ADVERTISEMENT

ಬೆಳಗಾವಿ: ಬಂದ್‌ಗೆ ಹಲವು ಸಂಘಟನೆಗಳ ಬೆಂಬಲ

ಸರ್ಕಾರದ ರೈತ ವಿರೋಧಿ ನೀತಿಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 15:29 IST
Last Updated 27 ಸೆಪ್ಟೆಂಬರ್ 2020, 15:29 IST
ಬೆಳಗಾವಿಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಭಾನುವಾರ ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಕರ್ನಾಟಕ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರುಪ್ರಜಾವಾಣಿ ಚಿತ್ರ
ಬೆಳಗಾವಿಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಭಾನುವಾರ ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಕರ್ನಾಟಕ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರುಪ್ರಜಾವಾಣಿ ಚಿತ್ರ   

ಬೆಳಗಾವಿ: ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರು ಹಾಗೂ ಕಾರ್ಮಿಕರ ವಿರೋಧಿ ನೀತಿ ಅನುಸರಿಸುತ್ತಿವೆ’ ಎಂದು ಆರೋಪಿಸಿ ರೈತ, ದಲಿತ ಮತ್ತು ಕಾರ್ಮಿಕರ ಐಕ್ಯ ಹೋರಾಟ ಸಮಿತಿ ಕರೆ ನೀಡಿರುವ ಸೆ. 28ರ ರಾಜ್ಯ ಬಂದ್‌ಗೆ ಇಲ್ಲಿನ ಕನ್ನಡ, ದಲಿತ ಮತ್ತು ರೈತ ಪರ ಸಂಘಟನೆಗಳು ಬೆಂಬಲ ಸೂಚಿಸಿವೆ.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಪದಾಧಿಕಾರಿಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿ ಭಾಗವಹಿಸುವುದಾಗಿ ತಿಳಿಸಿದರು.

ಮೆರವಣಿಗೆ:

ADVERTISEMENT

ಕರವೇ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಮರಣ ಶಾಸನ ಬರೆಯಲು ಹೊರಟಿವೆ. ಇದಕ್ಕೆ ಅವಕಾಶ ಕೊಡಬಾರದು. ರೈತ ವಿರೋಧಿ ನೀತಿಯನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಸೋಮವಾರ ರಾಣಿ ಚನ್ನಮ್ಮ ವೃತ್ತದಿಂದ ಸುವರ್ಣ ವಿಧಾನಸೌಧದವರೆಗೆ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸುತ್ತೇವೆ’ ಎಂದು ಹೇಳಿದರು.

‘ಅನ್ನದಾತ ಸಂಕಷ್ಟದಲ್ಲಿದ್ದಾನೆ. ಹೀಗಿರುವಾಗ ಕೃಷಿ ವಲಯಕ್ಕೆ ಮಾರಕವಾದ ಕಾನೂನುಗಳನ್ನು ಜಾರಿಗೆ ತರಲು ಹೊರಟಿರುವುದು ಸರಿಯಲ್ಲ. ಕೃಷಿಕರ ಬೆಂಬಲಕ್ಕೆ ಎಲ್ಲರೂ ನಿಲ್ಲಬೇಕು. ಹೋಟೆಲ್‌ ಮಾಲೀಕರು, ಅಂಗಡಿಕಾರರು ವಹಿವಾಟು ಬಂದ್‌ ಮಾಡಿ ಬೆಂಬಲ ಸೂಚಿಸಬೇಕು. ಆಟೊ ರಿಕ್ಷಾ ಚಾಲಕರು ಕೂಡ ಸಹಕರಿಸಬೇಕು’ ಎಂದು ಕೋರಿದರು.

