ADVERTISEMENT

ಹಲವು ಕೆರೆಗಳಲ್ಲಿ ನೀರಿನ ‘ಸೊಬಗು’

ಹೋದ ವರ್ಷ ಉತ್ತಮ ಮಳೆಯಾದ ಪರಿಣಾಮ ‘ನೀರ ನೆಮ್ಮದಿ’

ಎಂ.ಮಹೇಶ
Published 3 ಫೆಬ್ರುವರಿ 2020, 8:28 IST
Last Updated 3 ಫೆಬ್ರುವರಿ 2020, 8:28 IST
ಚನ್ನಮ್ಮನ ಕಿತ್ತೂರು ತಾಲ್ಲೂಕಿನ ತುಂಬುಗೆರೆ ತುಂಬಿದೆ– ಪ್ರಜಾವಾಣಿ ಚಿತ್ರ
ಚನ್ನಮ್ಮನ ಕಿತ್ತೂರು ತಾಲ್ಲೂಕಿನ ತುಂಬುಗೆರೆ ತುಂಬಿದೆ– ಪ್ರಜಾವಾಣಿ ಚಿತ್ರ   

ಬೆಳಗಾವಿ: ಜಿಲ್ಲೆಯ ಬಹುತೇಕ ಕೆರೆ–ಕಟ್ಟೆಗಳಲ್ಲಿ ನೀರು ತುಂಬಿರುವುದರಿಂದಾಗಿ, ಮುಂಬರುವ ಬೇಸಿಗೆಯ ಸಂದರ್ಭದಲ್ಲಿ ಜನ– ಜಾನುವಾರುಗಳಿಗೆ ‘ನೀರ ನೆಮ್ಮದಿ’ ದೊರೆಯುವ ಸಾಧ್ಯತೆ ಇದೆ.

ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ 278 ಕೆರೆಗಳಿವೆ. ಇವುಗಳ ಗರಿಷ್ಠ ನೀರಿನ ಸಾಮರ್ಥ್ಯ 3308 ಎಂಸಿಎಫ್‌ಟಿ (ಮಿಲಿಯನ್ ಕ್ಯುಬಿಕ್ ಫೀಟ್‌) ಇದೆ. 30,433 ಹೆಕ್ಟೇರ್‌ಗಳಷ್ಟು ಅಚ್ಚುಕಟ್ಟು ಪ್ರದೇಶ ಹೊಂದಿವೆ. ಈ ಪೈಕಿ 127 ಕೆರೆಗಳು ಶೇ 51ರಿಂದ ಶೇ 99ರಷ್ಟು ಭರ್ತಿಯಾಗಿವೆ. 67 ಕೆರೆಗಳಲ್ಲಿ ಶೇ 31ರಿಂದ ಶೇ 50 ಮತ್ತು 50 ಕೆರೆಗಳಲ್ಲಿ ಶೇ 30ರವರೆಗೆ ನೀರಿದೆ. 34 ಕೆರೆಗಳು ಖಾಲಿ ಇವೆ.

ಕಳೆದ ವರ್ಷದ ಇದೇ ಅವಧಿಯಲ್ಲಿ ಬಹುತೇಕ ಕೆರೆಗಳಲ್ಲಿ ನೀರಿನ ಪ್ರಮಾಣ ಚಿಂತಾಜನಕ ಸ್ಥಿತಿಯಲ್ಲಿತ್ತು. ಆದರೆ, ಆಗಸ್ಟ್‌ನಿಂದ ಸುರಿದ ಭಾರಿ ಮಳೆಯಿಂದಾಗಿ ಜಲ ಮೂಲಗಳು ಜೀವ ಜಲದಿಂದ ನಳನಳಿಸುತ್ತಿವೆ. ಬೇಸಿಗೆಯ ದಿನಗಳು ಸಮೀಪಿಸುತ್ತಿರುವ ಈ ಸಂದರ್ಭದಲ್ಲೂ ಕೆರೆಗಳಲ್ಲಿ ನೀರು ಲಭ್ಯವಿರುವುದು ಆಶಾದಾಯಕ ಎನಿಸಿದೆ.

