯುತ್ತಿಲ್ಲ’ ಎಂದು ತಿಳಿಸಿದರು.

‘ರಸ್ತೆಉಬ್ಬುಗಳನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನವಿದೆ. ಆದರೆ, ಸಂಬಂಧಿಸಿದ ಸ್ಥಳೀಯ ಸಂಸ್ಥೆ ಅಥವಾ ಇಲಾಖೆಯವರು ಸ್ಥಳೀಯರ ಒತ್ತಾಯಕ್ಕೆ ಮಣಿದು ಉಬ್ಬುಗಳನ್ನು ನಿರ್ಮಿಸುವುದು ಕಂಡುಬರುತ್ತಿದೆ. ನಿಯಮದ ಪ್ರಕಾರ ನಿರ್ಮಿಸಿದರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಅವರು.

ವಾಹನಗಳ ವೇಗ ನಿಯಂತ್ರಿಸುವುದು, ಚಾಲಕರು ಅಥವಾ ಸವಾರರನ್ನು ಎಚ್ಚರಿಸಲು ರಸ್ತೆಉಬ್ಬು ಬೇಕು. ಆದರೆ, ಅವುಗಳು ಅಪಘಾತಕ್ಕೆ ಕಾರಣ ಆಗುವಂತೆ ಇರಬಾರದು ಎನ್ನುವುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

ಬಿದ್ದ ಸವಾರರು

ಚನ್ನಮ್ಮನ ಕಿತ್ತೂರು: ಪಟ್ಟಣ ಹಾಗೂ ಗ್ರಾಮದ ಬಹುತೇಕ ಓಣಿಗಳಲ್ಲೂ ನಿರ್ಮಾಣ ಮಾಡಿರುವ ಅವೈಜ್ಞಾನಿಕ ರಸ್ತೆ ತಡೆಗಳಿಂದಾಗಿ ಸವಾರರು ಯಮಯಾತನೆ ಅನುಭವಿಸುತ್ತಿದ್ದಾರೆ. ರಸ್ತೆ ತಡೆ ಇದೆ ಎಂಬ ಸೂಚನಾ ಫಲಕಗಳು ಇಲ್ಲದ್ದರಿಂದ ಬಿದ್ದು ಗಾಯ ಮಾಡಿಕೊಂಡಿರುವ ಪಟ್ಟಿಯೇ ಈ ತಾಲ್ಲೂಕಿನಲ್ಲಿ ಸಿಗುತ್ತದೆ.

ಶಾಲೆಗಳು, ರಸ್ತೆ ತಿರುವು ಇದ್ದ ಕಡೆ ಇರಬೇಕಾಗಿದ್ದ ಉಬ್ಬುಗಳನ್ನು ಕೆಲವರ ಮನೆಯ ಮುಂದೆ ಪ್ರತಿಷ್ಠೆಗಾಗಿ ಎನ್ನುವಂತೆ ಮಾಡಿಸಲಾಗಿದೆ. ಈ ಹಿಂದೆ, ಸಿಮೆಂಟ್ ರಸ್ತೆಗೆ ಹಾಕಲಾಗಿದ್ದ ಅವೈಜ್ಞಾನಿಕ ಹಂಪ್‌ನಲ್ಲಿ ದ್ವಿಚಕ್ರವಾಹನದಿಂದ ದಂಪತಿ ಬಿದ್ದು ತೀವ್ರ ಗಾಯಗೊಂಡಿದ್ದರು. ಅವರೆಲ್ಲಿ ನಮ್ಮ ಮೇಲೆ ಪೊಲೀಸರಿಗೆ ದೂರು ನೀಡುತ್ತಾರೆಯೋ ಎಂಬ ಭಯದಿಂದ ತಾಲ್ಲೂಕಿನ ಹಳ್ಳಿಯೊಂದರಲ್ಲಿ ದ್ವಿಚಕ್ರವಾಹನ ಸಾಗುವಷ್ಟು ಜಾಗವನ್ನು ಮಾಡಿಕೊಡಲಾಗಿತ್ತು. ಆದರೂ ಕೆಲವರು ಮನೆ ಮುಂದೆ ತಡೆ ನಿರ್ಮಿಸಿಕೊಳ್ಳುವ ಖಯಾಲಿ ಬಿಟ್ಟಿಲ್ಲ. ಸಮಸ್ಯೆ ಬಗ್ಗೆ ಯಾರ ಮುಂದೆ ದೂರುವುದು ವಾಹನ ಸವಾರರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

10 ಕಿ.ಮೀ.ನಲ್ಲಿ 50!

