ADVERTISEMENT

ಹೆಸರು ಸೇರ್ಪಡೆಗೆ ಅವಕಾಶ

ಮತದಾರರ ಪಟ್ಟಿ ಪರಿಶೀಲನಾ ಕಾರ್ಯಕ್ರಮಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2019, 16:13 IST
Last Updated 1 ಸೆಪ್ಟೆಂಬರ್ 2019, 16:13 IST
ಬೆಳಗಾವಿಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಕರಪತ್ರಗಳನ್ನು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಹಾಗೂ ಅಧಿಕಾರಿಗಳು ಭಾನುವಾರ ಬಿಡುಗಡೆ ಮಾಡಿದರು
ಬೆಳಗಾವಿಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಕರಪತ್ರಗಳನ್ನು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಹಾಗೂ ಅಧಿಕಾರಿಗಳು ಭಾನುವಾರ ಬಿಡುಗಡೆ ಮಾಡಿದರು   

ಬೆಳಗಾವಿ: ‘ಪ್ರಜಾಪ್ರಭುತ್ವ ವ್ಯವಸ್ಥೆ ಬಲಶಾಲಿಗೊಳಿಸಬೇಕಾದರೆ ಮತದಾರರ ಪಟ್ಟಿಯನ್ನು ದೋಷರಹಿತಗೊಳಿಸುವ ಅಗತ್ಯವಿದೆ. ಆದ್ದರಿಂದ ಸೆ. 1ರಿಂದ ಅ. 15 ರವರೆಗೆ ನಡೆಯುವ ಮತದಾರರ ಪಟ್ಟಿಯ ಪರಿಶೀಲನಾ ಕಾರ್ಯಕ್ಕೆ ಸಹಕರಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಸ್‌.ಬಿ. ಬೊಮ್ಮನಹಳ್ಳಿ ಕೋರಿದರು.

ಚುನಾವಣಾ ಆಯೋಗ, ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾರರ ಪಟ್ಟಿಯ ಪರಿಶೀಲನಾ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಪಟ್ಟಿ ಪರಿಷ್ಕರಣೆ ನಿರಂತರವಾಗಿ ನಡೆಯುತ್ತದೆ. ಆದರೆ, ಮತದಾನದ ದಿನದಂದು ನಮ್ಮ ಹೆಸರು ಇಲ್ಲ ಎಂಬ ದೂರುಗಳು ಬರುತ್ತವೆ. ಮತದಾರರು ಜಾಗರೂಕತೆ ವಹಿಸಿದರೆ ಪಟ್ಟಿಯಲ್ಲಿನ ಲೋಪದೋಷಗಳನ್ನು ಮುಂಚಿತವಾಗಿಯೇ ಸರಿಪಡಿಸಬಹುದು. ಆ ಕಾರಣಕ್ಕಾಗಿಯೇ ಆಯೋಗವು ಮತದಾರರ ಪಟ್ಟಿಯನ್ನು ನಿರಂತರವಾಗಿ ಪರಿಷ್ಕರಣೆ ಮಾಡುತ್ತದೆ. ಹೆಸರು ಸೇರ್ಪಡೆ, ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ ಮತ್ತು ಹೆಸರು ತೆಗೆದು ಹಾಕುವ ಪ್ರಕ್ರಿಯೆ ನಡೆಯುತ್ತದೆ’ ಎಂದು ಮಾಹಿತಿ ನೀಡಿದರು.

ADVERTISEMENT

ಖಚಿತಪಡಿಸಿಕೊಳ್ಳಬೇಕು:

‘ಜ.1ನೇ ತಾರೀಖನ್ನು ಅರ್ಹತಾ ದಿನಾಂಕ ಎಂದು ಪರಿಗಣಿಸಿ ಪ್ರತಿವರ್ಷ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತದೆ.
ಸೆ. 1ರಿಂದ ಅ.15ರವರೆಗೆ ಪರಿಶೀಲನಾ ಕಾರ್ಯ ನಡೆಯಲಿದೆ. ಹೆಸರು ಪಟ್ಟಿಯಲ್ಲಿ ಇರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಲೋಪದೋಷಗಳಿದ್ದರೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸುವ ಮೂಲಕ ಸರಿಪಡಿಸಬಹುದು’ ಎಂದು ತಿಳಿಸಿದರು.

