ADVERTISEMENT

ಬೆಳಗಾವಿ: ವಂದೇ ಭಾರತ್‌ ರೈಲಿಗೆ ಅದ್ದೂರಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 16:10 IST
Last Updated 10 ಆಗಸ್ಟ್ 2025, 16:10 IST
   

ಬೆಳಗಾವಿ: ಬೆಂಗಳೂರು–ಬೆಳಗಾವಿ ಮಧ್ಯೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ಅದ್ದೂರಿ ಸ್ವಾಗತ ಕೋರಲಾಯಿತು.

ಭಾನುವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಈ ರೈಲಿಗೆ ಹಸಿರು ನಿಶಾನೆ ತೋರಿಸಿದರು. ಅಲ್ಲಿಂದ ಹೊರಟ ರೈಲು ರಾತ್ರಿ 8.40ಕ್ಕೆ ಬೆಳಗಾವಿ ನಿಲ್ದಾಣಕ್ಕೆ ಬರುತ್ತಿದ್ದಂತೆ, ಜನರ ಹರ್ಷೋದ್ಘಾರ ಮುಗಿಲು ಮುಟ್ಟಿತು. ಜನರು ಚಪ್ಪಾಳೆ ತಟ್ಟಿ, ಸಿಳ್ಳೆ ಹೊಡೆದು ಸಂಭ್ರಮಿಸಿದರು. ‘ಭಾರತ್ ಮಾತಾ ಕೀ ಜೈ’, ‘ನರೇಂದ್ರ ಮೋದಿಗೆ ಜೈ’ ಎಂದು ಜೈಕಾರ ಕೂಗಿದರು.

ರೈಲಿನೊಳಗೆ ಹೋಗಿ, ಅದರ ಅಂದ–ಚೆಂದ ನೋಡಿ ಬೆರಗಾದರು. ಸರಿದಾಡುವ ಕುರ್ಚಿಗಳು, ಆಕರ್ಷಕ ವಿದ್ಯುತ್‌ ವ್ಯವಸ್ಥೆ, ಹಿತಕರವಾದ ಹವಾನಿಯಂತ್ರಿತ ವ್ಯವಸ್ಥೆ ಕಂಡು ಇದು ರೈಲೋ ಅಥವಾ ವಿಮಾನವೋ ಎಂದು ಅಚ್ಚರಿಪಟ್ಟರು.

ADVERTISEMENT

ಬಿಜೆಪಿಯ ಕೆಲ ಕಾರ್ಯಕರ್ತರು ಮೊದಲೇ ಹುಬ್ಬಳ್ಳಿ–ಧಾರವಾಡಕ್ಕೆ ಹೋಗಿ, ವಂದೇ ಭಾರತ್‌ ರೈಲಿನಲ್ಲಿ ಬೆಳಗಾವಿ ನಿಲ್ದಾಣಕ್ಕೆ ಬಂದಿಳಿದು ಸಂತಸಪಟ್ಟರು. ಬೆಳಗಾವಿ ನಗರ ಮಾತ್ರವಲ್ಲದೆ; ಜಿಲ್ಲೆಯ ವಿವಿಧೆಡೆಯಿಂದ ಬಿಜೆಪಿ ಕಾರ್ಯಕರ್ತರ ದಂಡು ಬೆಳಗಾವಿಗೆ ಬಂದಿತ್ತು.

ರಜೆ ಮೂಡ್‌ನಲ್ಲಿದ್ದ ವಿದ್ಯಾರ್ಥಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ನಿಲ್ದಾಣಕ್ಕೆ ಬಂದಿದ್ದರು. ರೈಲಿನ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡರು.

ಬೆಳಗಾವಿಗರಿಗೆ ಜಯ ಸಿಕ್ಕಿದೆ: ಇದಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಜಗದೀಶ ಶೆಟ್ಟರ್, ‘ಜನಪ್ರಿಯವಾದ ವಂದೇ ಭಾರತ್ ರೈಲಿನಲ್ಲಿ ಓಡಾಡಲು ಇಂದು ಅನೇಕ ಜನರು ಬಯಸುತ್ತಿದ್ದಾರೆ. ಬೆಂಗಳೂರು–ಧಾರವಾಡ ವಂದೇ ಭಾರತ್ ರೈಲಿನ ಸೇವೆ ಬೆಳಗಾವಿಯವರೆಗೆ ವಿಸ್ತರಿಸುವಂತೆ ಕೋರಿದ್ದೆವು. ತಾಂತ್ರಿಕ ಕಾರಣಗಳಿಂದ ಬೇಡಿಕೆ ಈಡೇರಿರಲಿಲ್ಲ. ಈಗ ಸ್ವತಃ ಪ್ರಧಾನಿ ನರೇಂದ್ರ ಮೋದಿ ಆಸಕ್ತಿ ವಹಿಸಿದ್ದರಿಂದ ನಮಗೆ ಪ್ರತ್ಯೇಕ ರೈಲು ಸಿಕ್ಕಿದೆ. ಬೆಳಗಾವಿಗರ ಹೋರಾಟಕ್ಕೆ ಜಯ ಸಿಕ್ಕಿದೆ' ಎಂದರು.

