
ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ವ್ಯಾಪ್ತಿಯಲ್ಲಿ ಪಿಎಚ್.ಡಿ ಮಾಡುವವರ ಪೈಕಿ ಕೆಲವರು ಸಲ್ಲಿಸುತ್ತಿರುವ ಪ್ರಬಂಧಗಳಲ್ಲಿ ಶೇ 60ರಷ್ಟು ಕೃತಕ ಬುದ್ಧಿಮತ್ತೆ(ಎಐ) ಬಳಸುತ್ತಿರುವುದು ಗೊತ್ತಾಗಿದೆ.
ಯಾವುದಾದರೂ ಹೊಸ ವಿಷಯ ಕಂಡುಹಿಡಿಯುವುದೇ ಪ್ರಬಂಧಗಳ ಉದ್ದೇಶ. ಆದರೆ, ಕೆಲವರು ಮಿತಿಮೀರಿ ಎಐ ಬಳಸುತ್ತಿರುವುದು ಮತ್ತು ಕೃತಿಚೌರ್ಯ ಮಾಡುತ್ತಿರುವುದನ್ನು ವಿಟಿಯು ಗಂಭೀರವಾಗಿ ಪರಿಗಣಿಸಿದೆ.
ಪ್ರಬಂಧಗಳಲ್ಲಿ ಎಐ ಬಳಕೆ ಪ್ರಮಾಣ ಶೇ 20 ಹಾಗೂ ಕೃತಿಚೌರ್ಯ ಪ್ರಮಾಣ ಶೇ 10 ಮೀರುವಂತಿಲ್ಲ ಎಂಬ ನಿಯಮ ಜಾರಿಗೊಳಿಸಿದೆ.
527 ಪ್ರಬಂಧಗಳಲ್ಲಿ ಕೃತಿಚೌರ್ಯ
‘ವಿಟಿಯುಗೆ 2025ರಲ್ಲಿ ಸಲ್ಲಿಕೆಯಾಗಿದ್ದ ಪ್ರಬಂಧಗಳ ಪೈಕಿ 527 ಪ್ರಬಂಧಗಳಲ್ಲಿ ಕೃತಿಚೌರ್ಯ ಕಂಡುಬಂದಿತ್ತು. ಮಿತಿಮೀರಿ ಕೃತಿಚೌರ್ಯ ಮಾಡಿದ್ದರಿಂದ 12 ಪ್ರಬಂಧ ತಿರಸ್ಕೃತಗೊಳಿಸಿದ್ದೇವೆ’ ಎಂದು ಮೌಲ್ಯಮಾಪನ ಕುಲಸಚಿವ ಉಜ್ವಲ್ ಯು.ಜೆ. ‘ಪ್ರಜಾವಾಣಿ’ಗೆ ತಿಳಿಸಿದರು.
‘ಇತ್ತೀಚಿನ ದಿನಗಳಲ್ಲಿ ಕೃತಿಚೌರ್ಯದ ಜತೆಗೆ, ಎಐ ಹೆಚ್ಚಾಗಿ ಬಳಸಿದ್ದು ಕಂಡುಬಂತು. ಇದಕ್ಕೆ ಕಡಿವಾಣ ಹಾಕಲು 2026ರ ಜನವರಿ 6ರಂದು ಸುತ್ತೋಲೆ ಹೊರಡಿಸಿದ್ದೇವೆ. ನಂತರದ ಒಂದು ತಿಂಗಳ ಅವಧಿಯಲ್ಲಿ ಸಲ್ಲಿಕೆಯಾಗಿದ್ದ 67 ಪ್ರಬಂಧಗಳ ಪೈಕಿ 19 ಪ್ರಬಂಧಗಳಲ್ಲಿ ಮಿತಿಗಿಂತ ಹೆಚ್ಚಾಗಿ ಎಐ ಬಳಸಿರುವುದು ಕಂಡುಬಂದಿದೆ. ಅವುಗಳನ್ನು ಸರಿಪಡಿಸಿಕೊಡುವಂತೆ ಸೂಚಿಸಿದ್ದೇವೆ’ ಎಂದರು.
ಸಾಫ್ಟವೇರ್ ಮೂಲಕ ಪತ್ತೆ
‘ವಿಟಿಯುಗೆ ಸಲ್ಲಿಕೆಯಾಗುವ ಯಾವುದೇ ಪ್ರಬಂಧದಲ್ಲಿ ಕೃತಿಚೌರ್ಯ ಮಾಡಿರುವುದನ್ನು ಮತ್ತು ಎಐ ಬಳಸಿರುವುದನ್ನು ಸಾಫ್ಟವೇರ್ ಮೂಲಕ ಪತ್ತೆ ಹಚ್ಚುತ್ತಿದ್ದೇವೆ. ಕೃತಿಚೌರ್ಯ ಮತ್ತು ಎಐ ಬಳಕೆಗೆ ಮಿತಿ ಹೇರಿ, ವಿಟಿಯು ಸಂಯೋಜಿತ ಕಾಲೇಜುಗಳ ಪ್ರಾಚಾರ್ಯರು ಮತ್ತು ಮಾರ್ಗದರ್ಶಕರಿಗೆ ಸೂಚನೆ ಕೊಟ್ಟಿದ್ದೇವೆ’ ಎಂದು ಹೇಳಿದರು.
‘ಆರಂಭದಲ್ಲಿ ಕೆಲವರು ತಮ್ಮ ಪ್ರಬಂಧಗಳಲ್ಲಿ ಶೇ 60ಕ್ಕಿಂತ ಹೆಚ್ಚು ಎಐ ಬಳಸುತ್ತಿದ್ದರು. ನಾವು ವಿವಿಧ ಸುರಕ್ಷತಾ ಕ್ರಮ ಅನುಸರಿಸಿದ ಕಾರಣ, ಆ ಪ್ರಮಾಣ ಶೇ 28ಕ್ಕೆ ತಗ್ಗಿದೆ’ ಎಂದರು.
ಪ್ರಬಂಧದ ಉದ್ದೇಶವೇ ಹೊಸತನ್ನು ಕಂಡುಹಿಡಿಯುವುದು. ಹೆಚ್ಚಿನ ಪ್ರಮಾಣದಲ್ಲಿ ಕೃತಿಚೌರ್ಯ ಮಾಡುತ್ತಿರುವುದು ಎಐ ಬಳಸುತ್ತಿರುವುದನ್ನು ತಡೆಗಟ್ಟಲು ಸಾಫ್ಟ್‌ವೇರ್ ಮೂಲಕ ಪರಿಶೀಲಿಸುತ್ತಿದ್ದೇವೆಎಸ್.ವಿದ್ಯಾಶಂಕರ ಕುಲಪತಿ ವಿಟಿಯು
ಪ್ರಬಂಧಗಳಲ್ಲಿ ಎಐ ದುರ್ಬಳಕೆ ತಡೆಯುವ ನಿಟ್ಟಿನಲ್ಲಿ ಕ್ರಮ ವಹಿಸಿದ್ದೇವೆ. ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಐ ಬಳಸಿದ್ದರೆ ಮತ್ತು ಕೃತಿಚೌರ್ಯ ಮಾಡಿದ್ದರೆ ಅದನ್ನು ತಿರಸ್ಕರಿಸಲಾಗುವುದು.ಉಜ್ವಲ್ ಯು.ಜೆ. ಮೌಲ್ಯಮಾಪನ ಕುಲಸಚಿವ ವಿಟಿಯು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.