ಉಗರಗೋಳ (ಸವದತ್ತಿ ತಾ.): ‘ಮಾನವ ತನ್ನ ಸ್ವಾರ್ಥಕ್ಕಾಗಿ ಗಿಡ–ಮರಗಳನ್ನು ಕಡಿದು ಪರಿಸರ ಹಾಳು ಮಾಡುತ್ತಿದ್ದಾನೆ. ಇದರಿಂದ ಪ್ರಾಕೃತಿಕ ಅಸಮತೋಲನ ಉಂಟಾಗುತ್ತಿದೆ’ ಎಂದು ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಗೊರವಗುಂಡಗಿ ಗ್ರಾಮದ ವರಲಿಂಗೇಶ್ವರ ಸ್ವಾಮೀಜಿ ಹೇಳಿದರು.
ಸಮೀಪದ ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡದಲ್ಲಿ 600 ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಮನುಷ್ಯನಿಗೆ ಪರಿಸರದ ಕಾಳಜಿ ಇಲ್ಲದೆ ಇರುವುದರಿಂದ ಭೂತಾಯಿಯ ಮೇಲೆ ನಿರಂತರವಾಗಿ ಶೋಷಣೆ ನಡೆಯುತ್ತಿದೆ. ಇದರಿಂದಲೇ ಕೊರೊನಾದಂತಹ ರೋಗಗಳು ಬರುತ್ತಿವೆ. ಜನರ ಜೀವ ಬಲಿ ಪಡೆಯುತ್ತಿವೆ. ಪರಿಸರ ನಾಶ ಹೆಚ್ಚಾದರೆ ಜೀವ ಜಗತ್ತು ಉಳಿಯಲು ಸಾಧ್ಯವಿಲ್ಲ’ ಎಂದು ತಿಳಿಸಿದರು.
‘ಪ್ರತಿಯೊಬ್ಬರೂ ಸಸಿ ನೆಟ್ಟು ಪೋಷಿಸಿ, ಪರಿಸರಕ್ಕೆ ಕೊಡುಗೆ ನೀಡಬೇಕು’ ಎಂದರು.
ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ, ‘ನಗರೀಕರಣದ ಪ್ರವಾವದಿಂದ ಪರಿಸರ ನಾಶವಾಗುತ್ತಿದೆ. ನೈಸರ್ಗಿಕ ಸಂಪತ್ತು, ಜೀವ ಸಂಕುಲಗಳಿಗೆ ಆಪತ್ತು ಬಂದಿದೆ. ಇದನ್ನು ತಡೆಯಲು ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಎಲ್ಲರೂ ನಿರ್ವಹಿಸಬೇಕು’ ಎಂದು ಹೇಳಿದರು.
ಎಎಸ್‌ಐ ಎಸ್.ಆರ್. ಗಿರಿಯಾಲ ಮಾತನಾಡಿದರು. ದೇವಸ್ಥಾನದ ಎಂಜಿನಿಯರ್ ಎಂ.ವಿ. ಮುಳ್ಳೂರ, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ನಾಗರತ್ನಾ ಚೋಳಿನ, ಅರವಿಂದ್ರ ಮಳಗೆ, ಆರ್.ಎಚ್. ಸವದತ್ತಿ, ಎಎಸ್‌ಐ ಎಸ್.ಆರ್. ಗಿರಿಯಾಲ, ಹೋಂ ಗಾರ್ಡ್ ಪಿಎಸ್‌ಐ ಕಿತ್ತೂರ, ಶೇಖಪ್ಪ ಚಿಮ್ಮಲಗಿ, ಕೃಷ್ಣಪ್ಪ ಸುಣಗಾರ, ಹನಮಂತ ಕೋಲಕಾರ, ಹನಮಂತ ಓಂಕಾರೇಪ್ಪಗೋಳ, ವಿಠಲ ಅಂಬಿಗೇರ, ವಿನೋದ ಮಡಿವಾಳರ, ಹನಮಂತ ಮಾದರ, ಮಹಾಂತೇಶ ಕುಂಟೋಜಿ, ನಾಗೇಶ ಚಿಗರಿ, ಪಂಡಿತ ಯಡೂರಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.