ADVERTISEMENT

ಬೆಳಗಾವಿ: ಖಾಸಗಿ ಸಗಟು ತರಕಾರಿ ಮಾರುಕಟ್ಟೆ ವಿರುದ್ಧ ಹೋರಾಟ

​ಪ್ರಜಾವಾಣಿ ವಾರ್ತೆ
Published 7 ಜನವರಿ 2022, 13:43 IST
Last Updated 7 ಜನವರಿ 2022, 13:43 IST

ಬೆಳಗಾವಿ: ‘ಇಲ್ಲಿನ ಗಾಂಧಿ ನಗರದ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ–4ರ ಸಮೀಪ ಜೈಕಿಸಾನ್‌ ಸಗಟು ತರಕಾರಿ ಮಾರಾಟಗಾರರ ಸಂಘದಿಂದ ನಿರ್ಮಿಸಿರುವ ಖಾಸಗಿ ತರಕಾರಿ ಮಾರುಕಟ್ಟೆ ಅನಧಿಕೃತವಾಗಿದ್ದು, ಅದನ್ನು ರದ್ದುಪಡಿಸಲು ಆಗ್ರಹಿಸಿ ಹೋರಾಟ ಮುಂದುವರಿಸಲಾಗುವುದು’ ಎಂದು ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ಅಧ್ಯಕ್ಷ ಸಿದಗೌಡ ಮೋದಗಿ ತಿಳಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಈ ಮಾರುಕಟ್ಟೆಗೆ ಅನುಮತಿ ನೀಡುವ ಮೂಲಕ ಕೃಷಿ ಮಾರಾಟ ಇಲಾಖೆ ನಿರ್ದೇಶಕ ಕರಿಗೌಡ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಅವರೊಂದಿಗೆ ಇಲ್ಲಿನ ಸಂಬಂಧಿಸಿದ ಅಧಿಕಾರಿಗಳು ಕೈಜೋಡಿಸಿದ್ದಾರೆ’ ಎಂದು ದೂರಿದರು.

‘ಅಧಿಕಾರಿಗಳು ನಿಯಮಗಳನ್ನು ಮೀರಿ, ದಾಖಲೆಗಳನ್ನು ತಿರುಚಿ ಮನಬಂದಂತೆ ವರ್ತಿಸಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೂ ಹಾನಿ ಉಂಟಾಗಲು ಕಾರಣವಾಗಿದ್ದಾರೆ. ಫಲವತ್ತಾದ ಜಮೀನನ್ನು ಭೂಪರಿವರ್ತನೆ ಮಾಡುವಲ್ಲಿ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಕಾರ್ಯಾಲಯದವರೂ ಕೈಜೋಡಿಸಿದ್ದಾರೆ. ಎಲ್ಲ ಹಂತಗಳಲ್ಲೂ ಭ್ರಷ್ಟಾಚಾರ ನಡೆದಿರುವುದು ಕಂಡುಬಂದಿದೆ’ ಎಂದು ಆರೋಪಿಸಿದರು.

ADVERTISEMENT

‘ಈ ಎಲ್ಲ ವಿಷಯಗಳ ಕುರಿತು ಚರ್ಚಿಸಲು ಜ.11ರಂದು ಜಿಲ್ಲಾಧಿಕಾರಿ ಸಭೆ ಕರೆದಿದ್ದಾರೆ. ಅಲ್ಲಿ, ತಹಶೀಲ್ದಾರ್‌, ಬುಡಾ, ಪಾಲಿಕೆ, ಹೆಸ್ಕಾಂ, ಕೃಷಿ ಮಾರಾಟ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರು, ನಿರ್ದೇಶಕರು, ಕಾರ್ಯದರ್ಶಿ, ಭೂ ದಾಖಲೆಗಳ ಇಲಾಖೆಯವರು, ಉಪ ನೋಂದಣಾಧಿಕಾರಿ ಮೊದಲಾದವರು ಕಡ್ಡಾಯವಾಗಿ ಭಾಗವಹಿಸುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಬೇಕು’ ಎಂದು ಒತ್ತಾಯಿಸಿದರು.

‘ಸಭೆಗೂ ಮುನ್ನ ಎಪಿಎಂಸಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ, ಸರ್ಕಾರದ ಗಮನಸೆಳೆಯಲಾಗುವುದು’ ಎಂದರು.

‘ಭ್ರಷ್ಟಾಚಾರದ ವಿರುದ್ಧ ನಡೆಯುತ್ತಿರುವ ಈ ಹೋರಾಟಕ್ಕೆ ಎಲ್ಲ ಸಂಘಟನೆಗಳವರೂ ಕೈಜೋಡಿಸಬೇಕು. ಸರ್ಕಾರದ ಬೊಕ್ಕಸಕ್ಕೆ ಹಾನಿ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವವರೆಗೂ ಮತ್ತು ಮಾರುಕಟ್ಟೆ ರದ್ದುಪಡಿಸುವವರೆಗೂ ಹೋರಾಟ ನಿಲ್ಲಿಸುವುದಿಲ್ಲ’ ಎಂದು ತಿಳಿಸಿದರು.

‘ಎಪಿಎಂಸಿ ಕಾಯ್ದೆಗೆ ತಂದಿದ್ದ ತಿದ್ದುಪಡಿಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆದಿದೆ. ಹೀಗಾಗಿ, ಆಗಿನ ನಿಯಮಗಳೆಲ್ಲವೂ ಅಮಾನ್ಯವಾಗುತ್ತದೆ. ಸರ್ಕಾರಿ ಮಾರುಕಟ್ಟೆ ಇದ್ದರೂ ಖಾಸಗಿಯವರು ನಿರ್ಮಿಸಲು ಅವಕಾಶ ಕೊಟ್ಟಿರುವುದು ಸರಿಯಲ್ಲ’ ಎಂದರು.

ಮುಖಂಡ ರಾಜಕುಮಾರ ಟೋಪಣ್ಣವರ, ‘ಹೆದ್ದಾರಿ ಬದಿಯಲ್ಲಿ ಮಾರುಕಟ್ಟೆ ನಿರ್ಮಿಸಿರುವುದರಿಂದ ವಾಹನಗಳ ಸಂಚಾರಕ್ಕೂ ತೊಂದರೆ ಆಗುತ್ತದೆ’ ಎಂದು ತಿಳಿಸಿದರು.

ಮುಖಂಡರಾದ ಅರುಣ ಕಟಾಂಬಳೆ, ಸುಜಿತ್ ಮುಳಗುಂದ, ಬಸನಗೌಡ ಪಾಟೀಲ, ಸತೀಶ ಪಾಟೀಲ, ಮಾಣಿಕ ಹೊನಗೇಕರ, ಶಿವಲೀಲಾ ಮಿಸಾಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.