‘ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲು ಬೆಳಗಾವಿಗೆ ಯಾವಾಗ ತರುತ್ತೀರಿ ಎಂದು ಅನೇಕರು ಟೀಕಿಸಿದ್ದರು. ಇದನ್ನು ಬೆಳಗಾವಿಗೆ ತರುವ ಜವಾಬ್ದಾರಿ ನನ್ನದು ಎಂದು ತಿಳಿಸಿದ್ದೆ. ಈಗ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ. ಇದಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳೆಲ್ಲ ಸಹಕಾರ ಕೊಟ್ಟಿದ್ದಾರೆ’ ಎಂದು ಹೇಳಿದರು.

‘ವೇಳಾಪಟ್ಟಿ ಬಗ್ಗೆ ಕೆಲವು ಆಕ್ಷೇಪಗಳಿವೆ. ಮೊದಲು ಸೇವೆ ಆರಂಭವಾಗಲಿ. ನಂತರ ಸಮಯ ಬದಲಾವಣೆ ಬಗ್ಗೆ ಆಲೋಚಿಸೋಣ. ಬೆಳಗಾವಿ ವಿಮಾನ ನಿಲ್ದಾಣಕ್ಕೆ ರಾಣಿ ಚನ್ನಮ್ಮನ ಹೆಸರು ನಾಮಕರಣ ಮಾಡಬೇಕೆಂಬ ಬೇಡಿಕೆ ಇದೆ. ಶೀಘ್ರ ಅದು ಈಡೇರಲಿದೆ’ ಎಂದು ಭರವಸೆ ನೀಡಿದರು.

‘ಭಾರತಕ್ಕೆ ಅಮೆರಿಕದವರು ಏನೂ ಮಾಡಲು ಸಾಧ್ಯವಿಲ್ಲ. ಇಲ್ಲಿಂದ ಅನೇಕ ಉತ್ಪನ್ನಗಳು ಅಮೆರಿಕಕ್ಕೆ ರಫ್ತಾಗುತ್ತವೆ. ಅದು ಸ್ಥಗಿತವಾದರೆ ಅಮೆರಿಕ ನಡೆಯದು. ಡೋನಾಲ್ಡ್ ಟ್ರಂಪ್ ಅವರೇ ಪ್ರಧಾನಿ ನರೇಂದ್ರ ಮೋದಿ ಕಡೆ ಬಂದು ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಮುಂದೊಮ್ಮೆ ಅಮೆರಿಕದವರು ಮೋದಿ ಬಳಿ ಬರುವ ಕಾಲ ದೂರವಿಲ್ಲ’ ಎಂದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ‘ಈ ರೈಲು ಸೇವೆ ಆರಂಭಕ್ಕೆ ಹಲವು ಜನಪ್ರತಿನಿಧಿಗಳು ಪ್ರಯತ್ನಿಸಿದ್ದಾರೆ. ಅಧಿಕಾರಿಗಳೂ ಶ್ರಮಿಸಿದ್ದಾರೆ. ಸುರಕ್ಷತೆ ದೃಷ್ಟಿಯಿಂದ ಬೆಳಗಾವಿಯ ಹೆಚ್ಚಿನ ಜನರು ಇದೇ ರೈಲಿನಲ್ಲಿ ಪ್ರಯಾಣಿಸಬೇಕು. ಖಾಸಗಿ ವಾಹನಗಳಲ್ಲಿ ತೆರಳುವವರು ಇದರಲ್ಲೇ ಸಂಚರಿಸಬೇಕು’ ಎಂದರು ಕೋರಿದರು.

ಮೇಯರ್ ಮಂಗೇಶ ಪವಾರ, ಉಪಮೇಯರ್ ವಾಣಿ‌ ಜೋಶಿ, ಶಾಸಕ ವಿಠ್ಠಲ ಹಲಗೇಕರ,

ಸ್ವಾತಂತ್ರ್ಯ ಹೋರಾಟಗಾರರಾದ ವಿಠ್ಠಲರಾವ್ ಯಾಳಗಿ, ರಾಜೇಂದ್ರ ಕಲಘಟಗಿ, ಪರಶುರಾಮ ಭಾವು ನಂದಿಹಳ್ಳಿ, ಮಾಜಿ ಸಂಸದೆ ಮಂಗಲಾ ಅಂಗಡಿ, ಮಾಜಿ ಶಾಸಕರಾದ ಮಹಾಂತೇಶ ದೊಡ್ಡಗೌಡರ, ಸಂಜಯ ಪಾಟೀಲ, ಮಹಾನಗರ ಪಾಲಿಕೆ ಸದಸ್ಯ ಹನುಮಂತ ಕೊಂಗಾಲಿ, ಬಿಜೆಪಿ ಮುಖಂಡರಾದ ಸುಭಾಷ ಪಾಟೀಲ, ಗೀತಾ ಸುತಾರ, ಎಫ್.ಎಸ್.ಸಿದ್ದನಗೌಡರ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.