ADVERTISEMENT

ಶಾಸಕ ಸ್ಥಾನಕ್ಕೂ ರಾಜೀನಾಮೆಗೆ ರಮೇಶ ಜಾರಕಿಹೊಳಿ ನಿರ್ಧಾರ: ವದಂತಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2021, 11:47 IST
Last Updated 20 ಜೂನ್ 2021, 11:47 IST
ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ   

ಬೆಳಗಾವಿ: ಜಿಲ್ಲೆಯ ಗೋಕಾಕ ಮತಕ್ಷೇತ್ರದ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂಬ ವದಂತಿ ಭಾನುವಾರ ದಟ್ಟವಾಗಿ ಹರಡಿದೆ.

‘ಸಿ.ಡಿ. ಪ್ರಕರಣದಲ್ಲಿ ತಮ್ಮ ಮೇಲೆ ಆರೋಪ ಬಂದು ಹಲವು ತಿಂಗಳುಗಳೇ ಕಳೆದರೂ ಪಾರು ಮಾಡುವ ನಿಟ್ಟಿನಲ್ಲಿ ಬಿಜೆಪಿ ನಾಯಕರು ಆಸಕ್ತಿ ತೋರಿಸುತ್ತಿಲ್ಲ. ತಮ್ಮೊಂದಿಗೆ ಇದ್ದವರೇ ಷಡ್ಯಂತ್ರ ರೂಪಿಸಿ ಸಂಕಷ್ಟಕ್ಕೆ ಸಿಲುಕಿಸಿದರು. ಸಚಿವ ಸ್ಥಾನ ಕಳೆದುಕೊಳ್ಳುವಂತೆ ಮಾಡಿದರು ಎಂದು ನೊಂದಿದ್ದಾರೆ’ ಎನ್ನಲಾಗಿದೆ.

‘ಜೆಡಿಎಸ್–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾಗಿ, ಬಿಜೆಪಿ ಅಧಿಕಾರಕ್ಕೆ ಬರಲು ಶ್ರಮಿಸಿದ ನನ್ನನ್ನು ಕಡೆಗಣಿಸಲಾಗಿದೆ. ಹೀಗಾಗಿ, ಅನಿರೀಕ್ಷಿತ ನಿರ್ಧಾರಕ್ಕೆ ಬರಬೇಕಾಗಿದೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಪಕ್ಷದ ವರಿಷ್ಠರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಆವರಿಗೆ ಸಂಪುಟಕ್ಕೆ ಮರು ಸೇರ್ಪಡೆ ಆಗಬೇಕೆಂಬ ಬಯಕೆ ಇದೆ. ಇದಕ್ಕೆ ಪಕ್ಷದಿಂದ ಸ್ಪಂದನೆ ಸಿಗದಿರುವುದರಿಂದ ಬೇಸರಗೊಂಡಿರುವುದು ನಿಜ. ಈ ನಿಟ್ಟಿನಲ್ಲಿ ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಡುವುದಾಗಿ ಹೇಳಿ ಒತ್ತಡ ಹಾಕುವ ಕಾರ್ಯತಂತ್ರವನ್ನೂ ಅವರು ಅನುಸರಿಸುತ್ತಿರಬಹುದು’ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದರು.

ಸಚಿವ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಬಗ್ಗೆ ಚರ್ಚೆಗಳು ಶುರುವಾಗಿರುವ ಸಂದರ್ಭದಲ್ಲೇ, ರಮೇಶ ತಮಗೆ ಆಪ್ತರಾದ ಕೆಲವು ಶಾಸಕರೊಂದಿಗೆ ಭಾನುವಾರ ಮುಂಬೈಗೆ ತೆರಳಿರುವುದು ಹಲವು ವಿಶ್ಲೇಷಣೆಗಳಿಗೆ ಎಡೆಮಾಡಿಕೊಟ್ಟಿದೆ.

ಅವರೊಂದಿಗೆ ಸಹೋದರ ಮತ್ತು ಕೆಎಂಎಫ್ ಅಧ್ಯಕ್ಷರೂ ಆಗಿರುವ ಬಾಲಚಂದ್ರ ಜಾರಕಿಹೊಳಿ ಮತ್ತು ಅಥಣಿ ಶಾಸಕ ಮಹೇಶ ಕುಮಟಳ್ಳಿ ಮೊದಲಾದವರು ಕೂಡ ಮುಂಬೈಗೆ ತೆರಳಿದ್ದಾರೆ. ಅಲ್ಲಿ ಪಕ್ಷದ ಕೆಲವು ಮುಖಂಡರನ್ನು ಭೇಟಿ ಆಗಲಿದ್ದಾರೆ. ಮಾತುಕತೆಯ ತಮಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ಫಲಪ್ರದವಾಗದಿದ್ದರೆ ನೇರವಾಗಿ ಬೆಂಗಳೂರಿಗೆ ಬಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗುತ್ತಿದೆ.

ತಮ್ಮ ಪುತ್ರ, ಕೆಎಂಎಫ್‌ ನಿರ್ದೇಶಕರಾಗಿರುವ ಅಮರನಾಥ ಜಾರಕಿಹೊಳಿ ಅವರನ್ನು ಗೋಕಾಕದಲ್ಲಿ ಕಣಕ್ಕಿಳಿಸುವ ಯೋಜನೆಯೂ ಅವರದಾಗಿದೆ ಎಂದು ತಿಳಿದುಬಂದಿದೆ.

ಪ್ರತಿಕ್ರಿಯೆಗೆ ರಮೇಶ ಲಭ್ಯವಾಗಲಿಲ್ಲ. ಅವರ ಮೊಬೈಲ್‌ ಫೋನ್‌ ಸ್ವಿಚ್ಡ್ಆಫ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.