ADVERTISEMENT

ರಾಮ ಜನ್ಮಭೂಮಿ ಹೋರಾಟ ಸ್ಮರಿಸಿದ ಆರ್‌ಎಸ್‌ಎಸ್‌ ಮುಖಂಡ ಕೃಷ್ಣ ಭಟ್‌

ಶ್ರೀಕಾಂತ ಕಲ್ಲಮ್ಮನವರ
Published 9 ನವೆಂಬರ್ 2019, 12:21 IST
Last Updated 9 ನವೆಂಬರ್ 2019, 12:21 IST
ಕೃಷ್ಣ ಭಟ್‌
ಕೃಷ್ಣ ಭಟ್‌   

ಬೆಳಗಾವಿ: ‘ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಬೇಕೆಂದು ಹಲವು ದಶಕಗಳಿಂದ ನಾವು ನಡೆಸಿದ ಹೋರಾಟಕ್ಕೆ ಪ್ರತಿಫಲ ಸಿಕ್ಕಿದೆ. ಸುಪ್ರೀಂ ಕೋರ್ಟ್‌ ತೀರ್ಪು ನಮಗೆ ಅಷ್ಟೇ ಅಲ್ಲದೇ, ಎಲ್ಲ ಧರ್ಮೀಯರಿಗೂ ಸಮಾಧಾನವಾಗುವಂತಹ ತೀರ್ಪು ನೀಡಿದೆ’ ಎಂದು 1992ರಲ್ಲಿ ನಡೆದ ಅಡ್ವಾಣಿಯವರ ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದ, ಆರ್‌ಎಸ್‌ಎಸ್‌ ಹಾಗೂ ವಿಎಚ್‌ಪಿ ಮುಖಂಡ ಕೃಷ್ಣ ಭಟ್‌ ಹೇಳಿದರು.

ಸುಪ್ರೀಂ ಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ, ಬೆಳಗಾವಿ ಜಿಲ್ಲೆಯಲ್ಲಿ ನಡೆದ ರಾಮ ಮಂದಿರ ಆಂದೋಲನ ಕುರಿತು ‘ಪ್ರಜಾವಾಣಿ’ ಜೊತೆ ಅವರು ಮಾಹಿತಿ ಹಂಚಿಕೊಂಡರು.

‘ಹಲವು ದಶಕಗಳಿಂದ ಜಿಲ್ಲೆಯಲ್ಲಿ ಆರ್‌ಎಸ್‌ಎಸ್‌ ಸಕ್ರಿಯವಾಗಿತ್ತು. ಹಿಂದೂ ಸಂಸ್ಕೃತಿ ರಕ್ಷಣೆಗಾಗಿ ಸಾವಿರಾರು ಜನರು ಸಂಘಟನೆ ಸೇರಿಕೊಂಡಿದ್ದರು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವ ಉದ್ದೇಶದಿಂದ 1990ರ ಅವಧಿಯಲ್ಲಿ ಬಿಜೆಪಿಯ ಹಿರಿಯ ಮುಖಂಡ ಎಲ್‌.ಕೆ. ಅಡ್ವಾಣಿ ಅವರು ದೇಶದಾದ್ಯಂತ ವಿವಿಧ ಮಾರ್ಗಗಳ ಮೂಲಕ ರಥಯಾತ್ರೆ ಹೊರಡಿಸಿದ್ದರು. ಇದು ಬೆಳಗಾವಿಯಲ್ಲೂ ಸಂಚರಿಸಿತ್ತು’

