ADVERTISEMENT

ಜಲಾಶಯಗಳಿಗೆ ಸಿಗದ ‘ಬಾಗಿನ ಭಾಗ್ಯ’!

ಭರ್ತಿಯಾಗಿ ಎರಡು ತಿಂಗಳುಗಳೇ ಕಳೆದಿವೆ

ಎಂ.ಮಹೇಶ
Published 14 ಅಕ್ಟೋಬರ್ 2019, 7:53 IST
Last Updated 14 ಅಕ್ಟೋಬರ್ 2019, 7:53 IST
   

ಬೆಳಗಾವಿ: ಜಿಲ್ಲೆಯ ಜನರು, ಜಾನುವಾರುಗಳು, ಕೃಷಿ ಚಟುವಟಿಕೆಗಳಿಗೆ ಆಧಾರವಾಗಿರುವ ಜಲಾಶಯಗಳಿಗೆ ಈ ಬಾರಿ ಇನ್ನೂ ‘ಬಾಗಿನ ಭಾಗ್ಯ’ ದೊರೆತಿಲ್ಲ.

ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಿಂದಾಗಿ, ಪ್ರಮುಖ ಜಲಮೂಲಗಳಾದ ಹಿಡಕಲ್ ಹಾಗೂ ನವಿಲುತೀರ್ಥ ಜಲಾಶಯಗಳು ಭರ್ತಿಯಾಗಿವೆ. ಇದಾಗಿ ಬರೋಬ್ಬರಿ ಎರಡು ತಿಂಗಳುಗಳೇ ಕಳೆದಿವೆ. ಆದರೆ, ಅಧಿಕೃತವಾಗಿ ಬಾಗಿನ ಅರ್ಪಿಸುವ ಮತ್ತು ಪೂಜೆ ಸಲ್ಲಿಸುವ ಕೆಲಸವಾಗಿಲ್ಲ. ಹೋದ ವರ್ಷ ಹಿಡಕಲ್‌ ಜಲಾಶಯ ಭರ್ತಿಯಾಗಿದ್ದಾಗ ಆಗಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಮೇಶ ಜಾರಕಿಹೊಳಿ ಅವರು ಶಾಸಕ ಉಮೇಶ ಕತ್ತಿ ಹಾಗೂ ಸ್ಥಳೀಯ ಮುಖಂಡರೊಂದಿಗೆ ಬಾಗಿನ ಅರ್ಪಿಸಿದ್ದರು.

ಜಲಾಶಯಗಳು ತುಂಬಿದಾಗ ಜಲಸಂಪನ್ಮೂಲ ಇಲಾಖೆಯಿಂದ ಬಾಗಿನ ಅರ್ಪಿಸುವುದು,ಆ ಭಾಗದ ಜನರ ಒಳಿತಿಗಾತಿ ಪ್ರಾರ್ಥಿಸುವುದು, ಗಂಗೆ ಪೂಜೆ ಮಾಡುವುದು ವಾಡಿಕೆ. ಇದನ್ನು ಜಿಲ್ಲಾ ಉಸ್ತುವಾರಿ ಸಚಿವರು ನೆರವೇರಿಸುತ್ತಿದ್ದರು. ಆದರೆ, ಈ ಬಾರಿ ಈ ಪ್ರಕ್ರಿಯೆ ನಡೆದಿಲ್ಲ. ಅಲ್ಲದೇ, ಕಾರ್ಯಕ್ರಮ ಯಾವಾಗ ನಡೆಯಲಿದೆ ಎನ್ನುವ ಮಾಹಿತಿಯೂ ಇಲ್ಲವಾಗಿದೆ.

ADVERTISEMENT

ನದಿಗಳಿಗೆ ನೀರು ಬಿಡಲಾಗಿತ್ತು:

