ADVERTISEMENT

ಕನ್ನಡ ಬೆಳವಣಿಗೆಗೆ ವಿಟಿಯು ಕೊಡುಗೆ- ಕುಲಪತಿ ಡಾ.ಕರಿಸಿದ್ದಪ್ಪ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 6:52 IST
Last Updated 1 ಡಿಸೆಂಬರ್ 2021, 6:52 IST
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಎಲ್. ಪಾಟೀಲ ಅವರನ್ನು ಬೆಳಗಾವಿಯ ವಿಟಿಯುನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಕುಲಪತಿ ಡಾ.ಕರಿಸಿದ್ದಪ್ಪ ಸತ್ಕರಿಸಿದರು. ಪ್ರೊ.ಸಿ.ಕೆ. ಸುಬ್ಬರಾಯ, ಪ್ರೊ.ಮಹಾಂತೇಶ ಬಿರ್ಜೆ, ಪ್ರೊ.ಎ.ಎಸ್. ದೇಶಪಾಂಡೆ, ಎಚ್. ಡುಂಡಿರಾಜ್‌, ಪ್ರೊ.ಬಿ.ಇ. ರಂಗಸ್ವಾಮಿ, ಎಂ.ಎ. ಸಪ್ನಾ ಮತ್ತು ಪ್ರೊ.ಶಾಂತಾ ಜೋರಾ‍ಪುರ ಇದ್ದಾರೆ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಎಲ್. ಪಾಟೀಲ ಅವರನ್ನು ಬೆಳಗಾವಿಯ ವಿಟಿಯುನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಕುಲಪತಿ ಡಾ.ಕರಿಸಿದ್ದಪ್ಪ ಸತ್ಕರಿಸಿದರು. ಪ್ರೊ.ಸಿ.ಕೆ. ಸುಬ್ಬರಾಯ, ಪ್ರೊ.ಮಹಾಂತೇಶ ಬಿರ್ಜೆ, ಪ್ರೊ.ಎ.ಎಸ್. ದೇಶಪಾಂಡೆ, ಎಚ್. ಡುಂಡಿರಾಜ್‌, ಪ್ರೊ.ಬಿ.ಇ. ರಂಗಸ್ವಾಮಿ, ಎಂ.ಎ. ಸಪ್ನಾ ಮತ್ತು ಪ್ರೊ.ಶಾಂತಾ ಜೋರಾ‍ಪುರ ಇದ್ದಾರೆ   

ಬೆಳಗಾವಿ: ‘ವಿದ್ಯಾರ್ಥಿಗಳು ಸರ್ ಎಂ. ವಿಶ್ವೇಶ್ವರಯ್ಯ, ಎಸ್‌.ಜಿ. ಬಾಳೇಕುಂದ್ರಿ ಮೊದಲಾದವರ ತತ್ವ–ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಬಿ.ಎಲ್. ಪಾಟೀಲ ತಿಳಿಸಿದರು.

ಇಲ್ಲಿನ ವಿಟಿಯು ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾಗಿದ್ದಕ್ಕಾಗಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಪ್ರಶಸ್ತಿ ಮುಖ್ಯವಲ್ಲ. ಆದರೆ, ಅದಕ್ಕೆ ಕಾರಣವಾದ ಮೂಲ ಉದ್ದೇಶ, ಅದರ ನಿರ್ವಹಣೆ ಮತ್ತು ಅನುಷ್ಠಾನ ಬಹಳ ಮುಖ್ಯ. ಆ ಉದ್ದೇಶಕ್ಕೆ ಸಮಾಜವನ್ನು ಧನಾತ್ಮಕವಾಗಿ ಬದಲಾಯಿಸಿ ಉತ್ತುಂಗಕ್ಕೆ ಒಯ್ಯುವ ಅದಮ್ಯ ಶಕ್ತಿ ಇದೆ’ ಎಂದರು.