ADVERTISEMENT

‘ಇಲ್ಲಿನ ಖಡೇ ಬಜಾರ್‌, ಮಾರುತಿ ಗಲ್ಲಿ, ಕಿರ್ಲೋಸ್ಕರ್‌ ರೋಡ್‌, ಕಾಲೇಜ್‌ ರೋಡ್‌, ಕಿತ್ತೂರು ರಾಣಿ ಚನ್ನಮ್ಮ ವೃತ್ತ ಸೇರಿದಂತೆ ನಗರದ ಎಲ್ಲ ಪ್ರಮುಖ ಬೀದಿಗಳಲ್ಲಿ ಸಂಚರಿಸಿತ್ತು. ಸಾವಿರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮಂದಿರ ನಿರ್ಮಾಣಕ್ಕಾಗಿ ಪ್ರತಿ 10 ಸಾವಿರ ಜನರಿಗೆ ಒಂದು ಇಟ್ಟಿಗೆಯಂತೆ ನೂರಾರು ಇಟ್ಟಿಗೆಗಳನ್ನು ದೇವಸ್ಥಾನಗಳಲ್ಲಿ ಪೂಜೆ ಮಾಡಿ, ಕಳುಹಿಸಿಕೊಡಲಾಗಿತ್ತು. ಆರ್‌.ಎಸ್‌.ಎಸ್‌, ವಿಶ್ವ ಹಿಂದೂ ಪರಿಷತ್‌ ಸೇರಿದಂತೆ ಹಲವಾರು ಹಿಂದೂ ಸಂಘಟನೆಗಳು ಇದಕ್ಕೆ ಸಾಥ್‌ ನೀಡಿದ್ದವು’ ಎಂದರು.

‘ರಾಜ್ಯದ ಹುಮನಾಬಾದ್‌ನಲ್ಲಿ ಅಡ್ವಾಣಿ ಅವರ ಭಾಷಣ ಏರ್ಪಡಿಸಲಾಗಿತ್ತು. ಅಲ್ಲಿಗೆ ಬೆಳಗಾವಿಯಿಂದ ನೂರಾರು ಜನರ ಜೊತೆ ಹೋಗಿದ್ದೇವು. ಅಡ್ವಾಣಿ ಅವರ ಭಾಷಣ ನಮ್ಮಲ್ಲಿ ಹೊಸ ಹುರುಪು ತುಂಬಿತ್ತು. ರಾಮ ಮಂದಿರ ನಿರ್ಮಿಸಲು ಇಟ್ಟಿಗೆ ಕೂಡ ಕಳುಹಿಸಿಕೊಡಲಾಗಿತ್ತು. ಪ್ರತಿಯೊಬ್ಬರಿಂದ ದೇಣಿಗೆ ರೂಪದಲ್ಲಿ ₹ 1.25 ಸಂಗ್ರಹಿಸಿ, ನೀಡಲಾಗಿತ್ತು’ ಎಂದು ಹೇಳಿದರು.

‘ರಥಯಾತ್ರೆಯ ಜೊತೆ ನಾನು ಅಯೋಧ್ಯೆಗೆ ಹೋಗಿದ್ದೆ. ನನ್ನ ಜೊತೆ ಬೆಳಗಾವಿಯ ಅಚ್ಯುತ್‌ ಕುಲಕರ್ಣಿ, ಸಂಜಯ ಸವ್ವಾಷೇರಿ, ಸುರೇಶ ರಣಸುಭೆ, ಜ್ಞಾನದೇವ ಠಕ್ಕೇಕರ, ಲಕ್ಷ್ಮಿಕಾಂತ ಹೆಗಡೆ, ಮನೋಹರ ಕಡೋಲ್ಕರ್‌ ಸೇರಿದಂತೆ 20ರಿಂದ 25 ಯುವಕರೂ ಬಂದಿದ್ದರು’.

‘1992ರ ಡಿಸೆಂಬರ್‌ 6ರಂದು ಅಯೋಧ್ಯೆಯ ರಾಮಜನ್ಮ ಭೂಮಿಯಲ್ಲಿದ್ದ ಮಸೀದಿ ಧ್ವಂಸಗೊಂಡಾಗ ನಾವು ಅಲ್ಲಿಯೇ ಇದ್ದೇವು. ಲಕ್ಷಾಂತರ ಜನ ಕರಸೇವಕರು, ಸಾಧು– ಸಂತರು ಅಲ್ಲಿಗೆ ಬಂದಿದ್ದರು. ಸಾಗರದ ಅಲೆಗಳಂತೆ ಜನರು ಧಾವಿಸುತ್ತಿದ್ದರು. ‘ಜೈ ಶ್ರೀರಾಮ... ಜೈ ಶ್ರೀರಾಮ...’ ಘೋಷಣೆಗಳು ಮುಗಿಲು ಮುಟ್ಟಿದ್ದವು’ ಎಂದು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.