ಘಟಪ್ರಭಾ ನದಿಗೆ ಹಿಡಕಲ್‌ ಬಳಿ (ರಾಜಾ ಲಖಮಗೌಡ ಜಲಾಶಯ) ಹಾಗೂ ಮಲಪ್ರಭಾ ನದಿಗೆ ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಬಳಿ ಜಲಾಶಯ (ರೇಣುಕಾ) ನಿರ್ಮಿಸಲಾಗಿದೆ. ಮುಂಗಾರು ಹಂಗಾಮು ಆರಂಭವಾಗಿ ತಿಂಗಳು ಕಳೆದಿದ್ದರೂ ಮಳೆ ಚುರುಕಾಗಿರಲಿಲ್ಲ. ಹೀಗಾಗಿ, ನೀರಿನ ಮಟ್ಟ ಅಷ್ಟೇನೂ ಏರಿಕೆಯಾಗಿರಲಿಲ್ಲ. ಆದರೆ, ಆಗಸ್ಟ್‌ ಮೊದಲ ವಾರದಲ್ಲಿ ಧಾರಾಕಾರ ಮಳೆಯಿಂದಾಗಿ ಈ ಜಲಮೂಲಗಳು ಒಡಲು ಭರ್ತಿಯಾದವು. ನದಿಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಹೊರಬಿಟ್ಟಿದ್ದರಿಂದ, ಪ್ರವಾಹವೂ ಉಂಟಾಗಿತ್ತು.

ನವಿಲುತೀರ್ಥ ಜಲಾಶಯ 37.731 ಟಿ.ಎಂ.ಸಿ ಅಡಿಗಳಷ್ಟು ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಇದರ ಗರಿಷ್ಠ ಮಟ್ಟ 2079.50 ಅಡಿಗಳು. ಪ್ರತಿ ವರ್ಷ 9 ಅಡಿ ಟಿಎಂಸಿ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸಲಾಗುತ್ತದೆ. ಇಲ್ಲಿಂದ ಹುಬ್ಬಳ್ಳಿ–ಧಾರವಾಡ, ಸವದತ್ತಿ, ರಾಮದುರ್ಗ, ಬಾದಾಮಿ, ರೋಣ, ನವಲಗುಂದ, ಅಣ್ಣಿಗೇರಿ ಮತ್ತು ಕುಂದಗೋಳ ಪಟ್ಟಣಗಳಿಗೆ ನೀರು ಪೂರೈಸಲಾಗುತ್ತದೆ. 2018ರಲ್ಲಿ ಇದು ಶೇ 70ರಷ್ಟು ಮಾತ್ರ ಭರ್ತಿಯಾಗಿತ್ತು. ನಿರ್ಮಾಣವಾದ ಬಳಿಕ 1998, 2005, 2006, 2007, 2009 ಮತ್ತು 2012ರಲ್ಲಿ ಮಾತ್ರ ಭರ್ತಿಯಾಗಿತ್ತು. ಅಂದರೆ 7 ವರ್ಷಗಳ ಬಳಿಕ ಸಂಪೂರ್ಣ ತುಂಬಿದೆ.

ಇನ್ನೂ ಹಲವು ಇವೆ:

ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಬಳಿ ಘಟಪ್ರಭಾ ನದಿಗೆ ನಿರ್ಮಿಸಿರುವ ಜಲಾಶಯ 51 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಇದರ ಗರಿಷ್ಠ ಮಟ್ಟ 2175 ಅಡಿಗಳು. ಇಲ್ಲಿಂದ ಬೆಳಗಾವಿ ನಗರ, ಸಂಕೇಶ್ವರ, ಹುಕ್ಕೇರಿ, ಗೋಕಾಕ ಮೊದಲಾದ ಕಡೆಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತದೆ.

ಇದಲ್ಲದೇ, ಯಮಕನಮರಡಿ ಸಮೀಪದ ಮಾರ್ಕಂಡೇಯ (ಶಿರೂರು ಡ್ಯಾಂ) ಜಲಾಶಯ, ಬೈಲಹೊಂಗಲ ತಾಲ್ಲೂಕಿನ ತಿಗಡಿಯ ಹರಿನಾಲಾ ಜಲಾಶಯ, ಬೆಳಗಾವಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಮೂಲಗಳಲ್ಲಿ ಒಂದಾಗಿರುವ ತಾಲ್ಲೂಕಿನ ರಕ್ಕಸಕೊಪ್ಪ ಜಲಾಶಯ ಭರ್ತಿಯಾಗಿದೆ. ಇವುಗಳಿಗೂ ಬಾಗಿನ ಭಾಗ್ಯ ಸಿಕ್ಕಿಲ್ಲ. ಹೋದ ವರ್ಷ ಶಾಸಕ ಅನಿಲ ಬೆನಕೆ ರಕ್ಕಸಕೊಪ್ಪ ಜಲಾಶಯಕ್ಕೆ ಬಾಗಿನ ಸಲ್ಲಿಸಿದ್ದರು.

ಪ್ರತಿಕ್ರಿಯೆಗೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಲಭ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.