ADVERTISEMENT

ಖಾನಾಪುರ | ಅಶೋಕನಗರ ಬಳಿ ಕಾಡಾನೆಗಳಿಂದ ಬೆಳೆಹಾನಿ: ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 2:39 IST
Last Updated 21 ಡಿಸೆಂಬರ್ 2025, 2:39 IST
ಖಾನಾಪುರ ತಾಲ್ಲೂಕಿನ ಅಶೋಕನಗರ ಗ್ರಾಮದ ಬಳಿ ಕಾಡಾನೆಗಳು ಮುರಿದು ಹಾಕಿರುವ ಬಾಳೆ ತೋಟದಲ್ಲಿ ಉಂಟಾಗಿರುವ ಬೆಳೆಹಾನಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿದರು.
ಖಾನಾಪುರ ತಾಲ್ಲೂಕಿನ ಅಶೋಕನಗರ ಗ್ರಾಮದ ಬಳಿ ಕಾಡಾನೆಗಳು ಮುರಿದು ಹಾಕಿರುವ ಬಾಳೆ ತೋಟದಲ್ಲಿ ಉಂಟಾಗಿರುವ ಬೆಳೆಹಾನಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿದರು.   

ಖಾನಾಪುರ: ತಾಲ್ಲೂಕಿನ ನೇರಸೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಶೋಕನಗರ ಗ್ರಾಮದ ಹೊರವಲಯದ ಕೃಷಿ ಜಮೀನುಗಳಲ್ಲಿ ಎರಡು ದಿನಗಳಿಂದ ಕಾಡಾನೆಗಳ ಹಿಂಡು ಕಾಣಿಸಿಕೊಂಡು ಆತಂಕ ನಿರ್ಮಾವಾಗಿದೆ.

ಆನೆಗಳು ರಾತ್ರಿ ಹೊತ್ತು ಹೊಲಗಳಲ್ಲಿ ಸಂಚರಿಸಿ ಬೆಳೆಹಾನಿ ಮಾಡುತ್ತಿವೆ ಎಂದು ಗ್ರಾಮದ ರೈತ ರಾಮಪ್ಪ ಸಾತಪ್ಪ ಮಸ್ತಿ ಹಾಗೂ ಇತರರು ಹೇಳಿದ್ದಾರೆ.

ಕಾಡಾನೆಗಳು ಅಶೋಕನಗರ, ನೇರಸಾ, ಮಂತುರ್ಗಾ, ತಿವೋಲಿ, ಅಬನಾಳಿ ಭಾಗದ ಕೃಷಿ ಭೂಮಿಗಳ ಸುತ್ತಮುತ್ತ ಕಾಣಿಸಿಕೊಂಡಿವೆ. ಕಾಡಾನೆಗಳು ನಮ್ಮ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ಬೇಕಾಬಿಟ್ಟಿ ತುಳಿದು ಹಾಳು ಮಾಡುತ್ತಿವೆ. ಆನೆಗಳ ಉಪಟಳಕ್ಕೆ ಕಟ್ಟಪಟ್ಟು ಬೆಳೆದಿರುವ ತೆಂಗು, ಬಾಳೆ, ಕಬ್ಬು, ಭತ್ತ ಹಾಗೂ ಇತರೆ ಬೆಳೆಗಳು ನೆಲಕಚ್ಚಿವೆ. ಆನೆಗಳು ಕೈಗೆ ಬಂದ ಬೆಳೆಗಳನ್ನು ತಿಂದು-ತುಳಿದು ಹಾಳು ಮಾಡುತ್ತಿವೆ ಎಂದು ಅಶೋಕನಗರ ಹಾಗೂ ಅಕ್ಕಪಕ್ಕದ ಗ್ರಾಮಗಳ ರೈತರು ದೂರಿದ್ದಾರೆ.

ADVERTISEMENT

ಲೋಂಡಾ ಅರಣ್ಯ ವಲಯ ವ್ಯಾಪ್ತಿಯ ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ಕಾಣಿಸಿಕೊಂಡ ಆನೆಗಳು ಕೃಷಿ ಜಮೀನುಗಳಲ್ಲಿ ನುಗ್ಗಿ ದಾಂಧಲೆ ಎಬ್ಬಿಸಿರುವ ಸಂಗತಿ ಇಲಾಖೆಯ ಗಮನಕ್ಕೆ ಬಂದಿದೆ. ಆನೆಗಳು ಸಂಚರಿಸಿ ಬೆಳೆಹಾನಿ ಮಾಡಿದ ಸ್ಥಳಗಳಿಗೆ ನಮ್ಮ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ಇಲಾಖೆಯಿಂದ ಆನೆಗಳ ಚಲನವಲನದ ಮೇಲೆ ನಿಗಾ ವಹಿಸಲಾಗಿದೆ. ಅರಣ್ಯ ಇಲಾಖೆಯಿಂದ ರೈತರಿಗೆ ಕಾಡಾನೆಗಳಿಂದ ಉಂಟಾಗುವ ಬೆಳೆಹಾನಿಯ ಪರಿಹಾರವನ್ನು ಒದಗಿಸಲಾಗುತ್ತದೆ. ಜೊತೆಗೆ ರೈತರಿಗೆ ತೊಂದರೆ ನೀಡುತ್ತಿರುವ ಕಾಡಾನೆಗಳನ್ನು ಮರಳಿ ಅರಣ್ಯಕ್ಕೆ ಅಟ್ಟುವ ಪ್ರಯತ್ನವನ್ನು ಮಾಡಲಾಗುತ್ತದೆ. ಅಲ್ಲಿಯವರೆಗೆ ರೈತರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಲೋಂಡಾ ವಲಯ ಅರಣ್ಯಾಧಿಕಾರಿ ವೈ.ಪಿ ತೇಜ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.