
ಬೆಳಗಾವಿಯ ವಿಟಿಯುದಲ್ಲಿ ನಡೆದ ಘಟಿಕೋತ್ಸವದಲ್ಲಿ ಕರ್ನಾಟಕ ನೌಕಾ ನೆಲೆಯ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ರಿಯರ್ ಅಡ್ಮಿರಲ್ ವಿಕ್ರಂ ಮೆನನ್ ಮಾತನಾಡಿದರು
ಬೆಳಗಾವಿ: ‘ಪ್ರಸ್ತುತ ಕಾಲಘಟ್ಟದಲ್ಲಿ ಎಂಜಿನಿಯರ್‌ಗಳು ಕಂಡುಹಿಡಿಯುವ ಆವಿಷ್ಕಾರಗಳು ಮತ್ತು ತಂತ್ರಜ್ಞಾನ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತಿರಬೇಕು’ ಎಂದು ಕರ್ನಾಟಕ ನೌಕಾ ನೆಲೆಯ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ರಿಯರ್ ಅಡ್ಮಿರಲ್ ವಿಕ್ರಂ ಮೆನನ್ ಹೇಳಿದರು.
ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 25ನೇ ವಾರ್ಷಿಕ ಘಟಿಕೋತ್ಸವ(ಭಾಗ-2)ದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.
‘ಇಂದು ಎಲ್ಲ ಕ್ಷೇತ್ರಗಳಲ್ಲಿ ಜಾಗತಿಕ ರಾಜಕೀಯದ ಪ್ರಭಾವವಿದೆ. ಅದು ಸಾಕಾಗದಿದ್ದರೆ ಕೃತಕ ಬುದ್ಧಿಮತ್ತೆ(ಎಐ) ಔದ್ಯೋಗಿಕ ಮಾರುಕಟ್ಟೆಯನ್ನು ಬದಲಿಸುತ್ತಿದೆ. ಉದ್ಯೋಗಾಕಾಂಕ್ಷಿಗಳ ನಿರೀಕ್ಷೆ ಛಿದ್ರಗೊಳಿಸುತ್ತಿದೆ. ಇಂಥ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವುದೇ ವಿದ್ಯಾರ್ಥಿಗಳ ಶಕ್ತಿಯಾಗಿದೆ. ವಿಟಿಯು ಅವರಿಗೆ ತರಬೇತಿ ನೀಡಿದೆ’ ಎಂದರು.
‘ಸ್ವಾವಲಂಬಿಗಳಾಗುವುದು ಎಂದರೆ ನಾವು ಪ್ರಪಂಚದಿಂದ ಪ್ರತ್ಯೇಕಗೊಳ್ಳುವುದು ಎಂದಲ್ಲ. ಬದಲಿಗೆ ಭಾರತ ಹೊಸತನ್ನು ಸಾಧಿಸಬೇಕು. ನಮಗೆ ಅಗತ್ಯವಿರುವ ತಂತ್ರಜ್ಞಾನವನ್ನು ಮನೆಗೇ ತರಬೇಕು. ಈ ಸಾಮರ್ಥ್ಯ ಬೆಳೆಸಿಕೊಳ್ಳಬೇಕು’ ಎಂದು ಕರೆಕೊಟ್ಟರು.
‘ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ಸಹಕಾರ ಬಲಪಡಿಸಲು, ನೌಕಾ ನೆಲೆಯೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಲು ವಿಟಿಯು ನಮ್ಮ ಬೆಂಬಲ ಹೊಂದಿದೆ. ಅಂಥ ಪಾಲುದಾರಿಕೆಗಳು ವಿದ್ಯಾರ್ಥಿಗಳು, ಸಂಶೋಧಕರು ಮತ್ತು ನೌಕಾ ಸಿಬ್ಬಂದಿಯು ಬಾಹ್ಯಾಕಾಶ, ರಕ್ಷಣೆ ಮತ್ತು ತಂತ್ರಜ್ಞಾನದಲ್ಲಿನ ಸಂಕೀರ್ಣ ಸವಾಲು ಜಂಟಿಯಾಗಿ ನಿಭಾಯಿಸಲು ಅನುವು ಮಾಡಿಕೊಡುತ್ತದೆ’ ಎಂದು ಅವರು ಹೇಳಿದರು.
ಕುಲಪತಿ ಪ್ರೊ.ಎಸ್.ವಿದ್ಯಾಶಂಕರ, ‘ಈ ಬಾರಿ 83 ಸಾವಿರ ವಿದ್ಯಾರ್ಥಿಗಳು ಇಂಟರ್ನ್‌ಶಿಪ್ ತೆಗೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಪ್ರಾಜೆಕ್ಟ್‌ಗಳ ಪ್ರದರ್ಶನಕ್ಕಾಗಿ ಈ ತಿಂಗಳು ಓಪನ್ ಡೇ ಮಾಡುತ್ತಿದ್ದೇವೆ’ ಎಂದರು.
ಕುಲಸಚಿವ ಪ್ರೊ.ಯು.ಜೆ.ಉಜ್ವಲ್, ಪ್ರೊ.ಪ್ರಸಾದ್ ಬಿ.ರಾಂಪೂರೆ ಇದ್ದರು.
‘ತಾಂತ್ರಿಕ ಶಿಕ್ಷಣದ ಪಾತ್ರ ಮಹತ್ವದ್ದು’
ರಾಜ್ಯಪಾಲ ಥಾವರಚಂದ ಗೆಹ್ಲೋತ್ ‘ರಾಷ್ಟ್ರದ ಪ್ರಗತಿಯಲ್ಲಿ ತಾಂತ್ರಿಕ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ತಂತ್ರಜ್ಞಾನಗಳು ಸಾಮಾನ್ಯ ವರ್ಗದ ಜನರ ಸಮಸ್ಯೆ ಬಗೆಹರಿಸುವಂತಿರಬೇಕು. ಸಂಶೋಧನೆ ಮತ್ತು ನಾವೀನ್ಯತೆಯಿಂದಾಗಿ ಭಾರತವು ಜಾಗತಿಕವಾಗಿ ತನ್ನ ಅಸ್ತಿತ್ವವನ್ನು ಸಾಬೀತುಪಡಿಸಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.