ADVERTISEMENT

ಮುಖ್ಯ ಅತಿಥಿಯಾಗಿದ್ದ ಹನಿಗವನ ರಚನೆಕಾರ ಎಚ್. ಡುಂಡಿರಾಜ್‌, ‘ಕನ್ನಡದ ಬಗ್ಗೆ ನಿರಾಭಿಮಾನವಾಗಲಿ ದುರಾಭಿಮಾನವಾಗಲಿ ಇರಬಾರದು. ಕನ್ನಡೇತರರಿಗೆ ಕನ್ನಡ ಭಾಷೆ, ಸಾಹಿತ್ಯವನ್ನು ತಿಳಿಸಿ ಪ್ರೀತಿ ಮೂಡಿಸಿ ನಮ್ಮ ಭಾಷೆ ಬೆಳೆಸಬೇಕು’ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಡಾ.ಕರಿಸಿದ್ದಪ್ಪ ಮಾತನಾಡಿ, ‘ಎಂಜಿನಿಯರಿಂಗ್ ಕ್ಷೇತ್ರದಲ್ಲಿನ ಬೆಳವಣಿಗೆಯನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅತ್ಯಂತ ಸರಳ ಕನ್ನಡದಲ್ಲಿ ತಿಳಿಸುವ ಮೂಲಕ ನಮ್ಮ ಭಾಷೆ ಬೆಳವಣಿಗೆಗೆ ವಿಶ್ವವಿದ್ಯಾಲಯ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.

‘ಕನ್ನಡದಲ್ಲಿ ತಾಂತ್ರಿಕ ಪದಕೋಶ ರಚಿಸಲಾಗುತ್ತಿದೆ. ತಾಂತ್ರಿಕ ಕ್ಷೇತ್ರದ ವಿಷಯಗಳ ಬಗ್ಗೆ ಕನ್ನಡದಲ್ಲಿ ಪುಸ್ತಕ ರಚನೆಗೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಕನ್ನಡ ಮಾಧ್ಯಮದಲ್ಲಿ ಎಂಜಿನಿಯರಿಂಗ್ ಶಿಕ್ಷಣ ಆರಂಭಕ್ಕೆ ಕ್ರಮ ವಹಿಸಲಾಗಿದೆ. ಅದಕ್ಕೆ ಅವಶ್ಯ ಪುಸ್ತಕಗಳನ್ನು ಕನ್ನಡದಲ್ಲೆ ರೂಪಿಸಲಾಗುತ್ತಿದೆ’ ಎಂದು ವಿವರಿಸಿದರು.

‘ಜಿಲ್ಲೆಯಲ್ಲಿ ಹತ್ತು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಲ್ಲಿ ವಿಜ್ಞಾನ ಪ್ರಯೋಗಾಲಯ ಹಾಗೂ ಇನ್ನಿತರ ಅವಶ್ಯ ಸೌಕರ್ಯಗಳನ್ನು ಒದಗಿಸುತ್ತಿದೆ’ ಎಂದರು.

ಹಣಕಾಸು ಅಧಿಕಾರಿ ಎಂ.ಎ ಸಪ್ನಾ ಹಾಜರಿದ್ದರು.

ಕುಲಸಚಿವ ಪ್ರೊ.ಆನಂದ ದೇಶಪಾಂಡೆ ಸ್ವಾಗತಿಸಿದರು. ವಿಟಿಯು ಕನ್ನಡ ಪುಸ್ತಕ ರಚನಾ ಸಮಿತಿ ಅಧ್ಯಕ್ಷ ಪ್ರೊ.ಸಿ.ಕೆ. ಸುಬ್ಬರಾಯ ಪ್ರಾಸ್ತಾವಿಕ ಮಾತನಾಡಿದರು. ಪ್ರಸಾರಾಂಗ ನಿರ್ದೇಶಕ ಪ್ರೊ.ಮಹಾಂತೇಶ ಬಿರ್ಜೆ ಹಾಗೂ ಸಂಯೋಜಕಿ ಪ್ರೊ.ಶಾಂತಾ ಜೋರಾ‍ಪುರ ಪರಿಚಯಿಸಿದರು. ಬಸವಣ್ಣೆಪ್ಪ ಕಂಬಾರ ನಿರೂಪಿಸಿದರು. ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಈ. ರಂಗಸ್ವಾಮಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.