ಖಾನಾಪುರ: ಪಟ್ಟಣದಿಂದ ನಂದಗಡ ಗ್ರಾಮ 10 ಕಿ.ಮೀ. ಅಂತರದಲ್ಲಿದೆ. ಬೆಳಗಾವಿ ತಾಳಗುಪ್ಪ ಹೆದ್ದಾರಿ ಮೇಲಿರುವ ಎರಡೂ ಊರುಗಳ ನಡುವೆ ಬರೋಬ್ಬರಿ 50 ವೇಗ ನಿಯಂತ್ರಕಗಳಿವೆ. ಇತ್ತೀಚಿನ ದಿನಗಳಲ್ಲಿ ಈ ರಸ್ತೆಯೂ ಬಹುತೇಕ ಹಾಳಾಗಿದೆ. ರಸ್ತೆ ಮಧ್ಯದಲ್ಲಿ ಅವೈಜ್ಞಾನಿಕ ವಿಧಾನಗಳನ್ನು ಅನುಸರಿಸಿ ಈ ವೇಗ ನಿಯಂತ್ರಕಗಳನ್ನು ಅಳವಡಿಸಲಾಗಿದೆ. ಈ ವೇಗ ನಿಯಂತ್ರಕಗಳ ಕಾರಣದಿಂದಲೇ ಬಹಳಷ್ಟು ಅಪಘಾತಗಳು ಸಂಭವಿಸಿವೆ ಎಂದು ಮಾರ್ಗದಲ್ಲಿ ನಿತ್ಯ ಸಂಚರಿಸುವ ಸವಾರರು ದೂರುತ್ತಾರೆ.

ವೈಜ್ಞಾನಿಕವಾಗಿರುವವು ಕಡಿಮೆ

ಸವದತ್ತಿ: ಪಟ್ಟಣದಲ್ಲಿ ವೈಜ್ಞಾನಿಕವಾಗಿರುವ ರಸ್ತೆ ಉಬ್ಬುಗಳಿಗಿಂತ ಅವೈಜ್ಞಾನಿಕವಾದವೇ ಹೆಚ್ಚಿವೆ. ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಿದ್ದು ಬೆರಳೆಣಿಕೆಯಷ್ಟು ಮಾತ್ರ. ಕೆಲವು ರಸ್ತೆಗಳಲ್ಲಿ ಸ್ಥಳೀಯರೇ ತಮ್ಮ ಮನೆಯ ಮುಂದೆ ಅಥವಾ ಅಲ್ಲಲ್ಲಿ ಉಬ್ಬುಗಳನ್ನು ಹಾಕಿಕೊಂಡಿದ್ದಾರೆ ಎನ್ನುವ ದೂರು ಅಧಿಕಾರಿಗಳದು.

ಸವದತ್ತಿ ದ್ವಾರ ಬಾಗಿಲಿನ ಬಳಿಯ ರಸ್ತೆಉಬ್ಬಿನಿಂದ ಸಾಕಷ್ಟು ಜನ ಸಮಸ್ಯೆಗೀಡಾಗಿದ್ದಾರೆ. ಬಹಳ ಎತ್ತರವಾಗಿ ಅವುಗಳನ್ನು ನಿರ್ಮಿಸಲಾಗಿದೆ. ಸರಿಪಡಿಸಲು ಕ್ರಮ ವಹಿಸಿಲ್ಲ. ಇದರಿಂದ ಬೆನ್ನು ನೋವು ಮೊದಲಾದ ಸಮಸ್ಯೆ ಎದುರಾಗುತ್ತಿದೆ ಎನ್ನುತ್ತಾರೆ ವಾಹನ ಸವಾರರು.

ಮನೆಯ‌ವರೇ ಹಾಕಿಸಿದ್ದಾರೆ

ರಾಯಬಾಗ: ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮತ್ತು ಮನೆಗಳ ಮುಂದೆ ಅವೈಜ್ಞಾನಿಕವಾಗಿ ರಸ್ತೆ ಉಬ್ಬುಗಳನ್ನು ನಿರ್ಮಾಣ ಮಾಡಲಾಗಿದೆ. ಕೆಲವೆಡೆ ಮನೆ ಮುಂದೆ ಮಾಲಿಕರೆ ನಿರ್ಮಿಸಿಕೊಂಡಿದ್ದಾರೆ. ಇದರಿಂದಾಗಿ ಶಾಲಾ–ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಮತ್ತು ವಾಹನ ಸವಾರರಿಗೆ ತೊಂದರೆ ಆಗುತ್ತಿದೆ.

ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ನಿರ್ಲಕ್ಷ ಎದ್ದು ಕಾಣುತ್ತಿದೆ. ನಿಯಮದ ಪ್ರಕಾರ ರಸ್ತೆ ಉಬ್ಬುಗಳನ್ನು ನಿರ್ಮಿಸುತ್ತಿಲ್ಲ. ಇದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

‘ಅವೈಜ್ಞಾನಿಕ ರಸ್ತೆಉಬ್ಬುಗಳಿಂದ ವಾಹನ ಸವಾರರಲ್ಲಿ ಬೆನ್ನು, ಕುತ್ತಿಗೆ ಮತ್ತು ಸೊಂಟದ ನೋವು ಕಾಣಿಸಿಕೊಳ್ಳುತ್ತಿದೆ’ ಎಂದು ಡಾ.ಆರ್.ಎಚ್. ರಂಗಣ್ಣವರ ಪ್ರತಿಕ್ರಿಯಿಸಿದರು.

ಅನತ್ಯವಾದವನ್ನು ತೆರವುಗೊಳಿಸಲಿ

ಯಮಕನಮರಡಿ: ಗ್ರಾಮದ ಝುಟ್ಟಿ ಕಾಲೊನಿ, ತುಬಚಿ ಕಾಲೊನಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಕಾಲೊನಿ ಮತ್ತು ಮುಖ್ಯ ರಸ್ತೆಯ ನೂಲಿ ಬಾವಿ, ಬ್ಯಾಂಕ್ ಆಫ್‌ ಬರೋಡಾ ಕಚೇರಿ ಹತ್ತಿರ ರಸ್ತೆ ಉಬ್ಬುಗಳು ಹೆಚ್ಚಾಗಿವೆ. ಅವೈಜ್ಞಾನಿಕವಾಗಿ ಅವುಗಳನ್ನು ನಿರ್ಮಿಸಲಾಗಿದೆ. ಇದರಿಂದ ದ್ವಿಚಕ್ರವಾಹನಗಳ ಸವಾರರು ಹಾಗೂ ವೃದ್ಧರು ಬಿದ್ದ ಉದಾಹರಣೆಗಳಿವೆ. ಅನಗತ್ಯವಾಗಿ ಹಾಕಿರುವ ರಸ್ತೆ ಉಬ್ಬುಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸುತ್ತಾರೆ ಸ್ಥಳೀಯರು.

ಪ್ರತಿಕ್ರಿಯೆಗಳು

ವಾಹನಗಳ ಚಾಲಕರು, ಸವಾರರು ಸೇರಿದಂತೆ ಎಲ್ಲರೂ ಸಂಚಾರ ನಿಯಮ ಪಾಲಿಸಿದರೆ, ಸ್ವಯಂ ನಿಯಂತ್ರಣ ವಹಿಸಿದರೆ ಅಪಘಾತಗಳನ್ನು ತಪ್ಪಿಸಬಹುದಾಗಿದೆ. ಅತಿಯಾದ ವೇಗ ಒಳ್ಳೆಯದಲ್ಲ ಎನ್ನುವುದನ್ನು ಅರಿತರೆ ರಸ್ತೆಉಬ್ಬುಗಳ ಅಗತ್ಯವಿರುವುದಿಲ್ಲ.

–ರಮೇಶ ಜಂಗಲ, ಅಧ್ಯಕ್ಷ, ಬೆಳಗಾವಿ ಶಾಖೆ, ಭಾರತೀಯ ಎಂಜಿನಿಯರ್‌ಗಳ ಸಂಸ್ಥೆ

ರಾಯಬಾಗ ಪಟ್ಟಣದಲ್ಲಿರುವ ಅವೈಜ್ಞಾನಿಕ ರಸ್ತೆಉಬ್ಬುಗಳಿಂದ ವಾಹನ ಸವಾರರು ಕುತ್ತಿಗೆ, ಬೆನ್ನು ಹಾಗೂ ಸೊಂಟ ನೋವು ಅನುಭವಿಸುವಂತಾಗಿದೆ. ವೈಜ್ಞಾನಿಕವಾಗಿ ನಿರ್ಮಿಸಲು ಕ್ರಮ ವಹಿಸಬೇಕು.

–ರಮೇಶಕುಮಾರ ಘಂಟಿ, ನಾಗರಿಕ, ರಾಯಬಾಗ

(ಪ್ರಜಾವಾಣಿ ತಂಡ: ಪ್ರದೀಪ ಮೇಲಿನಮನಿ, ಪ್ರಸನ್ನ ಕುಲಕರ್ಣಿ, ಬಸವರಾಜ ಶಿರಸಂಗಿ, ಆನಂದ ಮನ್ನಿಕೇರಿ, ಶಿವಾನಂದ ಪಾಟೀಲ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.