ಎಲ್ಲರೂ ಬೆಂಬಲಿಸಬೇಕು:

‘ಪ್ರಜಾಪ್ರಭುತ್ವ ಹಾಗೂ ಸಂವಿಧಾನ ವಿರೋಧಿ ಸುಗ್ರೀವಾಜ್ಞೆ– ಮಸೂದೆಗಳನ್ನು ಕೂಡಲೇ ಹಿಂಪಡೆಯಬೇಕು. ರೈತರ ಮೇಲೆ ಬಲವಂತವಾಗಿ ಹೇರಬಾರದು. ರೈತ ವಿರೋಧಿ ನೀತಿ ಖಂಡಿಸಿ ನಡೆಯುತ್ತಿರುವ ಹೋರಾಟಕ್ಕೆ ಎಲ್ಲ ವರ್ಗದವರೂ ಬೆಂಬಲ ನೀಡಬೇಕು. ಶಾಂತಿಯುತ ಪ್ರತಿಭಟನೆಯಲ್ಲಿ ಭಾಗಿಯಾಗಬೇಕು’ ಎಂದು ರಾಜ್ಯ ರೈತ ಸಂಘದ ಸಂಚಾಲಕ ಚೂನಪ್ಪ ಪೂಜಾರಿ ಮನವಿ ಮಾಡಿದರು.

ರೈತ ಸಂಘ ಸಂಚಾಲಕಿ ಜಯಶ್ರೀ ಗುರಣ್ಣವರ, ಜಿಲ್ಲಾ ಘಟಕದ ಅಧ್ಯಕ್ಷ ರಾಘವೇಂದ್ರ ನಾಯ್ಕ, ಮುಖಂಡರಾದ ಪ್ರಕಾಶ ನಾಯಕ, ಭಗನ ಮಲೆ, ಕರವೇ ವಿವಿಧ ಬಣಗಳ ಮುಖಂಡರಾದ ಮಹಾದೇವ ತಳವಾರ, ಮಹಾಂತೇಶ ರಣಗಟ್ಟಿಮಠ, ಅಭಿಲಾಷ ಇದ್ದರು.

ನಂತರ ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

‘ಬಂದ್‌ಗೆ ನಮ್ಮ ಬೆಂಬಲವಿದೆ’ ಎಂದು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಪಾಟೀಲ ತಿಳಿಸಿದ್ದಾರೆ.

***

ಮೆರವಣಿಗೆ ವೇಳೆ ಬಸ್ ಸಂಚಾರ ಸ್ಥಗಿತ

‘ಸೆ. 28ರಂದು ಬೆಳಿಗ್ಗೆ ಎಂದಿನಂತೆ ಬಸ್‌ಗಳು ಸಂಚರಿಸಲಿವೆ. ಪ್ರತಿಭಟನಾ ಮೆರವಣಿಗೆ ಸಂದರ್ಭದಲ್ಲಿ ಬಸ್‌ಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗುವುದು’ ಎಂದು ಎನ್‌ಡಬ್ಲ್ಯುಕೆಎಸ್ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಆರ್. ಮುಂಜಿ ‘ಪ್ರಜಾವಾಣಿ’ಗೆ ತಿಳಿಸಿದರು.

***

‘ತೊಂದರೆ ನೀಡಿದರೆ ಕಾನೂನು ಕ್ರಮ’

‘ಬಂದ್ ಸಂದರ್ಭದಲ್ಲಿ ಸಾರ್ವಜನಿಕ ಅಸ್ತಿಪಾಸ್ತಿಗೆ ಹಾನಿ ಮಾಡುವಂತಿಲ್ಲ. ವಾಹನಗಳ ಸಂಚಾರ ಬಂದ್ ಮಾಡುವಂತಿಲ್ಲ. ಇದನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕೋವಿಡ್–19 ಮಾರ್ಗಸೂಚಿಗಳನ್ನು ಉಲ್ಲಂಘಿಸದಂತೆ ಶಾತಿಯುತವಾಗಿ ಮನವಿ ಸಲ್ಲಿಸುವುದಕ್ಕೆ ಅವಕಾಶವಿದೆ’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

‘ಜಿಲ್ಲೆಯಾದ್ಯಂತ 4ಸಾವಿರಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ಇವೆ. ಪ್ರಮುಖ ಸ್ಥಳಗಳಲ್ಲಿ ಡ್ರೋನ್‌ ಬಳಸಲಾಗುವುದು. ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಲು ಮುಂದಾಗಬಾರದು. ಕಾನೂನು ಕೈಗೆತ್ತಿಕೊಂಡರೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ’ ಎಂದು ವಿಡಿಯೊ ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.