
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳ ಸಂಭ್ರಮ
ಪ್ರಜಾವಾಣಿ ಚಿತ್ರ
ಬೆಳಗಾವಿ: ‘ಈ ಹಿಂದೆ ಬಿ.ಇ ಯಲ್ಲಿ (ಕಂಪ್ಯೂಟರ್ ಸೈನ್ಸ್) ಸಾಧನೆ ಮಾಡಿದಾಗ, ಇದೇ ಕ್ಯಾಂಪಸ್‌ನಲ್ಲಿ ಆರು ಚಿನ್ನದ ಪದಕಗಳನ್ನು ಗಳಿಸಿದ್ದೆ. ಈಗ ಎಂಬಿಎನಲ್ಲಿ ಮಾಡಿದ ಸಾಧನೆಗಾಗಿ ನಾಲ್ಕು ಚಿನ್ನದ ಪದಕಗಳನ್ನು ಪಡೆದಿದ್ದೇನೆ...’
ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ 25ನೇ ಘಟಿಕೋತ್ಸವದಲ್ಲಿ (ಭಾಗ–2) ಪದಕ ಪಡೆದ ಶಿವಮೊಗ್ಗದ ಜವಾಹರಲಾಲ್ ನೆಹರೂ ಎಂಜಿನಿಯರಿಂಗ್ ಕಾಲೇಜಿನ ಜೆ.ಪಾರ್ವತಿ ಸಾಲೇರಾ ‘ಪ್ರಜಾವಾಣಿ’ ಜತೆ ಹೀಗೆ ಸಂತಸ ಹಂಚಿಕೊಂಡರು.
‘ಬೆಂಗಳೂರಿನಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ನಲ್ಲಿ ಮ್ಯಾನೇಜ್‌ಮೆಂಟ್ ಟ್ರೈನಿ ಆಗಿ ಕೆಲಸ ಸಿಕ್ಕಿದೆ. ಶೀಘ್ರ ಸೇರಿಕೊಳ್ಳುವೆ’ ಎಂದರು. ‘ನಮ್ಮದು ಅವಿಭಕ್ತ ಕುಟುಂಬ. ತಂದೆ ಕೃಷಿಕ. ತಾಯಿ ಎಂಜಿನಿಯರ್. ಮನೆಯಲ್ಲಿ ಓದಿಗೆ ಪೂರಕ ವಾತಾವರಣ ಇತ್ತು’ ಎಂದು ಹೇಳಿದರು.
ನಾಗರಿಕ ಸೇವೆಯಲ್ಲಿ ಆಸಕ್ತಿ: ದಾವಣಗೆರೆಯ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜಿನ ಬಿ.ಎಸ್.ಸಂಚಿತಾ ಎಂ.ಟೆಕ್‌ನಲ್ಲಿ 9.46 ಸಿಜಿಪಿಎ ಅಂಕ ಗಳಿಸಿ, ಮೂರು ಚಿನ್ನದ ಪದಕ ಗಳಿಸಿ ಖುಷಿಪಟ್ಟರು. ಅವರ ತಂದೆ ಶಂಕರ ಎಲ್‌ಐಸಿಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿದ್ದರೆ, ತಾಯಿ ಹೇಮಾವತಿ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕಿ.
‘ಹೆತ್ತವರು, ಉಪನ್ಯಾಸಕರ ಸಹಕಾರದಿಂದ ಈ ಯಶಸ್ಸು ಸಿಕ್ಕಿತು’ ಎನ್ನುವ ಅವರು ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಿ ನಾಗರಿಕ ಸೇವೆಯಲ್ಲಿ ತೊಡಗುವ ಹಂಬಲ ಹೊಂದಿದ್ದಾರೆ.
8702 ವಿದ್ಯಾರ್ಥಿಗಳಿಗೆ ಪದವಿ
4928 ಎಂಬಿಎ 2960 ಎಂಸಿಎ 718 ಎಂ.ಟೆಕ್ 59 ಎಂ.ಆರ್ಕ್ 21 ಎಂ.ಪ್ಲ್ಯಾನ್ 16 ಎಂ.ಎಸ್ಸಿ ಸೇರಿ 8702 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 25 ವಿದ್ಯಾರ್ಥಿಗಳು ಚಿನ್ನದ ಪದಕ 96 ವಿದ್ಯಾರ್ಥಿಗಳಿಗೆ ವಿವಿಧ ರ್‍ಯಾಂಕ್ ನೀಡಲಾಯಿತು. ರಾಜ್ಯಪಾಲ ಥಾವರಚಂದ್ ಗೆಹಲೋತ್ ಕರ್ನಾಟಕ ನೌಕಾನೆಲೆಯ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ರಿಯಲ್ ಅಡ್ಮಿರಲ್ ವಿಕ್ರಂ ಮೆನನ್ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.