‘ನಾಯಕರನ್ನು ಆಯ್ಕೆ ಮಾಡುವ ಹಕ್ಕನ್ನು ಪ್ರಜಾಪ್ರಭುತ್ವದಲ್ಲಿ ಮತದಾರರಿಗೆ ನೀಡಲಾಗಿದೆ. ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣೆ ನಮ್ಮೆಲ್ಲರ ಹಬ್ಬ. ಮತದಾನ ಮಾಡುವಾಗ ಎಚ್ಚರ ತಪ್ಪಿದರೆ ನಾವೇ ಪರಿತಪಿಸಬೇಕಾಗುತ್ತದೆ. ಮತದಾನ ಸಂವಿಧಾನಾತ್ಮಕ ಹಕ್ಕು. ಆದ್ದರಿಂದ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಿ ಎಲ್ಲರೂ ತಪ್ಪದೇ ಮತದಾನಕ್ಕೆ ಮುಂದಾಗಬೇಕು’ ಎಂದರು.

ನೋಂದಾಯಿಸಿಕೊಳ್ಳಿ:

‘‌ಅರ್ಹರು ಕಡ್ಡಾಯವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಸ್ಥಳೀಯ ಮಟ್ಟದಲ್ಲಿ ನಿಗದಿತ ಅರ್ಜಿ ನಮೂನೆ 6 ಲಭ್ಯವಿರುತ್ತದೆ. ಇದಲ್ಲದೇ ಆನ್‌ಲೈನ್‌ನಲ್ಲೇ ಮತದಾರರ ಪಟ್ಟಿ ಲಭ್ಯವಿದ್ದು, ಹೆಸರು ಇರುವ ಬಗ್ಗೆ ಖಾತ್ರಿಪಡಿಸಿಕೊಳ್ಳಲು ಸಾಧ್ಯವಿದೆ. ಒಟ್ಟಾರೆ ಪ್ರಕ್ರಿಯೆಗೆ ರಾಜಕೀಯ ಪಕ್ಷಗಳು, ಮಾಧ್ಯಮಗಳು ಈ ಪ್ರಕ್ರಿಯೆಯಲ್ಲಿ ಸಹಕರಿಸಬೇಕು’ ಎಂದು ಕೋರಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಹರಕುಣಿ, ‘ಮತದಾರರ ಪಟ್ಟಿಯಲ್ಲಿ ಕೆಲವೆಡೆ ಎರಡೆರಡು ಕಡೆಗಳಲ್ಲಿ ಹೆಸರುಗಳು ಕಂಡುಬಂದಿದ್ದು, ಈ ಬಾರಿ ಅದನ್ನು ಸರಿಪಡಿಸಬೇಕು’ ಎಂದು ಒತ್ತಾಯಿಸಿದರು.

ನಗರ ಪೊಲೀಸ್ ಆಯುಕ್ತ ಬಿ‌.ಎಸ್. ಲೋಕೇಶ್‌ಕುಮಾರ್, ಎಸ್ಪಿ ಲಕ್ಷ್ಮಣ ನಿಂಬರಗಿ, ಪ್ರಚಾರ ರಾಯಭಾರಿ ರಾಘವೇಂದ್ರ ಅಣವೇಕರ ಮಾತನಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ, ದಿನೇಶ್ ಕುಮಾರ್, ನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಕೆ.ವಿ. ರಾಜೇಂದ್ರ ಇದ್ದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಬಿ. ಬೂದೆಪ್ಪ ಸ್ವಾಗತಿಸಿದರು. ಉಪ ವಿಭಾಗಾಧಿಕಾರಿ ಡಾ.ಕವಿತಾ ಯೋಗಪ್ಪನವರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.