ADVERTISEMENT

ಕಂಗಾಲಾಗಿದ್ದವರಿಗೆ ನೆರವಾದ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 23 ಮೇ 2021, 9:39 IST
Last Updated 23 ಮೇ 2021, 9:39 IST
ಮಹಾರಾಷ್ಟ್ರಕ್ಕೆ ಗುಳೆ ಹೋಗಿದ್ದ ವಿಜಯ‍ಪುರ ಜಿಲ್ಲೆಯ ಕೂಲಿ ಕಾರ್ಮಿಕರು ಸ್ವಗ್ರಾಮ ತಲುಪಲು ಟ್ರ್ಯಾಕ್ಟರ್‌ನಲ್ಲಿ ತೆರಳಿದರು
ಮಹಾರಾಷ್ಟ್ರಕ್ಕೆ ಗುಳೆ ಹೋಗಿದ್ದ ವಿಜಯ‍ಪುರ ಜಿಲ್ಲೆಯ ಕೂಲಿ ಕಾರ್ಮಿಕರು ಸ್ವಗ್ರಾಮ ತಲುಪಲು ಟ್ರ್ಯಾಕ್ಟರ್‌ನಲ್ಲಿ ತೆರಳಿದರು   

ತೆಲಸಂಗ: ಹೊಟ್ಟೆ ಪಾಡಿಗಾಗಿ ಮಹಾರಾಷ್ಟ್ರಕ್ಕೆ ವಲಸೆ ಹೋಗಿದ್ದ ವಿಜಯಪುರ ಜಿಲ್ಲೆಯ ಕೆಲವರು, ಕಂದಮ್ಮಗಳನ್ನು ಕರೆದುಕೊಂಡು ಉರಿ ಬಿಸಿಲಲ್ಲಿ ಸ್ವಗ್ರಾಮ ತಲುಪಲು ಪರ್ಯಾಯ ದಾರಿಗಳನ್ನು ಹುಡುಕುತ್ತಾ ಟ್ರ್ಯಾಕ್ಟರ್‌ನಲ್ಲಿ ಅಲೆದಾಡಿದ ಘಟನೆ ಇಲ್ಲಿ ಭಾನುವಾರ ನಡೆಯಿತು.

ಲಾಕ್‌ಡೌನ್ ಕಾರಣದಿಂದ ಮಹಾರಾಷ್ಟ್ರದಲ್ಲಿ ಕೂಲಿ ಕೆಲಸ ಬಂದ್ ಆಗಿದ್ದರಿಂದ ಊರಿನತ್ತ ಅವರು ಹೊರಟಿದ್ದರು. ಕಟ್ಟುನಿಟ್ಟಿನ ನಿಯಮದಿಂದಾಗಿ ಅವರಿಗೆ ಚೆಕ್‍ಪೋಸ್ಟ್‌ನಲ್ಲಿ ಪೊಲೀಸರು ಅವಕಾಶ ಕೊಟ್ಟಿರಲಿಲ್ಲ. ಪರಿಣಾಮ ಅವರು ಅನ್ನ, ನೀರಿಲ್ಲದೆ ಅಲದಾಡಿ ಕಣ್ಣೀರು ಹಾಕಿದರು.

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಹಳ್ಳಿಯೊಂದಕ್ಕೆ ತೆರಳಬೇಕಿದ್ದರಿಂದ ಮತ್ತು 14 ದಿನಗಳು ಆಶ್ರಯ ಕೊಡುವುದು ಸಾಧ್ಯವಿಲ್ಲದಿದ್ದರಿಂದ ಸ್ಥಳಿಯರು ಪರ್ಯಾಯ ಮಾರ್ಗವನ್ನು ತಿಳಿಸಿ ಕಳುಹಿಸಿ ನೆರವಾದರು.

ADVERTISEMENT

‘ಕೆಲಸವಿಲ್ಲದೆ ಹೊರ ರಾಜ್ಯದ ಟೆಂಟ್‍ಗಳಲ್ಲಿ ಉಳಿದು ಉಪಜೀವನ ನಡೆಸಲು ಸಾಧ್ಯವಿದೆಯೇ? ಬೇಕಿದ್ದರೆ ಪರೀಕ್ಷೆ ಮಾಡಿಸಿ ಸೋಂಕು ಬಂದಿದ್ದರೆ ಕ್ವಾರಂಟೈನ್ ಮಾಡಲಿ. ಅದು ಬಿಟ್ಟು ಪೊಲೀಸರು ನಮ್ಮನ್ನು ಅಲೆಸುತ್ತಿದ್ದಾರೆ. ನಮ್ಮೂರು ಸೇರಿಕೊಳ್ಳಲು ಬಿಡುತ್ತಿಲ್ಲ. ನಾವೆಲ್ಲಿ ಹೋಗಬೇಕು ಹೇಳಿ?’ ಎಂದು ಆ ವಲಸೆ ಕಾರ್ಮಿಕರು ಕಣ್ಣೀರಿಟ್ಟರು.

‘ಹೀಗೆ ಬಂದವರನ್ನು ಓಡಾಡಿಸುವ ಬದಲಿದೆ, ಸ್ವಗ್ರಾಮ ತಲುಪಲು ಅವಕಾಶ ಕೊಡಬೇಕು. ಅವರ ಸಂಪೂರ್ಣ ಮಾಹಿತಿ ಪಡೆದು, ಗ್ರಾಮ ಲೆಕ್ಕಾಧಿಕಾರಿಗೆ ತಿಳಿಸಿ, ಹೋಂ ಕ್ವಾರಂಟೈನ್ ಇರಿಸುವ ಕೆಲಸ ಮಾಡಬೇಕು. ಹೀಗೆ ಮಾಡುವುದರಿಂದ ವಲಸೆ ಕಾರ್ಮಿಕರು ತೊಂದರೆ ಅನುಭವಿಸುವುದು ತಪ್ಪುತ್ತದೆ. ಎಷ್ಟು ಜನ ಎಲ್ಲಿಂದ ಬಂದರು ಎನ್ನುವ ನಿಖರ ಮಾಹಿತಿಯೂ ಸಿಗುತ್ತದೆ’ ಎಂದು ಗ್ರಾಮಸ್ಥರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.