ADVERTISEMENT

34ರಲ್ಲಿ ನೀರಿಲ್ಲ:ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ 34 ಕೆರೆಗಳಲ್ಲಿ ನೀರಿಲ್ಲ. ಹೋದ ವರ್ಷ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಮಳೆಯಾದರೂ ಇಷ್ಟು ಪ್ರಮಾಣದ ಕೆರೆಗಳು ತುಂಬಿಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ. ಆ ಭಾಗದಲ್ಲಿ ನೀರನ್ನು ಹಿಡಿದಿಡುವುದಕ್ಕೆ ವ್ಯವಸ್ಥೆ ಇಲ್ಲದಿರುವುದು ಹಾಗೂ ಮಳೆಯ ನೀರು ಹರಿದು ಕೆರೆಯನ್ನು ಸೇರಲು ಇದ್ದ ಸಾಂಪ್ರದಾಯಿಕ ಕಾಲುವೆಗಳು ಒತ್ತುವರಿ ಮೊದಲಾದ ಸಮಸ್ಯೆಗಳಿಂದಾಗಿ ಮುಚ್ಚಿ ಹೋಗಿರುವುದು ಇದಕ್ಕೆ ಕಾರಣವಾಗಿದೆ. ಹೀಗಾಗಿ, ಮಳೆಯ ನೀರು ವ್ಯರ್ಥವಾಗಿ ಹರಿದು ಹೋಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದರಿಂದಾಗಿ ಆ ಭಾಗದಲ್ಲಿ ನೀರಿಗೆ ತೊಂದರೆಯಾಗಬಹುದು ಎಂದು ಅಂದಾಜಿಸಲಾಗಿದೆ.

‘ಹಿಂದಿನ ವರ್ಷ ಈ ಅವಧಿಯಲ್ಲಿ ಬಹಳಷ್ಟು ಕೆರೆಗಳಲ್ಲಿ ನೀರಿರಲಿಲ್ಲ. ಆದರೆ, ಹೋದ ವರ್ಷ ಉತ್ತಮ ಮಳೆಯಿಂದಾಗಿ ಈಗ ಬಹಳಷ್ಟು ಕೆರೆಗಳಲ್ಲಿ ನೀರು ಲಭ್ಯವಿದೆ. ಇದರಿಂದ ಆ ಭಾಗದ ಜನರಿಗೆ ಅನುಕೂಲವಾಗಲಿದೆ. ಕೃಷಿ ಚಟುವಟಿಕೆಗಳಿಗೂ ನೀರು ಲಭ್ಯವಾಗಲಿದೆ. ಕಡಿಮೆ ಮಳೆಯಾದ ಪ್ರದೇಶಗಳ ಕೆರೆಗಳಲ್ಲಿ ನೀರು ತುಂಬಿಲ್ಲ. ಕಳೆದ ವರ್ಷಗಳಿಗೆ ಹೋಲಿಸಿದರೆ ಬೈಲಹೊಂಗಲದಲ್ಲಿ 30 ಕೆರೆಗಳಲ್ಲಿ ಶೇ 51ರಿಂದ ಶೇ 99ರಷ್ಟು ನೀರಿರುವುದು ವಿಶೇಷವಾಗಿದೆ. ಕೆರೆಗಳು ತುಂಬಿರುವುದು ಆ ಭಾಗದಲ್ಲಿ ಅಂತರ್ಜಲ ಮಟ್ಟ ವೃದ್ಧಿಸುವುದಕ್ಕೂ ಪೂರಕವಾಗಿದೆ’ ಎಂದು ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ ಕೆ.ಸಿ. ಸತೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಲಾಖೆಯಿಂದ ಕೆರೆಗಳನ್ನು ತುಂಬಿಸುವ ಕಾಮಗಾರಿಯನ್ನೂ ಕೈಗೊಳ್ಳಲಾಗಿದೆ. ವಿವಿಧೆಡೆ 19 ಕೆರೆಗಳಿಗೆ ಸಮೀಪದ ನದಿಗಳಿಂದ ನೀರು ಹರಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.