ಚಿಕ್ಕೋಡಿ: ಪಟ್ಟಣದ ಸಿಟಿಇ ಸಂಸ್ಥೆಯ ಶ್ರೀಮತಿ ಎ.ಎ. ಪಾಟೀಲ ಮಹಿಳಾ ಮಹಾವಿದ್ಯಾಲಯದ ಬಿ.ಎ ಹಾಗೂ ಬಿ.ಕಾಂ ವಿದ್ಯಾರ್ಥಿನಿಯರು ಬುಧವಾರ ‘ಹಳ್ಳಿಹಬ್ಬ’ದಲ್ಲಿ ಮಿಂದೆದ್ದರು. ಪ್ರತಿಯೊಬ್ಬರು ಬಣ್ಣಬಣ್ಣದ ಇಳಕಲ್ ಸೀರೆ ಉಟ್ಟು ಬಿನ್ನಾನದಿಂದ ಖುಷಿಪಟ್ಟರು.
ಸಂಕ್ರಾಂತಿ ಹಬ್ಬ, ಸುಗ್ಗಿ ಹಬ್ಬ ಸೇರಿದಂತೆ ವಿವಿಧ ಹಬ್ಬಗಳ ಆಚರಣೆಯ ಹಿನ್ನೆಲೆಯಲ್ಲಿ ಧಾನ್ಯಗಳ ರಾಶಿ ಮಾಡುವುದು, ಬೀಸುವುದು, ಕುಟ್ಟುವುದು ಮುಂತಾದ ಕೆಲಸಗಳ ಅಣಕು ಪ್ರದರ್ಶಿಸಿ ಹಳ್ಳಿಯ ಬದುಕು ಹೇಗೆ ಇರುತ್ತದೆ ಎಂಬುವದನ್ನು ತೋರಿಸಿದರು.
ಅಕ್ಕಿ, ಗೋಧಿ, ಮೆಕ್ಕೆಜೋಳ ಸೇರಿದಂತೆ ವಿವಿಧ ಧಾನ್ಯದ ರಾಶಿಗೆ ಭಕ್ತಿ ಭಾವದಿಂದ ವಿದ್ಯಾರ್ಥಿನಿಯರು ಪೂಜೆ ಸಲ್ಲಿಸಿ, ಆರತಿ ಬೆಳಗಿ ನಮಿಸಿದರು. ಸುಗ್ಗಿಯ ಸೊಬಗು ಸೃಷ್ಟಿಯಾಗಿದ್ದ ಕಾಲೇಜು ಆವರಣದಲ್ಲಿ ನೂರಾರು ಜನ ಸೇರಿ ಸಂಭ್ರಮಿಸಿದರು.
ವಿದ್ಯಾರ್ಥಿನಿಯರು, ಉಪನ್ಯಾಸಕಿಯರು ಸೀರೆ ಉಟ್ಟರೆ, ಉಪನ್ಯಾಸಕರು ಧೋತರ, ನೆಹರೂ ಶರ್ಟ್ ಧರಿಸಿದ್ದರು. ಉಪನ್ಯಾಸಕಿಯರಿಗೆ ವಿದ್ಯಾರ್ಥಿನಿಯರು ಹಸಿರು ಬಳೆ, ಅರಿಸಿನ– ಕುಂಕುಮ, ಮಲ್ಲಿಗೆ ಹೂ ನೀಡಿ ಉಡಿ ತುಂಬಿದರು.
ಪ್ರಾಚಾರ್ಯ ಪಿ.ಬಿ. ಪಾಟೀಲ, ಉಪನ್ಯಾಸಕರಾದ ವಿ.ಟಿ. ಬಿಕ್ಕನ್ನವರ, ಎಚ್.ಎ. ಬೋಗಲೆ, ಎಸ್.ಸಿ. ಜಕಾತೆ, ಎಲ್.ಎಸ್. ಪಡತಾರೆ, ವಿ.ವಿ. ನಾಯಕ, ಶ್ರುತಿ ಪೂಜಾರಿ, ರೋಹಿಣಿ ಕಂಬಾರ, ರೋಹಿಣಿ ಚೊಂಚ, ಸಾರಿಕಾರ ಕೋಳಿಕರ, ತೇಜಶ್ವಿನಿ ರೋಗಿ, ಪ್ರಿಯಾಂಕಾ ಕುರಣೆ, ಎನ್.ಎಸ್. ಬಾಗವಾನ ಕೂಡ ಸಂಭ್ರಮದಲ್ಲಿ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.