ADVERTISEMENT

‘ಜನರ ಹಣ ಲೂಟಿ ಮಾಡಿ ಪರಾರಿಯಾದವರನ್ನು ಬಿಡುವುದಿಲ್ಲ’

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 14:39 IST
Last Updated 13 ಜೂನ್ 2019, 14:39 IST

ಬೆಳಗಾವಿ: ‘ಸಾವಿರಾರು ಕೋಟಿ ರೂಪಾಯಿ ಸಂಗ್ರಹಿಸಿ, ಜನರಿಗೆ ವಂಚಿಸಿರುವ ಐಎಂಎ (ಐ ಮಾನಿಟರಿ ಅಡ್ವೈಸರಿ) ಕಂಪನಿಯು ಸೇರಿದಂತೆ ಜನರ ಹಣ ಲೂಟಿ ಹೊಡೆದು ಬೇರೆ ದೇಶಕ್ಕೆ ಪರಾರಿಯಾದವರನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ತಿಳಿಸಿದರು.

ಇಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇಶದಲ್ಲಿ ಇಂತಹ ಅನೇಕ ಘಟನೆಗಳು ನಡೆದಿವೆ. ಈ ನೆಲದ ಕಾನೂನು ಕಠಿಣ ಕ್ರಮ ಕೈಗೊಳ್ಳಲಿದೆ. ಸರ್ಕಾರ ಕೂಡ ಕಠಿಣ ತೀರ್ಮಾನಕ್ಕೆ ಮುಂದಾಗಬೇಕು. ಹೊರ ದೇಶಕ್ಕೆ ಓಡಿ ಹೋದರೆಂದು ಬಿಡಲಾಗುವುದಿಲ್ಲ. ವಿದೇಶದಲ್ಲಿನ ಆಸ್ತಿಗಳನ್ನು ಜಪ್ತಿ ಮಾಡುವ ಕಾನೂನು ತಂದಿದ್ದೇವೆ. ದೇಶಕ್ಕೆ ಹಾನಿಯಾಗುವ ಯಾವುದೇ ಕೆಲಸದ ‌ವಿರುದ್ಧ ನರೇಂದ್ರ ಮೋದಿ ನೇತೃತ್ವದ ನಮ್ಮ ಸರ್ಕಾರ ಗಂಭೀರ ಕ್ರಮ ಕೈಗೊಳ್ಳುತ್ತದೆ’ ಎಂದು ಹೇಳಿದರು.

ಜಿಂದಾಲ್ ಕಂಪನಿಗೆ ರಾಜ್ಯ ಸರ್ಕಾರ ಸಾವಿರಾರು ಎಕರೆ ಭೂಮಿ ನೀಡುತ್ತಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ‘ನಮ್ಮ ನೆಲದ ಮಣ್ಣನ್ನು ಬೇರೆ ಕಡೆಗೆ ಕೊಡಬಾರದೆಂದು ಸಿದ್ದರಾಮಯ್ಯ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಹಿಂದೆ ಪ್ರತಿಭಟನೆ ನಡೆಸಿದ್ದರು. ಈಗ, ಅವರೇ ಜಿಂದಾಲ್‌ಗೆ ಭೂಮಿ ಕೊಡಲು ಮುಂದಾಗಿದ್ದಾರೆ. ಇದರಿಂದ, ರಾಜ್ಯದ ಬೊಕ್ಕಸಕ್ಕೆ ನಷ್ಟವಾಗುತ್ತದೆ. ರಾಜ್ಯದ ಜನರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಇದರ ವಿರುದ್ಧ ಬಿಜೆಪಿ ತೀವ್ರ ಹೋರಾಟ ನಡೆಸಲಿದೆ’ ಎಂದರು.

ADVERTISEMENT

‘ರೈಲ್ವೆ ವ್ಯವಸ್ಥೆ ಸುಧಾರಣೆಗೆ, ನಿಲ್ದಾಣಗಳಲ್ಲಿ ಹಾಗೂ ರೈಲುಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ರೈಲುಗಳ ಸಮಯಪಾಲನೆಗೂ ಮಹತ್ವ ನೀಡಲಾಗುವುದು. ಹೊಸ ರೈಲುಗಳನ್ನು ಆರಂಭಿಸಲಾಗುವುದು’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.